ರಾಗಿಗೆ 4290 ರೂ.ಬೆಂಬಲ ಬೆಲೆ

dc
Published on

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಕನಿಷ್ಠ ಬೆಂಬಲ ಬೆಲೆಯಡಿ ರೈತರಿಂದ ರಾಗಿ ಖರೀದಿಸಲು ಡಿ.1 ರಿಂದ ನೋಂದಣಿ ಪ್ರಕ್ರಿಯೆ ಶುರುವಾಗಲಿದ್ದು, ನೋಂದಣಿ ಪ್ರಕ್ರಿಯೆಗೆ ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ಸೂಚಿಸಿದರು.

ದೇವನಹಳ್ಳಿ ತಾಲೂಕು ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರೈತರಿಂದ ರಾಗಿ ಖರೀದಿಸಲು ಪೂರ್ವ ಸಿದ್ಧತಾ ಕ್ರಮಗಳ ಮೊದಲನೆಯ ಜಿಲ್ಲಾ ಟಾಸ್ಕ್‌ಪೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿದರು. ಪ್ರತಿ ಕ್ವಿಂಟಾಲ್ ರಾಗಿಗೆ 4290 ರೂಪಾಯಿಗಳು ಬೆಂಬಲ ಬೆಲೆಯನ್ನು ಸರ್ಕಾರ ನಿಗದಿಪಡಿಸಿದೆ. ಕನಿಷ್ಟ ಬೆಂಬಲ ಯೋಜನೆಯಡಿ ರಾಗಿ ಖರೀದಿಗೆ ಸಂಬಂಧಿಸಿದಂತೆ ಸಂಗ್ರಹಣಾ ಏಜೆನ್ಸಿಗಳು ಪ್ರತಿ ತಾಲೂಕು ಹಂತದಲ್ಲಿ ಅಗತ್ಯಕ್ಕೆ ತಕ್ಕಂತೆ ಖರೀದಿ ಕೇಂದ್ರಗಳನ್ನು ತೆರೆಯಬೇಕು, ರಾಗಿ ಖರೀದಿಗೆ ಸಂಬಂಧಿಸಿದಂತೆ ನೋಂದಣಿ ಪ್ರಕ್ರಿಯೆಗೆ ನಿಗದಿತ ಸ್ಥಳಗಳನ್ನು ಗುರುತಿಸಿ ರೈತರಿಗೆ ಮುಂಚಿತವಾಗಿ ಮಾಹಿತಿ ನೀಡಬೇಕು. ಖರೀದಿ ಕೇಂದ್ರಗಳ ನೋಂದಣಿಗೆ ಅವಶ್ಯಕತೆ ಇರುವ ಟೇಬಲ್, ಚೇರ್, ಕಂಪ್ಯೂಟರ್‌ಗಳು, ವಿದ್ಯುತ್ ಸಂಪರ್ಕ, ಇಂಟರ್‌ನೆಟ್, ತೂಕದ ಯಂತ್ರ ವ್ಯವಸ್ಥೆ ಮಾಡಿ, ರೈತರಿಗೆ ಕುಡಿಯುವ ನೀರು, ಶೌಚಗೃಹ ವ್ಯವಸ್ಥೆ ಕಲ್ಪಿಸಿ ಎಂದು ಕೃಷಿ ಮಾರುಕಟ್ಟೆ ಮತ್ತು ಎಪಿಎಂಸಿ ಅಧಿಕಾರಿಗಳಿಗೆ ಸೂಚಿಸಿದರು. ಪ್ರತಿ ಬಾರಿ ರಾಗಿ ಖರೀದಿ ಕೇಂದ್ರಗಳಲ್ಲಿ ಹಲವು ಅವ್ಯವಸ್ಥೆಗಳ ದೂರು ಕೇಳಿಬರುತ್ತದೆ, ಸರಿಯಾದ ಸಮಯದಕ್ಕೆ ಕೇಂದ್ರ ತೆರೆಯುವುದಿಲ್ಲ, ರೈತರೊಂದಿಗೆ ಸಿಬ್ಬಂದಿ ಸೌಜನ್ಯದಿಂದ ವರ್ತಿಸುವುದಿಲ್ಲ, ಮೂಲಸೌಕರ್ಯ ಕಲ್ಪಿಸುವುದಿಲ್ಲ ಎಂಬ ಆರೋಪಗಳು ಸಾಮಾನ್ಯವಾಗಿವೆ, ಮುಂದಿನ ದಿನಗಳಲ್ಲಿ ಇಂಥ ಅವ್ಯವಸ್ಥೆ ಪುನಾವರ್ತನೆಯಾಗಬಾರದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಉಗ್ರಾಣಗಳ ಪರಿಶೀಲನೆ ನಡೆಸಿ: ಡಿ.1 ರಿಂದ ನೋಂದಣಿ ಪ್ರಕ್ರಿಯೆ ಶುರುವಾಗಲಿದ್ದು ಜನವರಿ ತಿಂಗಳಲ್ಲಿ ರಾಗಿ ಖರೀದಿ ಪ್ರಕ್ರಿಯೆ ಶುರುವಾಗಲಿದೆ. ಹಾಗಾಗಿ ರೈತರಿಂದ ಖರೀದಿಸಿದ ರಾಗಿಯನ್ನು ಕ್ರೂಡಿಕರಿಸಿ ಶೇಖರಿಸಲು ಉಗ್ರಾಣಗಳು ವ್ಯವಸ್ಥಿತ ಗುಣಮಟ್ಟದಲ್ಲಿ ಇದೆಯೇ ಎಂದು ಪರಿಶೀಲಿಸಿ, ಅವಶ್ಯವಿದ್ದಲ್ಲಿ ಹೆಚ್ಚುವರಿ ಉಗ್ರಾಣಗಳನ್ನು ನಿಗದಿಪಡಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು. ರೈತರು ಕಡ್ಡಾಯವಾಗಿ ಕೃಷಿ ಇಲಾಖೆಯಿಂದ ಜಾರಿಗೊಳಿಸಿರುವ ಪ್ರೂಟ್ಸ್ ದತ್ತಾಂಶದಲ್ಲಿ ನೋಂದಾಯಿಸಿಕೊಂಡು, ಫ್ರೂಟ್ಸ್ ಐಡಿ ಪಡೆದಿರಬೇಕು. ನೋಂದಣಿ ಪ್ರಕ್ರಿಯೆಯಲ್ಲಿ ಫ್ರೂಟ್ಸ್ ಐಡಿ ಕಡ್ಡಾಯ ಎಂದು ಜಿಲ್ಲಾಧಿಕಾರಿ ಹೇಳಿದರು. ರಾಗಿ ಕಟಾವಿಗೆ ಈಗಾಗಲೇ ದರ ನಿಗದಿ ಮಾಡಿ ಆದೇಶ ಹೊರಡಿಸಲಾಗಿದೆ, ರಾಗಿ ಕಟಾವು ಯಂತ್ರದ ಮಾಲೀಕರು ನಿಯಮ ಮೀರಿ ರೈತರಿಂದ ಹೆಚ್ಚುವರಿ ಹಣ ಸುಲಿಗೆ ಮಾಡಿರುವ ಆರೋಪ ಕೇಳಿಬಂದರೆ ಅಂಥವರ ವಿರುದ್ಧ ಜಿಲ್ಲಾಡಳಿತ ಕ್ರಮಕೈಗೊಳ್ಳಲಿದೆ ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಇಂಥ ಕಡೆ ನಿಗಾವಹಿಸಬೇಕು ಎಂದು ತಾಕೀತು ಮಾಡಿದರು.

ರಾಗಿ ಬೆಳೆಗೆ ಬೆಂಬಲ ಬೆಲೆ ನಿಗಧಿ ಹಾಗೂ ರಾಗಿ ಖರೀದಿಗೆ ನೋಂದಣಿ ಪ್ರಕ್ರಿಯೆ ಕುರಿತು ಜಿಲ್ಲಾದ್ಯಂತ ಪ್ರಚಾರ ಮಾಡಲಾಗುವುದು, ರೈತರಿಗೆ ಸರಿಯಾದ ಮಾಹಿತಿ ನೀಡಿ ಪ್ರಕ್ರಿಯೆ ಸರಳೀಕರಣೊಳಿಸಲು ಶ್ರಮಿಸಲಾಗುವುದು ಎಂದು ಜಿಲ್ಲಾ ಆಹಾರ ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಜಿ.ಶಂಕರಮೂರ್ತಿ ತಿಳಿಸಿದರು.

 ರಾಗಿ ನೋಂದಣಿ ಹಾಗೂ ಖರೀದಿ ಕೇಂದ್ರಗಳ ತೆರೆಯುವ ಸ್ಥಳಗಳು

*ನೆಲಮಂಗಲ: ಆಹಾರ ನಾಗರಿಕ ಸರಬರಾಜು ನಿಗಮದ ಅಕ್ಷರ ದಾಸೋಹ ಕೇಂದ್ರ, ಕೆಂಪಲಿಂಗನಹಳ್ಳಿ ಕ್ರಾಸ್, ಕುಣಿಗಲ್ ರಸ್ತೆ

*ದೊಡ್ಡಬಳ್ಳಾಪುರ: ರೈತ ಭವನ ಕೇಂದ್ರ, ಎಂಪಿಎಂಸಿ ಯಾರ್ಡ್

* ದೇವನಹಳ್ಳಿ: ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮದ ಅಕ್ಷರ ದಾಸೋಹ ಕೇಂದ್ರ, ಕುರುಬರ ದೊಡ್ಡಿ, ಚಿಕ್ಕಬಳ್ಳಾಪುರ ರಸ್ತೆ

* ಹೊಸಕೋಟೆ: ಆಹಾರ ನಾಗರಿಕ ಸರಬರಾಜು ನಿಗಮದ ಅಕ್ಷರ ದಾಸೋಹ ಕೇಂದ್ರ, ವೀರಭದ್ರೇಶ್ವರ ರೈಸ್‌ಮಿಲ್ ಕಾಂಪೌಂಡ್, ಮಾಲೂರು ರಸ್ತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net