

ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ
ಜಿಲ್ಲೆಯಲ್ಲಿನ ಧಾರ್ಮಿಕ ಪ್ರೇಕ್ಷಣೀಯ ಸ್ಥಳಗಳತ್ತ ಯಾತ್ರಿಕರನ್ನು ಸೆಳೆಯುವ ಮಹತ್ವಾಕಾಂಕ್ಷಿ ಯೋಜನೆಯಡಿ ಜಿಲ್ಲೆಯಲ್ಲಿ ಪ್ರಮುಖವಾಗಿ 4 ಯಾತ್ರಿನಿವಾಸಗಳು ತಲೆಎತ್ತುತ್ತಿವೆ.
ಕರೊನಾ ಲಾಕ್‌ಡೌನ್ ತೆರವಿನ ಬಳಿಕ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಚುರುಕುಗೊಂಡಿದ್ದು, ಈಗಾಗಲೇ 2 ಯಾತ್ರಿ ನಿವಾಸಿಗಳನ್ನು ಯಾತ್ರಿಕರಿಗೆ ಮುಕ್ತಮಾಡಿದೆ. ಇನ್ನೆರಡು ಕಟ್ಟಡ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಕೆಲವೇ ದಿನಗಳಲ್ಲಿ ಲೋಕಾರ್ಪಣೆಯಾಗಲಿವೆ.
ದೊಡ್ಡಬಳ್ಳಾಪುರ ತಾಲೂಕು ದೊಡ್ಡಬೆಳವಂಗಲ ಹೋಬಳಿ ದೊಡ್ಡಬೆಳವಂಗಲದಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ ಕೆಐಆರ್‌ಡಿಎಲ್ ಸಂಸ್ಥೆಯಿಂದ ನಿರ್ಮಾಣವಾಗಿರುವ ಯಾತ್ರಿನಿವಾಸ ಈಗಾಗಲೇಕಾರ್ಯಾರಂಭ ಮಾಡಿದೆ.
ನೆಲಮಂಗಲ ತಾಲೂಕು ಸೋಮಪುರ ಹೋಬಳಿ ದೇವರಹೊಸಹಳ್ಳಿಯ ಶ್ರೀ ವೀರಭದ್ರಸ್ವಾಮಿ ದೇಗುಲ ಆವರಣದಲ್ಲಿ 25 ಲಕ್ಷ ರೂ.ವೆಚ್ಚದ ಸುಸಜ್ಜಿತ ಯಾತ್ರಿನಿವಾಸ ಯಾತ್ರಿಕರನ್ನು ಕೈಬೀಸಿ ಕರೆಯುತ್ತಿದೆ.
ಅದೇ ರೀತಿ ನೆಲಮಂಗಲ ತಾಲೂಕು ಕಾಕಡದೇನಹಳ್ಳಿಯ ಮಾರಮ್ಮ ದೇವಸ್ಥಾನ ಬಳಿ 25 ಲಕ್ಷ ರೂ. ಅಂದಾಜು ವೆಚ್ಚದ ಯಾತ್ರಿನಿವಾಸ ಕಾಮಗಾರಿ ನಡೆಯುತ್ತಿದ್ದು, ಛಾವಣಿ ಕಾಮಗಾರಿ ಪ್ರಗತಿಯಲ್ಲಿದೆ. ಇದಕ್ಕೆ ಪ್ರವಾಸೋದ್ಯಮ ಇಲಾಖೆ ವತಿಯಿಂದ 15 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಕೆಐಆರ್‌ಡಿಎಲ್ ಸಂಸ್ಥೆ ಕಾಮಗಾರಿ ಕೈಗೆತ್ತಿಕೊಂಡಿದೆ. ಜತೆಗೆ ದೇವನಹಳ್ಳಿ ತಾಲೂಕು ಕುಂದಾಣ ಹೋಬಳಿಯ ಕೊಯಿರಾ ಗ್ರಾಮದ ಲಕ್ಷ್ಮೀನರಸಿಂಹ ಸ್ವಾಮಿ ದೇಗುಲದ ಬಳಿ 50 ಲಕ್ಷ ರೂ.ವೆಚ್ಚದ ಕಾಮಗಾರಿಯನ್ನು ಕೆಆರ್‌ಐಡಿಎಲ್ ಸಂಸ್ಥೆ ಕೈಗೆತ್ತಿಕೊಂಡಿದ್ದು, ಈಗಾಗಲೇ 20 ಲಕ್ಷ ರೂ.ಅನುದಾನ ಮಂಜೂರಾಗಿದೆ ಎಂದು ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕಿ ಮಂಗಳಗೌರಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ರಸ್ತೆಗೂ ಕಾಯಕಲ್ಪ: ದೇವನಹಳ್ಳಿ ಪಟ್ಟಣ ವೇಣುಗೋಪಾಲಸ್ವಾಮಿ ದೇವನಸ್ಥಾನ ರಸ್ತೆಯಿಂದ ಟಿಪ್ಪುಸುಲ್ತಾನ್ ಕೋಟೆ ಸಂಪರ್ಕಿಸುವ ರಸ್ತೆ ಕಾಮಗಾರಿಯನ್ನು 49 ಲಕ್ಷ ರೂ.ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಪೂರ್ಣಗೊಳಿಸಿದ್ದು, ಪ್ರವಾಸಿಗರನ್ನು ಸೆಳೆಯುವ ಯೋಜನೆಗಳಲ್ಲೊಂದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಿವಗಂಗೆ ಯಾತ್ರಿನಿವಾಸ ಪ್ರಥಮ: ಜಿಲ್ಲೆಯಲ್ಲಿ 7 ಯಾತ್ರಿನಿವಾಸಗಳಿದ್ದು, ಇದರಲ್ಲಿ ಶಿವಗಂಗೆ ಬಳಿ ಇರುವ ಯಾತ್ರಿ ನಿವಾಸ ಪ್ರಮುಖವಾದುದಾಗಿದೆ. 1 ಕೋಟಿ ರೂ. ವೆಚ್ಚದಲ್ಲಿ 2013-14ನೇ ಸಾಲಿನಲ್ಲಿ ಯಾತ್ರಿನಿವಾಸ ನಿರ್ಮಾಣವಾಗಿದ್ದು, ಪ್ರಮುಖ ಧಾರ್ಮಿಕ ಯಾತ್ರಿನಿವಾಸವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ತಂಗಲು ವ್ಯವಸ್ಥೆ: ರಾಜ್ಯದ ವಿವಿಧ ಜಿಲ್ಲೆ ಸೇರಿ ನೆರೆ ರಾಜ್ಯದ ಪ್ರವಾಸಿಗರನ್ನು ಸೆಳೆಯಲು ಯೋಜನೆಗಳನ್ನು ರೂಪಿಸುತ್ತಿರುವ ಜಿಲ್ಲಾ ಪ್ರವಾಸೋದ್ಯಮ ಇಲಾಖೆ, ಪ್ರಮುಖವಾಗಿ ಧಾರ್ಮಿಕ ಯಾತ್ರಾ ಸ್ಥಳಗಳಿಗೆ ಆಗಮಿಸುವ ಯಾತ್ರಿಕರಿಗೆ ಆದ್ಯತೆ ನೀಡುತ್ತಿದೆ. ದೂರದಿಂದ ಬರುವ ಪ್ರವಾಸಿಗರು ತಂಗಲು, ಸುತ್ತಮುತ್ತಲ ಪ್ರದೇಶಗಳ ನಿಸರ್ಗ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಅವಕಾಶ ಮಾಡಿಕೊಡುವ ಉದ್ದೇಶ ಇದಾಗಿದೆ. ಪ್ರತ್ಯೇಕ ಕೊಠಡಿಗಳು, ಸುಸಜ್ಜಿತ ಶೌಚಗೃಹ, ನೀರಿನ ಸೌಲಭ್ಯ ಜತೆಗೆ ಭದ್ರತಾ ವ್ಯವಸ್ಥೆ ಕಲ್ಪಿಸಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಯಾತ್ರಿನಿವಾಸಗಳ ನಿರ್ಮಾಣದ ಬಗ್ಗೆ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.
2017-18 ಸಾಲಿನ ಅನುದಾನದಲ್ಲಿ ಕೈಗೆತ್ತಿಕೊಳ್ಳಲಾದ 2 ಯಾತ್ರಿನಿವಾಸಿಗಳ ಕಾಮಗಾರಿ ಪೂರ್ಣಗೊಂಡಿದ್ದು, ಲೋಕಾರ್ಪಣೆಗೆ ಸಿದ್ಧವಾಗಿವೆ, ಇನ್ನೆರಡು ಯಾತ್ರಿನಿವಾಸಗಳ ಕಾಮಗಾರಿ ಭರದಿಂದ ಸಾಗಿದ್ದು, ಶೀಘ್ರದಲ್ಲೇ ಯಾತ್ರಿಕರಿಗೆ ಮುಕ್ತವಾಗಲಿವೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಪ್ರಗತಿಗೆ ಅಗತ್ಯವಿರುವ ಎಲ್ಲ ಯೋಜನೆಗಳು ಸಾಕಾರಗೊಳ್ಳಲಿವೆ. ಮಂಗಳಗೌರಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕಿ