ಮಾ.೨೩ ರಂದು ಜಿಲ್ಲಾ ಘಟಕದ ಉದ್ಘಾಟನೆ

logo
Published on

ಮಡಿಕೇರಿ: ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ ಸಮಿತಿ ವತಿಯಿಂದ ಕನ್ನಡ ಭವನದ ಕೊಡಗು ಜಿಲ್ಲಾ ಘಟಕ ಹಾಗೂ ಕನ್ನಡ ಚುಟುಕು ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭ ಮಾ.೨೩ ರಂದು ಮಡಿಕೇರಿಯಲ್ಲಿ ನಡೆಯಲಿದೆ ಎಂದು ಕನ್ನಡ ಭವನದ ಜಿಲ್ಲಾಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಹಾಗೂ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷೆ ಎಂ.ಎ.ರುಬೀನಾ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಮಧ್ಯಾಹ್ನ ೨ ಗಂಟೆಗೆ ನಡೆಯುವ ಕಾರ್ಯಕ್ರಮವನ್ನು ಕನ್ನಡ ಭವನದ ಸ್ಥಾಪಕ ಸಂಚಾಲಕ ಡಾ.ವಾಮನ್ ರಾವ್ ಬೇಕಲ್ ಹಾಗೂ ಸಂಧ್ಯಾರಾಣಿ ಟೀಚರ್ ಉದ್ಘಾಟಿಸಲಿದ್ದು, ಕನ್ನಡ ಭವನದ ಕೊಡಗು ಜಿಲ್ಲಾಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಜಿ.ಅನಂತಶಯನ, ಹಿರಿಯ ಸಾಹಿತಿ ಭಾರಧ್ವಜ್ ಕೆ.ಆನಂದತೀರ್ಥ, ಕನ್ನಡ ಭವನ ಕೇಂದ್ರ ಸಮಿತಿಯ ಉಪಾಧ್ಯಕ್ಷ ಕೆ.ಪಿ.ರಾಜೇಶ್ ಚಂದ್ರ ಪಾಲ್ಗೊಳ್ಳಲಿದ್ದಾರೆ. ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕಾಸರಗೋಡು ಜಿಲ್ಲಾಧ್ಯಕ್ಷ ವಿರಾಜ್ ಅಡೂರು ಪ್ರಾಸ್ತಾವಿಕ ನುಡಿಯಾಡಲಿದ್ದಾರೆ.

ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾಧ್ಯಕ್ಷೆ ಎಂ.ಎ.ರುಬೀನಾ, ಜಿಲ್ಲಾ ಕೋಶಾಧಿಕಾರಿ ಚಂದನ್ ನಂದರಬೆಟ್ಟು ಸೇರಿದಂತೆ ಕನ್ನಡ ಭವನ ಹಾಗೂ ಚುಟುಕು ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಪ್ರಶಸ್ತಿ ಪ್ರದಾನ: ಭರವಸೆಯ ಬೆಳಕು ಪ್ರಶಸ್ತಿಯನ್ನು ಯೋಗಪಟು ಬಿ.ಕೆ.ಸಿಂಚನ ಅವರಿಗೆ ಪ್ರದಾನ ಮಾಡಲಾಗುವುದು. ಜತೆಗೆ ಕಾಸರಗೋಡಿನ ಕನ್ನಡ ಭವನದ ಕನ್ನಡ ಪಯಸ್ವಿನಿ ಪ್ರಶಸ್ತಿ-೨೦೨೫ನ್ನು ಬೊಳ್ಳಜಿರ ಬಿ.ಅಯ್ಯಪ್ಪ, ಎಂ.ಎ.ರುಬೀನಾ, ಬಿ.ಜಿ.ಅನಂತಶಯನ, ಭಾರದ್ವಾಜ್ ಕೆ.ಆನಂದತೀರ್ಥ, ನಾಗೇಶ್ ಕಾಲೂರು, ಕೊಟ್ಟುಕತ್ತಿರ ಯಶೋದ ಪ್ರಕಾಶ್, ಹೆಚ್.ಜಿ.ಯೋಗೇಶ್, ತೆನ್ನೀರ ಟೀನಾ ಚಂಗಪ್ಪ, ಅಜ್ಜಿಕುಟ್ಟಿರ ಭವ್ಯ ಬೋಪಣ್ಣ, ಬಿ.ಆರ್.ಬಸವರಾಜ್, ಚಂದನ್ ನಂದರಬೆಟ್ಟು, ಬೊಟ್ಟೋಳಂಡ ನಿವ್ಯ ದೇವಯ್ಯ ಹಾಗೂ ಕನ್ನಡ ಭವನದ ಭರವಸೆಯ ಬೆಳಕು ಪ್ರಶಸ್ತಿಯನ್ನು ಯೋಗಪಟು ಬಿ.ಕೆ.ಸಿಂಚನ ಅವರಿಗೆ ಪ್ರದಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಹಿರಿಯ ಸಾಹಿತಿ ಪಿ.ವಿ.ಪ್ರದೀಪ್ ಕುಮಾರ್, ಜಯಾನಂದ ಪೆರಾಜೆ, ಡಾ.ಶಾಂತ ಪುತ್ತೂರು, ವಿರಾಜ್ ಅಡೂರು, ಡಾ.ಕೊಳ್ಚಪ್ಪೆ ಗೋವಿಂದ ಭಟ್, ಡಾ.ಟಿ.ತ್ಯಾಗರಾಜ್, ರೇಖಾ ಎಸ್.ರಾವ್, ಡಾ.ಹೇಮಂತ್ ಕುಮಾರ್, ಕೆ.ಪಿ.ರಾಜೇಶ್‌ಚಂದ್ರ, ವಸಂತ್ ಕೆರೆಮನೆ ಅವರಿಗೆ ಕೊಡಗು ಜಿಲ್ಲಾ ಸಾಹಿತ್ಯ ಪ್ರಶಸ್ತಿ-೨೦೨೫ ನೀಡಿ ಗೌರವಿಸಲಾಗುವುದು. ಅಲ್ಲದೆ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿಯ ಸ್ಥಾಪಕ ಸಂಚಾಲಕ ಡಾ.ವಾಮನ್ ರಾವ್ ಬೇಕಲ್ ಹಾಗೂ ಸಂಧ್ಯಾರಾಣಿ ಟೀಚರ್ ಅವರಿಗೆ ಗಡಿನಾಡ ಚೇತನ ವಿಶೇಷ ಗೌರವ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಇದೇ ಸಂದರ್ಭ ಸಾಹಿತಿ ಅಜ್ಜಿಕುಟ್ಟೀರ ಭವ್ಯ ಬೋಪಣ್ಣ ಅವರ ದೇವನೆಲೆರ ಭೀರ್ಯ ಹಾಗೂ ಲೇಖಕಿ ತೆನ್ನಿರ ಟೀನಾ ಚಂಗಪ್ಪ ಅವರ ಮನದಾಳದ ಹೆಜ್ಜೆ ಕೃತಿಗಳು ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ.

ಕನ್ನಡ ಭವನದ ಜಿಲ್ಲಾಧ್ಯಕ್ಷರು ಹಾಗೂ ಚುಟುಕು ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ಆಗಿರುವ ಬೊಳ್ಳಜಿರ ಬಿ.ಅಯ್ಯಪ್ಪ, ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾಧ್ಯಕ್ಷೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ. ನಂತರ ಹಿರಿಯ ಕವಿ ನಾಗೇಶ್ ಕಾಲೂರು ಅವರ ಅಧ್ಯಕ್ಷತೆಯಲ್ಲಿ ಸುಮಾರು ೩೫ಕ್ಕೂ ಹೆಚ್ಚು ಚುಟುಕು ಕವಿಗಳು ಕವನ ವಾಚನ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net