ಲಾಕ್ಡೌನ್ ಕಟ್ಟುನಿಟ್ಟು ಜಾರಿಗೆ ಸೂಚನೆ

MEETINIG
Published on

ಯಾದಗಿರಿ: ಕರೊನಾ ವೈರಸ್ ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಕೇಂದ್ರ ಸರ್ಕಾರ 14ರವರೆಗೆ ಲಾಕ್ಡೌನ್ ಘೋಷಣೆ ಮಾಡಿದ್ದು, ಜಿಲ್ಲೆಯಲ್ಲಿ ಲಾಕ್ಡೌನ್ ಕಟ್ಟುನಿಟ್ಟಾಗಿ ಜಾರಿಯಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಖಡಕ್ ಸೂಚನೆ ಕೊಟ್ಟಿದ್ದಾರೆ.

ಭಾನುವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರೆದಿದ್ದ ಸಭೆಯಲ್ಲಿ ಕರೊನಾ ಸಾಂಕ್ರಾಮಿಕ ರೋಗ ಹರಡದಂತೆ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಬೀದರ್ನಲ್ಲಿ ಒಂದೇ ದಿನ ಸೋಂಕಿತರ ಸಂಖ್ಯೆ ಸ್ಫೋಟವಾಯಿತು. ಕರೊನಾ ಸಾಂಕ್ರಾಮಿಕ ರೋಗವಾಗಿರುವುದರಿಂದ ಇದರ ಗಂಭೀರತೆ ಅರಿತು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಲಾಕ್ಡೌನ್ ಅವಧಿಯಲ್ಲಿ ಯಾವುದೇ ಅಂಗಡಿಗಳನ್ನು ತೆರೆದಿಡುವಂತಿಲ್ಲ. ಸಾರ್ವಜನಿಕರು ಸಕಾರಣಗಳಿಲ್ಲದೆ ಮನೆಯಿಂದ ಹೊರಬಂದರೆ ಸೂಕ್ತ ಕ್ರಮ ಜರುಗಿಸಿ. ಅಲ್ಲದೇ, ಅನಗತ್ಯವಾಗಿ ಓಡಾಡುವ ವಾಹನಗಳನ್ನು ಜಪ್ತಿ ಮಾಡಿ ಎಂದು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕರೊನಾ ಹಿಮ್ಮೆಟ್ಟಿಸಲು ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಾಕಷ್ಟು ಶ್ರಮ ಪಡುತ್ತಿದ್ದಾರೆ. ವೈರಸ್ ನಿಯಂತ್ರಣದಲ್ಲಿ ಸಾರ್ವಜನಿಕರ ಸಹಕಾರ ಅಗತ್ಯ. ನಿಷ್ಕ್ಕಾಳಜಿಯಿಂದ ಜೀವಕ್ಕೆ ಅಪಾಯ ತಂದುಕೊಳ್ಳಬಾರದು. ಈ ನಿಟ್ಟಿನಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಕೈಯನ್ನು ಪದೇ ಪದೆ ಸಾಬೂನಿನಿಂದ ತೊಳೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಕರೊನಾದಿಂದ ಜಗತ್ತಿನಾದ್ಯಂತ ಈಗಾಗಲೇ ಸಾಕಷ್ಟು ಜೀವಹಾನಿಯಾಗಿದೆ. ಬೇರೆಬೇರೆ ದೇಶಗಳಲ್ಲಿ ಜನರು ರಸ್ತೆ ಮೇಲೆ ಹೆಣಗಳಾಗಿದ್ದಾರೆ. ನಮ್ಮ ದೇಶದಲ್ಲಿ ಅಂತಹ ಸ್ಥಿತಿ ಬರಬಾರದು. ನಾವು ಮತ್ತು ನಮ್ಮ ಕುಟುಂಬ ಈ ವಿಷಯದಲ್ಲಿ ಗಂಭೀರವಾಗಿರಬೇಕು. ಯಾವುದೇ ಕಾರಣಕ್ಕೂ ಉದಾಸೀನ ಮಾಡಬಾರದು. ಕರೊನಾ ಪ್ರಕರಣದಡಿ ದಾಖಲಾಗುವ ರೋಗಿಗಳಿಗೆ ಅವಶ್ಯವಿರುವ ವೈದ್ಯಕೀಯ ಸೇವೆ ಒದಗಿಸಲು ಖಾಸಗಿ ವೈದ್ಯರು ಸಹಕಾರ ನೀಡಬೇಕೆಂದು ಸೂಚಿಸಿದರು.

ಕಲಬುರಗಿ ಲೋಕಸಭಾ ಸದಸ್ಯ ಡಾ.ಉಮೇಶ್ ಜಿ.ಜಾಧವ್ ಮಾತನಾಡಿ, ಬೇಸಿಗೆ ಕಾಲ ಇರುವುದರಿಂದ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ತೊಂದರೆಯಾಗಬಾರದು. ಕರೊನಾ ತಡೆ ಜತೆಗೆ ಕುಡಿಯುವ ನೀರಿನ ಸಮಸ್ಯೆಯನ್ನು ಕೂಡ ಸಮರ್ಪಕವಾಗಿ ನಿಭಾಯಿಸುವಂತೆ ಸೂಚಿಸಿದರು.

ಶಾಸಕರಾದ ನರಸಿಂಹ ನಾಯಕ, ವೆಂಕಟರೆಡ್ಡಿ ಮುದ್ನಾಳ್ ಮಾತನಾಡಿ, ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ವೈಯಕ್ತಿಕ ರಕ್ಷಣಾ ಸಾಧನಾ (ಪಿಪಿಇ), ಮಾಸ್ಕ್ ಸೇರಿ ವೈದ್ಯಕೀಯ ಸಾಮಗ್ರಿಗಳ ಕೊರತೆ ಇದೆ. ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಸಿಬ್ಬಂದಿ ಜೀವಭಯದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದಾಗಿ ಸಚಿವರ ಗಮನಕ್ಕೆ ತಂದು ಸುದೀರ್ಘ ಚಚರ್ೆ ನಡೆಸಿದರು.

ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಮಾತನಾಡಿ, ಜಿಲ್ಲೆಯಿಂದ ಕರೊನಾ ಪರೀಕ್ಷೆಗೆ ಕಳುಹಿಸಿದ್ದ ಒಟ್ಟು 16 ವ್ಯಕ್ತಿಗಳ ಮಾದರಿ ನೆಗೆಟಿವ್ ಬಂದಿವೆ. ಈ ಪೈಕಿ ನಿಜಾಮುದ್ದೀನ್ ತಬ್ಲಿಘಿ ಮಾರ್ಕಜ್ ಸಭೆಯಲ್ಲಿ ಭಾಗವಹಿಸಿ ಯಾದಗಿರಿ ಜಿಲ್ಲೆಗೆ ವಾಪಸ್ಸಾಗಿರುವ 5 ವ್ಯಕ್ತಿಗಳ ಮಾದರಿ ಕೂಡ ನೆಗೆಟಿವ್ ಇದ್ದರೂ ನಿರ್ದೇಶನದಂತೆ ಮತ್ತೊಮ್ಮೆ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದರು.

ವಿಧಾನಪರಿಷತ್ ಸದಸ್ಯ ಬಿ.ಜಿ.ಪಾಟೀಲ್, ಜಿಲ್ಲೆಯ ಮೇಲುಸ್ತುವಾರಿ ಎ.ಬಿ.ಇಬ್ರಾಹಿಂ, ಜಿಪಂ ಸಿಇಒ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್ ಸೋನಾವಣೆ, ಅಪರ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ, ಸಹಾಯಕ ಆಯುಕ್ತ ಶಂಕರಗೌಡ ಎಸ್.ಸೋಮನಾಳ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಂ.ಎಸ್.ಪಾಟೀಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net