ಬಾಲಕಾರ್ಮಿಕ ಪದ್ಧತಿ ನಿಮೂರ್ಲನೆಗೆ ಪಣ

udp-9-dc
Published on

ಉಡುಪಿ: ಮಲ್ಪೆಯ ಮೀನುಗಾರಿಕಾ ಬಂದರಿನಲ್ಲಿ ಮೀನು ಹೆಕ್ಕುವ ಕಾರ್ಯಚಟುವಟಿಕೆಗಳಲ್ಲಿ ಬಾಲಕಾರ್ಮಿಕರು ಪಾಲ್ಗೊಳ್ಳುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಕಾರ್ಯಪಡೆ ರಚಿಸಿ ಬಾಲಕಾರ್ಮಿಕ ಪದ್ಧತಿಗೆ ಕಡಿವಾಣ ಹಾಕಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹೇಳಿದರು.

ಬುಧವಾರ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಜಿಲ್ಲಾ ಕಾರ್ಯಪಡೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಲ್ಪೆ ಬಂದರಿನಲ್ಲಿ ಬೆಳಗಿನ ಜಾವ ನಡೆಯುವ ಮೀನಿನ ಹರಾಜು ಕೇಂದ್ರಗಳಲ್ಲಿ ಮಕ್ಕಳು ಮೀನು ಹೆಕ್ಕುವ ಕಾರ್ಯದಲ್ಲಿ ತೊಡಗುತ್ತಿದ್ದಾರೆ. ಈ ಕೆಲಸಕ್ಕೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ. ಕಾರ್ಯಪಡೆಯ ಸದಸ್ಯರು ಆಗಿಂದಾಗ್ಗೆ ನಿರಂತರ ಅನಿರೀಕ್ಷಿತ ದಾಳಿ ನಡೆಸಬೇಕು ಎಂದು ಸೂಚನೆ ನೀಡಿದರು. ಬಾಲ ಕಾರ್ಮಿಕತೆ ಮಕ್ಕಳ ಬಾಲ್ಯ, ಅವರ ಸಾಮರ್ಥ್ಯ, ಘನತೆ ಕಸಿದುಕೊಳ್ಳುವ ಹಾಗೂ ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ನೈತಿಕವಾಗಿ ಹಾನಿಕಾರವಾಗುತ್ತದೆ. ಆದ್ದರಿಂದ ಮಕ್ಕಳು ಶಿಕ್ಷಣವಂತರಾಗಬೇಕು. ಉತ್ತಮ ವಿದ್ಯಾವಂತರಾಗಿ ಭವಿಷ್ಯ ರೂಪಿಸಿಕೊಳ್ಳಬೇಕು. ಆದರೆ ವಿವಿಧ ಕಾರಣಗಳಿಂದಾಗಿ ಮಕ್ಕಳು ಶಾಲೆಯನ್ನು ಬಿಟ್ಟು ದುಡಿಮೆಗೆ ಮುಂದಾಗುತ್ತಾರೆ. ಇದನ್ನು ತಪ್ಪಿಸಬೇಕಿದೆ.14 ವರ್ಷ ದೊಳಗಿನ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಮಕ್ಕಳ ಆರೋಗ್ಯ ಮತ್ತು ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡಬೇಕು ಎಂದರು.
ಬಾಲ ಕಾರ್ಮಿಕರನ್ನು ತೊಡಗಿಸಿಕೊಂಡ ಯಾವುದೇ ವ್ಯಾಪಾರಿ ಅಥವಾ ಉದ್ಯಮಿ ವಿರುದ್ಧ ಕಾನೂನಿನ ಅನ್ವಯ ತಪ್ಪದೇ ಪ್ರಕರಣ ದಾಖಲಿಸಿ, ಅವರಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು. ಉದ್ಯಮಗಳ ಪರವಾನಿಗೆಯನ್ನು ಸ್ಥಳಿಯ ಸಂಸ್ಥೆಗಳು ರದ್ದುಗೊಳಿಸಬೇಕು. ಕಳೆದ ಒಂದು ವರ್ಷದಲ್ಲಿ 111 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಇವರಲ್ಲಿ ಕೆಲವರು ಹೊರ ರಾಜ್ಯ, ಹೊರ ಜಿಲ್ಲೆಯಿಂದ ಬಂದವರಾಗಿದ್ದು, ಇವರು ಶಾಲೆಗೆ ಹೋಗುವಂತೆ ನಿಗಾ ವಹಿಸಬೇಕು ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಕಮಲ್​ ಅಲ್ತಾಫ್​ ಅಹಮ್ಮದ್​, ಪೌರಾಯುಕ್ತ ರಾಯಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಣಪತಿ ಕೆ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಐ.ಪಿ. ಗಡಾದ್​, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಾಗರತ್ನ ನಾಯಕ್​, ಜಿಲ್ಲಾ ಬಾಲಕಾರ್ಮಿಕ ಯೋಜನ ಸಂಘದ ನಿರ್ದೇಶಕಿ ಅಮೃತ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net