ಜಲ ಜೀವನ ಮಿಷನ್ ಕಾಮಗಾರಿ ತ್ವರಿತ ಪೂರ್ಣಗೊಳಿಸಿ...

Jaljeevan Lead
Published on

ಜಿಪಂ ಸಿಇಒ ಪ್ರತೀಕ್​ ಬಾಯಲ್​ ಸೂಚನೆ

ಸಮಿತಿಯ ಅಧಿಕಾರಿಗಳೊಂದಿಗೆ ಸಭೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಜಿಲ್ಲೆಯ ಗ್ರಾಮೀಣ ಭಾಗದ ಪ್ರತಿ ಮನೆಗೂ ನಲ್ಲಿ ನೀರು ಪೂರೈಸುವ ಜಲ ಜೀವನ ಮಿಷನ್​ ಕಾಮಗಾರಿ ಶೇ.92 ಪೂರ್ಣಗೊಂಡಿದ್ದು, ಬಾಕಿ ಉಳಿದ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಪಂ ಸಿಇಒ ಪ್ರತೀಕ್​ ಬಾಯಲ್​ ಸಂಬಂಧಿತ ಅಭಿಯಂತರರಿಗೆ ಸೂಚಿಸಿದರು.

ಉಡುಪಿಯ ಜಿಪಂನ ತಮ್ಮ ಕಚೇರಿ ಸಭಾಂಗಣದಲ್ಲಿ ಮಾ.14ರಂದು ಆಯೋಜಿಸಿದ್ದ ಜಿಲ್ಲಾ ನೀರು ಸರಬರಾಜು ಮತ್ತು ನೈರ್ಮಲ್ಯ ಮಿಷನ್​ ಸಮಿತಿ ಸಭೆಯಲ್ಲಿ ಮಾತನಾಡಿದರು.

2.47 ಲಕ್ಷ ಮನೆಗಳಿಗೆ ನಳ

ಜಿಲ್ಲೆಯಲ್ಲಿ ಗ್ರಾಮೀಣ ಭಾಗದ 2,47,000 ಮನೆಗಳಿಗೆ ಕುಡಿಯುವ ನೀರಿನ ನಳ ಸಂಪರ್ಕ ಕಲ್ಪಿಸುವ ಗುರಿಯಲ್ಲಿ ಈವರೆಗೆ 2,14,000 ಮನೆಗಳಿಗೆ ಸೌಲಭ್ಯ ಒದಗಿಸಲಾಗಿದೆ. ಬಾಕಿ ಉಳಿದ ಮನೆಗಳಿಗೆ ಶ್ರೀವಾಗಿ ಸೌಲಭ್ಯ ನೀಡಬೇಕು. ಯೋಜನೆಯಡಿ 525 ಕಾಮಗಾರಿಗಳನ್ನು 687.66 ಕೋ.ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ಈಗಾಗಲೇ 484 ಕಾಮಗಾರಿ ಮುಗಿದಿದೆ. ಬಾಕಿ 41 ಕಾಮಗಾರಿ ಪ್ರಗತಿಯಲ್ಲಿವೆ. 501.40 ಕೋಟಿ ರೂ. ವ್ಯಯಿಸಲಾಗಿದೆ ಎಂದರು.

ಸಭೆಯಲ್ಲಿ ನಗರಸಭಾ ಆಯುಕ್ತ ಡಾ. ಉದಯಕುಮಾರ್​ ಶೆಟ್ಟಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಅಭಿಯಂತ ಉದಯಕುಮಾರ್​, ಸಾಮಾಜಿಕ ಅರಣ್ಯ ವಿಭಾಗದ ಉಪ ಸಂರಕ್ಷಣಾಧಿಕಾರಿ ರವೀಂದ್ರಕುಮಾರ್​, ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಾಗಭೂಷಣ್​ ಉಡುಪ, ಅಂತರ್ಜಲ ನಿರ್ದೇಶನಾಲಯದ ಹಿರಿಯ ಭೂ ವಿಜ್ಞಾನಿ ದಿನಕರ್​ ಶೆಟ್ಟಿ, ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಳಂಬಿಸಿದರೆ ಗುತ್ತಿಗೆದಾರರಿಗೆ ದಂಡ ವಿಧಿಸಿ

Jaljeevan 2
ಯೋಜನೆಯಡಿ ಕಾಮಗಾರಿ ಕೈಗೊಳ್ಳಲು ಎಲ್ಲಿಯೂ ಯಾವುದೇ ಜಾಗದ ಸಮಸ್ಯೆ ಇಲ್ಲ. ಆದರೂ ಕಾಮಗರಿ ಪೂರ್ಣಗೊಂಡಿಲ್ಲ. ಕೆಲವು ತಾಂತ್ರಿಕ ಕಾರಣ ಹೇಳುತ್ತ ಸಮಯ ವ್ಯಯಿಸುವುದು ಸರಿಯಲ್ಲ. ನಿಗದಿತ ಕಾಲಾವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸದಿದ್ದರೆ ಗುತ್ತಿಗೆದಾರರಿಗೆ ದಂಡ ವಿಧಿಸಿ. ಕುಡಿಯುವ ನೀರು ಒದಗಿಸುವ ಕೆಲವು ನಳ ಸಂಪರ್ಕದ ಪೈಪ್​ಲೈನ್​ ಕಾಮಗಾರಿ ಪೂರ್ಣಗೊಂಡಿದೆ. ಆದರೆ, ಮೂಲಗಳಿಲ್ಲದೆ ನೀರು ಒದಗಿಸಲು ಆಗುತ್ತಿಲ್ಲ. ಸಮೀಪದಲ್ಲಿಯೇ ನೀರಿನ ಮೂಲ ವ್ಯವಸ್ಥೆ ಮಾಡಿ ನೀರು ಒದಗಿಸಬೇಕು. ಹೊಸದಾಗಿ ಬೋರ್ವೆಲ್​ ಅಳವಡಿಸುವಾಗ ಅವುಗಳಿಗೂ ಕಡ್ಡಾಯವಾಗಿ ಮಳೆ ನೀರು ಕೊಯ್ಲು ಅಳವಡಿಸಬೇಕು ಎಂದು ಸಿಇಒ ಪ್ರತೀಕ್​ ಬಾಯಲ್​ ಸೂಚನೆ ನೀಡಿದರು.

ಜಿಲ್ಲಾದ್ಯಂತ ಕುಡಿಯಲು ಯೋಗ್ಯವಾಗಿರುವ ಸ್ವಚ್ಛ ನೀರನ್ನೇ ಸರಬರಾಜು ಮಾಡಬೇಕು. ಎಲ್ಲಿಯೂ ಸಹ ಕಲುಷಿತ ನೀರು ಸರಬರಾಜು ಆಗದಂತೆ ಎಲ್ಲ ಕ್ರಮ ಕೈಗೊಳ್ಳಬೇಕು. ಕಳೆದ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದ ಗ್ರಾಮ ಗುರುತಿಸಿ, ಈ ಬಾರಿ ಸಮಸ್ಯೆ ಆಗದಂತೆ ಈಗಲೇ ಯೋಜನೆ ಸಿದ್ಧಗೊಳಿಸಬೇಕು. | ಪ್ರತೀಕ್​ ಬಾಯಲ್​. ಜಿಪಂ ಸಿಇಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net