

ಮಂಡ್ಯ: ನಗರದ ಒಳಾಂಗಣ ಸಂಕೀರ್ಣದ ಬಳಿಯ ವಾಲಿಬಾಲ್ ಕ್ರೀಡಾಂಗಣ ಸ್ಥಳದಲ್ಲಿ ಕನ್ನಡ ಭವನ ನಿರ್ಮಿಸುವ ನಿರ್ಧಾರವನ್ನು ಕೈಬಿಡಬೇಕು ಎಂದು ಜಿಲ್ಲಾ ವಾಲಿಬಾಲ್ ಸಂಸ್ಥೆಯ ಅಧ್ಯಕ್ಷ ಶಿವಲಿಂಗಯ್ಯ ಒತ್ತಾಯಿಸಿದರು.
ಕ್ರೀಡಾಂಗಣದ ಸ್ಥಳದಲ್ಲಿ ಕನ್ನಡ ಭವನ ನಿರ್ಮಿಸುವುದು ಸೂಕ್ತವಲ್ಲ. ಕ್ರೀಡಾ ಚಟುವಟಿಕೆಗಳನ್ನು ನಡೆಸಲು ಈ ಸ್ಥಳ ಅಗತ್ಯವಿದ್ದು, ತಮ್ಮ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ಆ ಸ್ಥಳದಲ್ಲಿ ವಾಲಿಬಾಲ್ ಕ್ರೀಡೆಗೆ ಸಂಬಂಧಿಸಿದಂತೆ ಮೂಲ ಸೌಲಭ್ಯ ಕಲ್ಪಿಸುವ ಕಾಮಗಾರಿಗೆ 2023ರಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಂದ ಭೂಮಿ ಪೂಜೆ ನಡೆದಿತ್ತು. ಇದಕ್ಕಾಗಿ 68 ಲಕ್ಷ ರೂ ಅನುದಾನ ಮೀಸಲಿಡಲಾಗಿತ್ತು. 28 ಲಕ್ಷ ರೂ ಅನುದಾನ ಬಿಡುಗಡೆಯಾಗಿ ಭೂಮಿ ಪೂಜೆ ನೆರವೇರುವ ಸಂದರ್ಭದಲ್ಲಿ ಹಲವು ತೊಡಕುಗಳಿಂದ ಕಾಮಗಾರಿ ನಡೆಯಲಿಲ್ಲ ಎಂದು ಹೇಳಿದರು.
ಇರುವ 36 ಗುಂಟೆ ಸ್ಥಳದಲ್ಲಿ 17 ಗುಂಟೆ ಕನ್ನಡ ಭವನಕ್ಕೆ ಉಳಿದ ಸ್ಥಳ ಕ್ರೀಡೆಗೆ ಎಂದು ಹೇಳಲಾಗುತ್ತಿದೆ. ಆದರೆ ಕಡಿಮೆ ಸ್ಥಳದಿಂದ ಕ್ರೀಡೆಯ ಅಭ್ಯಾಸಕ್ಕೆ ತೊಡಕಾಗಲಿದೆ. ನಗರದ 1 ಕಿ.ಮೀ ವ್ಯಾಪ್ತಿಯಲ್ಲಿ ಉತ್ತಮ ಸ್ಥಳವಿದ್ದು, ಪೂರಕವಾದ ಪಾರ್ಕಿಂಗ್ ವ್ಯವಸ್ಥೆಗೂ ಅನುಕೂಲಕರವಾಗಿರುವ ಜಾಗ ದೊರೆಯಲಿದೆ. ಅಂತ ಸ್ಥಳಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಮುಂದಾಗಬೇಕೆಂದು ಆಗ್ರಹಿಸಿದರು.
ಸಂಸ್ಥೆಯ ಕಾರ್ಯದರ್ಶಿ ಸೋಮಶೇಖರ್, ರೈತ ಮುಖಂಡ ಕೆ.ಬೋರಯ್ಯ, ಬಾಸ್ಕೆಟ್‌ಬಾಲ್ ಸಂಸ್ಥೆಯ ಕಾರ್ಯದರ್ಶಿ ಸತ್ಯ, ಜೂಡೋ ಸಂಸ್ಥೆಯ ಕಾರ್ಯದರ್ಶಿ ಜಿ.ಕುಬೇರ ನಾರಾಯಣ ಇದ್ದರು.