

ಶಿವಮೊಗ್ಗ: ಬಗುರ್‌ಹುಕುಂ ಸಾಗುವಳಿ ಮಾಡುವ ರೈತರನ್ನು ಒಕ್ಕಲೆಬ್ಬಿಸಲು ಆರಂಭಿಸಿದ ರಾಜ್ಯ ಸರ್ಕಾರ, ಇದೀಗ ವಕ್ಫ್ ಬೋರ್ಡ್‌ನಿಂದ ರೈತರ ಜಮೀನು ಕಬಳಿಸಲು ಮುಂದಾಗಿರುವುದನ್ನು ಖಂಡಿಸಿ ನ. 4ರಿಂದ ಬಿಜೆಪಿ ತಾಲೂಕು ಮತ್ತು ಜಿಲ್ಲಾಮಟ್ಟದಲ್ಲಿ ವಕ್ಫ್ ಮತ್ತು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿದೆ ಎಂದು ಮಾಜಿ ಶಾಸಕ ಕೆ.ಬಿ.ಅಶೋಕ್ ನಾಯ್ಕ್ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ವಕ್ಫ್ ಕಾಯ್ದೆ ತಿದ್ದುಪಡಿಗೆ ಜಂಟಿ ಸಮಿತಿ ರಚಿಸಲು ಮುಂದಾಗಿದ್ದಾರೆ. ಜಂಟಿ ಸಮಿತಿ ರಚನೆಗೊಂಡ ತಕ್ಷಣವೇ ಸಚಿವ ಜಮೀರ್ ಅಹಮ್ಮದ್ ಖಾನ್ ಕ್ರಿಯಾಶೀಲರಾಗಿದ್ದು, ಎಲ್ಲ ಜಾಗವನ್ನು ವಕ್ಫ್ ಆಸ್ತಿ ಮಾಡಲು ಹೊರಟಿದ್ದಾರೆ. ರೈತರ ಮತ್ತು ಸರ್ಕಾರದ ಆಸ್ತಿ ರಕ್ಷಿಸಲು ಬಿಜೆಪಿ ಮುಂದಾಗಿದೆ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ತಾಲೂಕಿನ ಮತ್ತೋಡು ಸರ್ವೇ ನಂಬರ್ 124ರಲ್ಲಿ ಎರಡು ಎಕರೆ ಜಾಗ ಖಬರ್ ಸ್ಥಾನ ಮಾಡಲಾಗುತ್ತಿದೆ. ಈಗ ವಕ್ಫ್ ಆಸ್ತಿಯಾಗುತ್ತಿದೆ. ಹನಗವಾಡಿಯ ಖಬರ್ ಸ್ಥಾನ ವಕ್ಫ್ ಆಸ್ತಿಯಾಗಿದೆ. ಟ್ರಿಬ್ಯುನಲ್ನಲ್ಲಿ ವಕ್ಫ್ ಮಂಡಳಿ ತನ್ನ ಆಸ್ತಿ ಎಂದು ಹೇಳಲು ದಾಖಲಾತಿ ಬೇಡ, ಆದರೆ ಇದು ವಕ್ಫ್ ಆಸ್ತಿ ಅಲ್ಲ ಎನ್ನಲು ರೈತರ ಬಳಿ ದಾಖಲಾತಿ ಬೇಕಿದೆ. ಇದು ವಕ್ಫ್ ಕಾಯ್ದೆಯಾಗಿದೆ. ಇದು ದೇಶದ ದುರಂತ ಎಂದು ಬೇಸರ ವ್ಯಕ್ತಪಡಿಸಿದರು.
ಎಂಎಲ್‌ಸಿ ಡಿ.ಎಸ್.ಅರುಣ್, ಮಾಜಿ ಶಾಸಕ ಕೆ.ಜಿ.ಕುಮಾರಸ್ವಾಮಿ, ಪ್ರಮುಖರಾದ ರತ್ನಾಕರ್ ಶೆಣೈ, ಎಂ.ಬಿ.ಹರಿಕೃಷ್ಣ, ಶಿವರಾಜ್, ದೀನದಯಾಳ್ ಸುದ್ದಿಗೋಷ್ಠಿಯಲ್ಲಿದ್ದರು.