ರಾಜ್ಯದಲ್ಲಿ ಸಾಂಸ್ಕೃತಿಕ ನೀತಿ ಜಾರಿಯಾಗಲಿ: ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್ ಆಗ್ರಹ

District unit of Kannada Folk Parishad inaugurated Mandya
Published on

ಮಂಡ್ಯ: ರಾಜ್ಯದಲ್ಲಿ ಸಾಂಸ್ಕೃತಿಕ ನೀತಿ ಜಾರಿಗೆ ತರಬೇಕೆಂದು ಸರ್ಕಾರಕ್ಕೆ ವರದಿ ತಲುಪಿ ಬಹಳ ದಿನಗಳೇ ಅಗಿದೆ. ಜನಸಮುದಾಯದ ಸಾಂಸ್ಕೃತಿಕ ಹಿತದೃಷ್ಠಿಯಿಂದ ಆ ವರದಿಯನ್ನು ಜಾರಿಗೆ ತರಬೇಕೆಂದು ವಿಶ್ರಾಂತ ನ್ಯಾಯಮೂರ್ತಿ ಅರಳಿ ನಾಗರಾಜ್ ಆಗ್ರಹಿಸಿದರು.

ತಾಲೂಕಿನ ಕೆರಗೋಡು ಗ್ರಾಮಾಂತರ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಕನ್ನಡ ಜಾನಪದ ಪರಿಷತ್‌ನ ಜಿಲ್ಲಾ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ರಾಜಕಾರಣಿಗಳು ನೀತಿವಂತರಾಗಿದ್ದರೆ ಸಾಂಸ್ಕೃತಿಕ ನೀತಿ ಜಾರಿಗೆ ಬರುತ್ತಿತ್ತು. ಜನಪದ ವಿದ್ಯಾವಂತರೆಂದು ಕರೆಸಿಕೊಳ್ಳುವ ಜನರಿಂದ ಹುಟ್ಟಿದ್ದಲ್ಲ. ಜನಪದರ ಅನುಭವ ಮೌಖಿಕ ಪರಂಪರೆಯಿಂದ ಬಂದಿದ್ದು, ಜನರ ಸ್ವಯಂಸ್ಪೂರ್ತಿಯ ನುಡಿಭಾಷೆಯಾಗಿದೆ. ಇಂದಿನ ಮಕ್ಕಳು ನಾಳಿನ ಆಡಳಿತ ಚುಕ್ಕಾಣಿ ಹಿಡಿಯುವವರಾದ್ದರಿಂದ ಅವರ ಮುಂದೆ ಬದುಕಿನ ಸತ್ಯ ತಿಳಿಸುವ ಜನಪದರ ಶ್ರೀಮಂತ ಕಾವ್ಯಗಳನ್ನು ಕನ್ನಡ ಜನಪದ ಪರಿಷತ್ ಅಧ್ಯಕ್ಷರು ನಿಮ್ಮ ಮುಂದೆ ತಂದಿದ್ದಾರೆಂದು ತಿಳಿಸಿದರು.

ವಿದ್ಯಾರ್ಥಿಗಳು ಯಾವುದೇ ವಿಚಾರವನ್ನು ಆಲಿಸಿ, ಗ್ರಹಿಸಿ, ಅರ್ಥೈಸಿ, ಪಾಲಿಸಿ ಎಂಬ ಈ ನಾಲ್ಕು ಸೂತ್ರಗಳನ್ನು ಅನುಸರಿಸಿದಲ್ಲಿ ಮಾದರಿಯಾದ ಜೀವನ ನಡೆಸಬಹುದು. ನಮ್ಮ ಬದುಕು ಮತ್ತೊಬ್ಬರನ್ನು ಪ್ರೇರೇಪಿಸುವಂತೆ ಇರುತ್ತದೆ ಎಂದು ಸಲಹೆ ನೀಡಿದರು.

ಪರಿಷತ್‌ನ ರಾಜ್ಯಾಧ್ಯಕ್ಷ ಡಾ.ಎಸ್.ಬಾಲಾಜಿ ಮಾತನಾಡಿ, ಜನಪದ ಎಂಬುದು ತೊಟ್ಟಿಲಿನಿಂದ ಚಟ್ಟದವರೆಗೂ ಮನುಷ್ಯನ ಜತೆಗಿರುತ್ತದೆ. ಅನಕ್ಷರಸ್ಥರಿಂದ ಮೌಖಿಕ ಪರಂಪರೆಯಲ್ಲಿ ಹುಟ್ಟಿಕೊಂಡ ಗೀತೆಗಳೇ ಈ ಜನಪದ ಕಾವ್ಯ ಸಂಪತ್ತು. ಹುಟ್ಟಿದಾಗ ಸೂಲಗಿತ್ತಿಯನ್ನು ಸ್ಮರಿಸುವ, ಅಗಸನ ಮಡಿಯನ್ನು ನೆನೆಯುವ, ರಾಗಿಬೀಸುವಾಗ, ನಾಟಿ ಮಾಡುವಾಗ, ಮದುವೆ, ಮಳೆರಾಯನ ಕರೆಯುವಾಗ ಕೊನೆಗೆ ಸಾವಿನ ಮನೆಯಲ್ಲಿಯೂ ಜನಪದವಿದೆ. ಹಾಗಾಗಿ ಅದು ನಮ್ಮ ಸಂಸ್ಕೃತಿ ಮತ್ತು ತಾಯಿಬೇರಿದ್ದಂತೆ. ಪರಿಷತ್ ಕಾರ್ಯವನ್ನು ವಿಸ್ತರಿಸುವ ನಿಟ್ಟಿನಲ್ಲಿ ಈಗ ಮಂಡ್ಯ ಜಿಲ್ಲಾ ಘಟಕವನ್ನು ಉದ್ಘಾಟಿಸಲಾಗಿದೆ ಎಂದರು.

ನೂತನ ಜಿಲ್ಲಾಧ್ಯಕ್ಷ ಕೆ.ಎನ್.ವಿಜಯ್ ಕೊಪ್ಪ, ಕಾಲೇಜಿನ ಪ್ರಾಂಶುಪಾಲ ಎಸ್.ಕೆ.ಮಂಜುನಾಥ್, ರಾಮನಗರ ಜಿಲ್ಲಾಧ್ಯಕ್ಷ ಕೆ.ಸಿ.ಕಾಂತಪ್ಪ, ಕಲಾವಿದರಾದ ಸೋಬಾನೆ ಕೃಷ್ಣೇಗೌಡ, ಸ್ವಾಮಿಗೌಡ, ಸಾಕಮ್ಮ, ಮಧು ಕೀಲಾರ, ಚಿಂದಗಿರಿಗೌಡ, ಮುಖ್ಯಶಿಕ್ಷಕ ಎಚ್.ಎನ್.ಸಿದ್ದರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net