

ಮಂಡ್ಯ: ಕ್ರೀಡಾಂಗಣಗಳಿಗೆ ಆಗಮಿಸುವ ಸಾರ್ವಜನಿಕರು ಹಾಗೂ ಕ್ರೀಡಾಭ್ಯಾಸ ನಡೆಸುವ ಕ್ರೀಡಾಪಟುಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ ಯಾವುದೇ ರೀತಿಯ ಕೊರತೆ ಉಂಟಾಗಬಾರದು. ಮುಖ್ಯವಾಗಿ ಜಿಲ್ಲೆಯ ಎಲ್ಲ ಕ್ರೀಡಾಂಗಣಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ವ್ಯವಸ್ಥೆ ಮಾಡಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಕ್ರೀಡಾಂಗಣಗಳ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಖ್ಯವಾಗಿ ಕ್ರೀಡಾಂಗಣ ಹಾಗೂ ಶೌಚಗೃಹದ ಸ್ವಚ್ಛತೆ ಬಗ್ಗೆ ಗಮನ ವಹಿಸಿ. ಕ್ರೀಡಾಂಗಣದಲ್ಲಿ ಪ್ರತ್ಯೇಕ ಕಬಡ್ಡಿ, ಬ್ಯಾಸ್ಕೆಟ್‌ಬಾಲ್, ಶೆಟಲ್ ಕಾಕ್ ಹಾಗೂ ವಾಲಿಬಾಲ್ ಅಂಕಣ ನಿರ್ಮಿಸಲಾಗುತ್ತಿದೆ. ಕ್ರೀಡಾಪಟುಗಳಿಗೆ ವಸ್ತ್ರ ಬದಲಾಯಿಸಲು ಅನುಕೂಲವಾಗುವಂತೆ ಸುವ್ಯವಸ್ಥಿತವಾದ ಬದಲಾಯಿಸುವ ಕೊಠಡಿಗಳನ್ನು ನಿರ್ಮಿಸಿ ಎಂದು ತಿಳಿಸಿದರು.
ಕ್ರೀಡಾಂಗಣಗಳಲ್ಲಿ ಪ್ಲಾಸ್ಟಿಕ್ ಬಿಸಾಡುವುದು, ಕಸಗಳ ವಿಲೇವಾರಿಯಾಗದೆ ಇರುವುದು ಕಂಡು ಬಂದಿದ್ದು, ಸಾರ್ವಜನಿಕರಲ್ಲಿ ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿ ಮತ್ತು ಕಸಗಳ ವಿಲೇವಾರಿಯಾಗದೆ ಇರುವುದು ಕಂಡುಬಂದಲ್ಲಿ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಮಾತನಾಡಿ, ಜಿಲ್ಲೆಯಲ್ಲಿನ ಕ್ರೀಡಾಂಗಣಗಳಲ್ಲಿ ಕ್ರೀಡಾಭ್ಯಾಸ ಮಾಡುವ ಕ್ರೀಡಾಪಟುಗಳಿಗೆ ಏನಾದರೂ ಸಮಸ್ಯೆ ಹಾಗೂ ಮೂಲ ಸೌಕರ್ಯಗಳಲ್ಲಿ ಕೊರತೆ ಉಂಟಾಗುತಿದೆಯೇ ಎಂದು ತಿಳಿಯಲು ಜಿಲ್ಲೆಯ ಕ್ರೀಡಾಪಟುಗಳನ್ನು ಒಳಗೊಂಡಂತೆ ಮುಂದಿನ ದಿನಗಳಲ್ಲಿ ಸಭೆಯನ್ನು ಆಯೋಜಿಸಿ ಎಂದು ಸಲಹೆ ನೀಡಿದರು.
ಕ್ರೀಡಾಂಗಣಗಳಲ್ಲಿ ವ್ಯಾಯಾಮ ಮಾಡುವವರು, ಕ್ರೀಡಾಪಟು, ಸಾರ್ವಜನಿಕರು ಹಾಗೂ ಮಕ್ಕಳಿಗಾಗಿ ಅರೋಗ್ಯಕರವಾದ ತಂಪು ಪಾನೀಯ, ಹಣ್ಣುಗಳನ್ನು ಒದಗಿಸಲು ಹಾಗೂ ಮಾರಾಟ ಮಾಡಲು ಪ್ರತ್ಯೇಕ ಸ್ಥಳದ ವ್ಯವಸ್ಥ ಮಾಡಿ ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಯುವಜನ ಸೇವಾ ಹಾಗೂ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಓಂ ಪ್ರಕಾಶ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಿವರಾಮೇಗೌಡ, ನೆಹರು ಯುವ ಕೇಂದ್ರದ ಮುಖ್ಯ ಲೆಕ್ಕಾಧಿಕಾರಿ ವಿ.ರವಿಚಂದ್ರನ್, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಜಯಪ್ರಕಾಶ್, ಶಾಲಾ ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಣಾಧಿಕಾರಿ ಲಿಂಗರಾಜು, ನಗರಸಭೆಯ ಕಾರ್ಯಪಾಲಕ ಇಂಜಿನಿಯರ್ ರವಿಕುಮಾರ್ ಉಪಸ್ಥಿತರಿದ್ದರು.