

ವಿಜಯವಾಣಿ ಸುದ್ದಿಜಾಲ ಬದಿಯಡ್ಕ
ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕಾಸರಗೋಡು ಉತ್ತರ ಮಲಬಾರ್ನ ಕೇಂದ್ರವಾಗಲು ಸಿದ್ಧತೆ ನಡೆಸುತ್ತಿದೆ. ಐತಿಹಾಸಿಕ ಕೋಟೆಗಳು, ಕಾಡುಗಳು, ಹಿನ್ನೀರು ಮತ್ತು ಸುಂದರ ಪ್ರಕೃತಿಯಿಂದ ಸುತ್ತುವರಿದಿರುವ ನದಿಗಳು ಹಾಗೂ ಮಣ್ಣಿನಲ್ಲಿ ಹುದುಗಿರುವ ತುಳು ಸಂಸ್ಕೃತಿಯ ಪ್ರವಾಸೋದ್ಯಮ ಸಾಮರ್ಥ್ಯವನ್ನು ಸೆರೆಹಿಡಿಯಲು ಪ್ರವಾಸೋದ್ಯಮ ಇಲಾಖೆ ನೇತೃತ್ವದಲ್ಲಿ ಜಿಲ್ಲೆಯಲ್ಲಿ ತುರ್ತು ಚಟುವಟಿಕೆಗಳನ್ನು ನಡೆಸಲಾಗುತ್ತಿದೆ.
ಯಾತ್ರಾಶ್ರೀ ಶುಭ ಪ್ರವಾಸಗಳ ಆಯೋಜನೆ: ಕಾಸರಗೋಡು ಜಿಲ್ಲೆಯ ಯಾತ್ರಾಶ್ರೀ ಸದಸ್ಯರು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಮಹಿಳಾ ಶಕ್ತಿ ಪ್ರದರ್ಶಿಸಿದ್ದಾರೆ. ಕುಟುಂಬಶ್ರೀ ಮಿಷನ್ ಸಹಯೋಗದೊಂದಿಗೆ ಜಾರಿಗೆ ತಂದ ಯೋಜನೆಯಲ್ಲಿ ಚೆಮ್ಮನಾಡ್, ಉದುಮ, ಪಳ್ಳಿಕ್ಕೆರೆ, ಈಸ್ಟ್ ಎಳೇರಿ, ಮಡಿಕೈ ಮತ್ತು ವಲಿಯಪರಂಬ ಪಂಚಾಯಿತಿಗಳ ಮಹಿಳೆಯರು ಈ ಯೋಜನೆಯನ್ನು ಮುನ್ನಡೆಸುತ್ತಿದ್ದಾರೆ. ಯೋಜನೆಯನ್ನು ಸ್ಥಳೀಯಾಡಳಿತ ಸಚಿವರು 2022ರ ಮೇನಲ್ಲಿ ಉದ್ಘಾಟಿಸಿದ್ದರು ಮತ್ತು ಮೊದಲ ಪ್ರವಾಸವನ್ನು ನವೆಂಬರ್ನಲ್ಲಿ ನಡೆಸಲಾಗಿತ್ತು. ಇಲ್ಲಿಯವರೆಗೆ ಜಿಲ್ಲೆಯ ಒಳಗೆ ಮತ್ತು ಹೊರಗೆ 100ಕ್ಕೂ ಹೆಚ್ಚು ಪ್ರವಾಸಗಳನ್ನು ನಡೆಸಿದ್ದಾರೆ. ಪ್ರವಾಸಗಳಿಗಾಗಿ ರಸ್ತೆ, ರೈಲು, ವಿಮಾನ ಮಾರ್ಗಗಳನ್ನು ಆಯ್ಕೆ ಮಾಡಲಾಗುತ್ತಿದೆ.
ವಿದ್ಯಾರ್ಥಿಗಳು, ಮಹಿಳೆಯರಿಗೆ ಮಾತ್ರ ಪ್ರವಾಸಗಳು, ಪುರುಷರಿಗೆ ಮಾತ್ರ ಪ್ರವಾಸಗಳು, ಕುಟುಂಬ ಪ್ರವಾಸಗಳು ಮುಂತಾದ ವಿವಿಧ ಗುಂಪುಗಳಿಗೆ ಪ್ರಯಾಣದ ಅನುಭವಗಳನ್ನು ಒದಗಿಸಲಾಗುತ್ತಿದೆ. ಬಿಆರ್ಡಿಸಿ ಮತ್ತು ಕುಟುಂಬಶ್ರೀ ಜಂಟಿಯಾಗಿ ಯಾತ್ರಾಶ್ರೀ ಎಂಬ ಪ್ರವಾಸ ಕಾರ್ಯಾಚರಣೆ ವಿಭಾಗ ರಚಿಸಿದ್ದು, ಈ ಪ್ರದೇಶದಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ.
ಪ್ರಯಾಣಿಕರಿಗೆ ಹೊಸ ಅನುಭವ ನೀಡುವ ಪೊಸಡಿಗುಂಪೆ ಯೋಜನೆಯ ಕೆಲಸ ಪ್ರಾರಂಭವಾಗಿದೆ. ಕಾಞಂಗಾಡ್ ಕೈಟ್ ಬೀಚ್, ನೀಲೇಶ್ವರ ಅಜಿಯಲ ಪ್ರವಾಸೋದ್ಯಮ ಯೋಜನೆ, ಚೆಂಬರಿಕೆ ಬೀಚ್ ಯೋಜನೆ ಮತ್ತು ಕಣ್ವತೀರ್ಥ ಯೋಜನೆ ಜಿಲ್ಲೆಯ ಪ್ರವಾಸೋದ್ಯಮ ವಲಯವನ್ನು ಬಲಪಡಿಸುತ್ತಿವೆ.
ಪಕ್ಷಿಗಳ ಸ್ವರ್ಗ ಕಿದೂರು ಗ್ರಾಮ
ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಜತೆಗೆ ಜಾರಿಗೆ ತರಲಾಗುತ್ತಿರುವ ಯೋಜನೆ ಪಕ್ಷಿಗಳ ಸ್ವರ್ಗವಾದ ಕಿದೂರು ಪಕ್ಷಿ ಗ್ರಾಮದ ಸಾಮರ್ಥ್ಯ ಬಳಸಿಕೊಂಡು ಶ್ರೀದಲ್ಲೇ ಸಾಕಾರಗೊಳ್ಳಲಿದೆ. ಯೋಜನೆಯ ಶೇ.98ರಷ್ಟು ಕೆಲಸ ಪೂರ್ಣಗೊಂಡಿದೆ. ಇಲ್ಲಿಯವರೆಗೆ ಕಿದೂರಿನಲ್ಲಿ 152ಕ್ಕೂ ಹೆಚ್ಚು ವಿವಿಧ ಜಾತಿಯ ಪಕ್ಷಿಗಳು ಕಂಡುಬಂದಿವೆ. ಅಳಿವಿನಂಚಿನಲ್ಲಿರುವ ಬೂದು ತಲೆಯ ಬುಲ್ಬುಲ್, ಬಿಳಿ ತಲೆಯ ಕ್ರೇನ್, ಸೀಕ್ರೆಸ್ಟ್, ಚೆರಕೋಳಿ ಮತ್ತು ಸ್ವೋರ್ಡ್ ಕ್ರೇನ್ ಸೇರಿದಂತೆ 38 ವಲಸೆ ಹಕ್ಕಿಗಳು ಕಂಡುಬಂದಿವೆ. ಪಶ್ಚಿಮ ಟ್ಟಗಳಲ್ಲಿ ಕಂಡುಬರುವ ಕೊಂಬಿನ ಗೂಬೆ, ಬೂದು ತಲೆಯ ಬುಲ್ಬುಲ್, ಗರುಡ ಚರಕಳಿ, ಪಾರಿವಾಳ ಇತ್ಯಾದಿ ಇಲ್ಲಿ ಕಂಡುಬರುತ್ತವೆ.
ಪ್ರವಾಸಿಗರಿಗೆ ಸೌಲಭ್ಯ
ಪಕ್ಷಿ ವೀಕ್ಷಕರು ಮತ್ತು ಸಂಶೋಧಕರು ಅನೇಕ ಸ್ಥಳಗಳಿಂದ ಇಲ್ಲಿಗೆ ಬರುತ್ತಿರುವುದರಿಂದ ಮತ್ತು ವಸತಿ ಸೌಲಭ್ಯಗಳನ್ನು ಸುಧಾರಿಸುವ ಅಗತ್ಯದಿಂದಾಗಿ ಪ್ರವಾಸಿಗರಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲು ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ನಿಂದ 60 ಲಕ್ಷ ರೂ. ವೆಚ್ಚದಲ್ಲಿ ಆಧುನಿಕ ವಸತಿ ನಿಲಯ ನಿರ್ಮಿಸಲಾಗಿದೆ. ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ವಾಸದ ಕೊಠಡಿಗಳು, ಸಭಾಂಗಣ, ಶೌಚಗೃಹಗಳು, ಅಡುಗೆ ಮನೆ ಮತ್ತು ಕಚೇರಿ ಕೊಠಡಿ ಹೊಂದಿರುವ ವಸತಿ ನಿಲಯದ ನಿರ್ವಾಣ ಪೂರ್ಣಗೊಂಡಿದೆ. 50 ಜನರಿಗೆ ವಸತಿ ನಿಲಯ ನಿರ್ಮಿಸಲಾಗಿದೆ.