

ಮಂಡ್ಯ: ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಸಹಕಾರಿಯಾಗಬೇಕಾದ ಜಿಲ್ಲಾಮಟ್ಟದ ಯುವಜನೋತ್ಸವ ನಗರದಲ್ಲಿ ಪೊಲೀಸ್ ಭದ್ರತೆಯಲ್ಲಿ ನಡೆಯುವಂತಾಯಿತು. ಮಾತ್ರವಲ್ಲದೆ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದ ಆವರಣದಲ್ಲಿ ದೊಡ್ಡ ಹೈಡ್ರಾಮಾವೇ ನಡೆದುಹೋಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಯುವಜನೋತ್ಸವ ‘ಗದ್ದಲದ ಉತ್ಸವ’ವಾಗಿ ಬದಲಾವಣೆಗೊಂಡಿತು. ಪರ-ವಿರೋಧದ ಪ್ರತಿಭಟನೆಗಳಿಂದಾಗಿ ವಿದ್ಯಾರ್ಥಿಗಳು ಕೆಲಕಾಲ ಆತಂಕಕ್ಕೆ ಒಳಗಾಗುವಂತಾಯಿತು. ಇದಕ್ಕೆಲ್ಲ ಕಳಸವಿಟ್ಟಂತೆ ವೇದಿಕೆ ಕಾರ್ಯಕ್ರಮ ಹಾಗೂ ಪ್ರತಿಭಾ ಪ್ರದರ್ಶನ ಕಾಟಾಚಾರಕ್ಕೆ ನಡೆದಂತಿತ್ತು. ಪ್ರಮುಖವಾಗಿ ಇತಿಹಾಸದಲ್ಲಿ ಮೊದಲ ಬಾರಿಗೆ ಪೊಲೀಸ್ ಬಂದೋಬಸ್ತ್ ನಡುವೆ ಕಾರ್ಯಕ್ರಮ ನಡೆಯುವಂತಾಗಿದ್ದು ದುರಂತ.
ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ: ಯುವಜನೋತ್ಸವಕ್ಕೆ ಸಂಬಂಧಿಸಿದಂತೆ ಇಲಾಖೆಯ ಸಹಾಯಕ ನಿರ್ದೇಶಕ ಓಂಪ್ರಕಾಶ್ ಜಿಲ್ಲೆಯ ಯುವ ಪ್ರಶಸ್ತಿ ಪುರಸ್ಕೃತರನ್ನು ಕಡೆಗಣಿಸಿದ್ದಾರೆಂದು ಆರೋಪಿಸಿ ಜಿಲ್ಲಾ ಯುವ ಪರಿಷತ್ ನೇತೃತ್ವದಲ್ಲಿ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು. ಕಲಾಮಂದಿರದ ಗೇಟ್‌ನ ಬಳಿ ಧರಣಿ ನಡೆಸಿ ಅಧಿಕಾರಿಯ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಓಂಪ್ರಕಾಶ್ ಆಡಳಿತದಲ್ಲಿ ಅವ್ಯವಹಾರ ನಡೆಸಿದ್ದು, ಯಾವುದೇ ಸಿದ್ಧತೆ ಮಾಡಿಕೊಳ್ಳದೆ, ಕಾಟಾಚಾರಕ್ಕೆ ಕಾರ್ಯಕ್ರಮ ಮಾಡುತ್ತಿದ್ದಾರೆ. ತರಾತುರಿಯಲ್ಲಿ ಯುವಜನೋತ್ಸವ ನಡೆಯುತ್ತಿದೆ. ಸ್ಥಳೀಯ ಯುವ ಕಲಾವಿದರಿಗೆ ಅನ್ಯಾಯ ಮಾಡಿದ್ದಾರೆ. ಯುವ ಪ್ರಶಸ್ತಿ ಪುರಸ್ಕೃತರು, ಯುವ ಸಂಘಟಕರನ್ನು ನಿರ್ಲಕ್ಷಿೃಸಿದ್ದಾರೆ. ಯುವಜನ ಚಟುವಟಿಕೆ ಸಂಪೂರ್ಣವಾಗಿ ನಿಷ್ಕ್ರಿಯವಾಗಿದ್ದು, ಮೇಲಧಿಕಾರಿ ಗಮನಕ್ಕೆ ತಂದಿದ್ದರೂ ಸಹ ಉದ್ಘಟತನದಿಂದ ವರ್ತಿಸುತ್ತಿದ್ದಾರೆ. ಕೂಡಲೇ ಅವರನ್ನು ಸೇವೆಯಿಂದ ಅಮಾನತು ಮಾಡಬೇಕೆಂದು ಒತ್ತಾಯಿಸಿದರು. ಪರಿಷತ್‌ನ ಅಧ್ಯಕ್ಷ ಕಾರಸವಾಡಿ ಮಹಾದೇವ್, ಮಂಗಲ ಲಂಕೇಶ್, ತಗ್ಗಳ್ಳಿ ಯಶೋಧಾ, ಸುಕನ್ಯಾ, ಅರುಣ, ಕೀಲಾರ ಸುರೇಶ್ ಇದ್ದರು.
ಅಧಿಕಾರ ಪರ ಮತ್ತೊಂದು ತಂಡ: ಇನ್ನೊಂದೆಡೆ ಓಂಪ್ರಕಾಶ್ ಪರ ಮತ್ತೊಂದು ತಂಡ ಪ್ರತಿಭಟನೆ ನಡೆಸಿತು. ಇಲಾಖೆಯಿಂದ ನಿರಂತರ ಸೌಲಭ್ಯ ಮತ್ತು ಅನುದಾನ ಪಡೆದು ಸ್ವ ಹಿತಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಓಂಪ್ರಕಾಶ್ ಪೋಲಿಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಇಲಾಖೆಗೆ ಬಂದಿದ್ದಾರೆ, ದಕ್ಷತೆಯಿಂದ ಕಾರ್ಯನಿರ್ವಹಿಸಿ ಸಾಕಷ್ಟು ಬದಲಾವಣೆಯನ್ನು ತಂದಿದ್ದು, ನಿಷ್ಕ್ರಿಯವಾಗಿದ್ದ ಯುವಜನ ಸಂಘಟನೆಗಳನ್ನು ಸಂಯೋಜನೆ ಮಾಡಿದ್ದು, ರೋಸ್ಟರ್ ನಿಯಮ ಪಾಲಿಸಿ ಹಲವರಿಗೆ ಹುದ್ದೆ ದೊರಕಿಸಿಕೊಟ್ಟಿದ್ದಾರೆ. ಕ್ರೀಡಾಪಟುಗಳಿಗೆ ಉತ್ತೇಜನ ನೀಡುತ್ತಿದ್ದು, ಕ್ರೀಡಾ ನಿಲಯ ಸುಧಾರಣೆಗೊಳಿಸಿ ಸೌಲಭ್ಯ ಕಲ್ಪಿಸಿದ್ದಾರೆ. ಯುವಜನ ಮತ್ತು ಕಲಾವಿದರನ್ನು ನಿರಂತರ ಪ್ರೋತ್ಸಾಹಿಸುತ್ತಿದ್ದಾರೆ. ಆದರೆ, ಉತ್ತಮ ಕೆಲಸ ಮಾಡಲು ಅಧಿಕಾರಿಗೆ ಬಿಡುತ್ತಿಲ್ಲ, ತಮಗೆ ಸಲ್ಲುತ್ತಿದ್ದ ಕಾರ್ಯಕ್ರಮ ಮತ್ತು ಸವಲತ್ತು ಕೈ ತಪ್ಪಿದ್ದರಿಂದ ವೈಯಕ್ತಿಕ ಹಿತಾಸಕ್ತಿಗಾಗಿ ಅಧಿಕಾರಿ ವಿರುದ್ಧ ಕುತಂತ್ರ ಮಾಡುತ್ತಿದ್ದಾರೆ. ಅಧಿಕಾರಿ ವಿರುದ್ಧ ಪ್ರತಿಭಟನೆ ಮಾಡುತ್ತಿರುವವರು ತಮ್ಮನ್ನು ಯಾವ ರೀತಿ ನಿರ್ಲಕ್ಷೃ ಮಾಡುತ್ತಿದ್ದಾರೆ ಎಂಬುದನ್ನು ಬಹಿರಂಗವಾಗಿ ಹೇಳಲಿ ಎಂದರು.
ಪ್ರತಿಭಟನೆಯಲ್ಲಿ ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ತಳಗವಾದಿ ನಾಗರಾಜ್, ಕ್ರಾಂತಿ ಸಿಂಹ, ಕುಮಾರ್ ಕೊಪ್ಪ, ಸಬ್ಬನಹಳ್ಳಿ ಕುಮಾರ್, ಹಿರಿಯ ಕಲಾವಿದ ಮುದ್ದಪ್ಪ, ಪೂಜಾ ಕುಣಿತ ಕಲಾವಿದ ಕಾರಸವಾಡಿ ದೇವರಾಜ್, ರಮಾನಂದ ಇದ್ದರು.
ಸಮಾಧಾನಪಡಿಸಿದ ಶಾಸಕ: ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕ ರವಿಕುಮಾರ್ ಗಣಿಗ, ಪ್ರತಿಭಟನಾ ನಿರತ ಜಿಲ್ಲಾ ಯುವ ಪರಿಷತ್ ಸದಸ್ಯರ ಜತೆ ಮಾತುಕತೆ ನಡೆಸಿ ಸಮಾಧಾನಿಸಿ ಕಲಾಮಂದಿರದ ಒಳಭಾಗಕ್ಕೆ ಕರೆದುಕೊಂಡು ಬಂದರು. ಆದರೆ, ಪ್ರತಿಭಟನಾಕಾರರು ಹೊರಗಡೆ ಹೋಗಿ ಬಾಗಿಲ ಬಳಿ ನಿಂತರು. ಕಾರ್ಯಕ್ರಮ ಆರಂಭವಾಗಿ ಓಂಪ್ರಕಾಶ್ ಸ್ವಾಗತ ಕೋರುತ್ತಿದ್ದಂತೆ ಧಿಕ್ಕಾರದ ಘೋಷಣೆ ಕೂಗಿ ಒಳನುಗ್ಗಲು ಮುಂದಾದಾಗ ಪೊಲೀಸರು ತಡೆದರು. ಮತ್ತೊಂದು ಬಾಗಿಲಲ್ಲಿ ನುಗ್ಗಿದಾಗ ಪ್ರತಿಭಟನಾನಿರತರನ್ನು ಪೊಲೀಸರು ಹೊರದಬ್ಬಿದರು.
ಕೊನೆಗೆ ಯುವಜನೋತ್ಸವ ಉದ್ಘಾಟಿಸಿದ ಶಾಸಕ, ಮಂಡ್ಯ ಜಿಲ್ಲೆಗೆ ಕೆಟ್ಟ ಹೆಸರು ಬರಬಾರದು ಎಂದು ನಾನು ಕಾರ್ಯಕ್ರಮಕ್ಕೆ ಬಂದಿದ್ದೇನೆ. ಎಲ್ಲ ಕಡೆ ಹೊಗಳು ಭಟ್ಟರು ಇರುತ್ತಾರೆ. ಆದರೆ, ಸರಿಯಾದ ದೃಢ ನಿರ್ಧಾರ ಕೈಗೊಳ್ಳಲು ಪಂಚೇಂದ್ರಿಯ ಕೆಲಸ ಮಾಡಬೇಕು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಲು ಮುಂದಾಗಬೇಕು. ಸಭಾಂಗಣದಲ್ಲಿ ಅರ್ಧ ಖಾಲಿ ಇರುವುದು ಅವಮಾನ ಎಂದು ಹೇಳಿದರು.
ಇದೀಗ ನಡೆಯುತ್ತಿರುವ ಯುವಜನೋತ್ಸವ ಸಾಂಕೇತಕವಾಗಿ ಆಚರಿಸಿ, ಯಾರಿಗೂ ಬಹುಮಾನ ನೀಡಬೇಡಿ. ಡಿ.23ರಂದು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಯುವಜನೋತ್ಸವವನ್ನು ಸಂಭ್ರಮದಿಂದ ಆಚರಿಸೋಣ, ನಾನೇ ಪೂರ್ವಭಾವಿ ಸಭೆಗೆ ಹೋಗುತ್ತೇನೆ. ಎಲ್ಲರೂ ಬರಲಿ, ಚರ್ಚೆ ನಡೆಸಿ ಎಲ್ಲರನ್ನು ಒಗ್ಗೂಡಿಸಿ ಯುವಜನೋತ್ಸವವನ್ನು ಆಚರಿಸೋಣ ಎಂದು ಹೇಳಿ ನಿರ್ಗಮಿಸಿದರು.