

ಕೂಡ್ಲಿಗಿ: ಪಟ್ಟಣದ ಮಹಾದೇವ ಮೈಲಾರ ಕ್ರೀಡಾಂಗಣ ಅನೈರ್ಮಲ್ಯದ ಆಗರವಾಗಿದೆ. ಸ್ವಾತಂತ್ರೃ ಸೇನಾನಿ ಮಹಾದೇವ ಮೈಲಾರ ಸ್ಮರಣೆಗಾಗಿ ಕ್ರೀಡಾಂಗಣಕ್ಕೆ ಅವರ ಹೆಸರು ನಾಮಕರಣ ಮಾಡಲಾಗಿದೆ. ಕ್ರೀಡಾಂಗಣಕ್ಕೆ ಹೊಂದಿಕೊಂಡು ಮಹಾತ್ಮ ಗಾಂಧಿ ಚಿತಾಭಸ್ಮವಿರುವ ಹುತಾತ್ಮರ ಸ್ಮಾರಕವಿದೆ.
ಇದನ್ನೂ ಓದಿ:ಚುರುಕುಗೊಳ್ಳಬೇಕಿದೆ ಆಡಳಿತ ಯಂತ್ರ
ಕ್ರೀಡಾಂಗಣದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. 30 ಸಾವಿರಾರಕ್ಕೂ ಹೆಚ್ಚು ಜನಸಂಖ್ಯೆ ಇರುವ ಪಟ್ಟಣದಲ್ಲಿ ಸಾರ್ವಜನಿಕರ ವಾಯುವಿಹಾರಕ್ಕೆ ಇದೊಂದೇ ಕ್ರೀಡಾಂಗಣ ಇದೆ. ಕ್ರೀಡಾಂಗಣಕ್ಕೆ ಹೊಂದಿಕೊಂಡ ಸಾರ್ವಜನಿಕ ಆಸ್ಪತ್ರೆಯ ಕಲುಷಿತ ನೀರನ್ನು ಮೈದಾನಕ್ಕೆ ಹರಿ ಬಿಡುತ್ತಿದ್ದಾರೆ.
ಇಡೀ ಕ್ರೀಡಾಂಗಣ ಕಲುಷಿತವಾಗಿ ವಾಯುವಿಹಾರಕ್ಕೆ ಶುದ್ಧ ಗಾಳಿ, ಉತ್ತಮ ವಾತಾವರಣ ಅರಸಿ ಬರುವವರು ಅನಾರೋಗ್ಯದಿಂದ ಬಳಲುವಂತಾಗಿದೆ. ವಾಯುವಿಹಾರಕ್ಕೆ ಬರುವ ಬಹುತೇಕ ವೃದ್ಧರು ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಲುಷಿತ ನೀರು ನಿಂತು ಹಲವು ಸಾಂಕ್ರಾಮಿಕ ರೋಗಗಳ ಆವಾಸ ಸ್ಥಾನವಾಗಿದೆ.
ಈ ಬಗ್ಗೆ ಸಾರ್ವಜನಿಕರು ಹಲವು ಬಾರಿ ಆಸ್ಪತ್ರೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಕ್ರಮಕ್ಕೆ ಮುಂದಾಗಿಲ್ಲ. ಈಗಾಗಲೇ ಅವಳಿ ಜಿಲ್ಲೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರೂ ಯಾವುದೇ ಬದಲಾವಣೆ ಆಗಿಲ್ಲ. ಇತ್ತೀಚೆಗೆ ಪಟ್ಟಣದಲ್ಲಿ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಡಿಸಿ ಹಾಗೂ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಪರಿಶೀಲನೆ ನಡೆಸಿ ಆಸ್ಪತ್ರೆ ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸಲು ಸೂಚಿಸಿದರೂ ಅಧಿಕಾರಿಗಳು ಗಾಢ ನಿದ್ರೆಯಲ್ಲಿದ್ದಾರೆ.
ಎಲ್ಲೆಲ್ಲೂ ಮದ್ಯದ ಬಾಟಲ್‌ಗಳು: ಕ್ರೀಡಾಂಗಣದಲ್ಲಿ ಒಂದು ಕಡೆ ಮಾತ್ರ ವಿದ್ಯುತ್ ದೀಪ ಅಳವಡಿಸಿದ್ದು, ಇನ್ನೊಂದು ಭಾಗದಲ್ಲಿ ವಿದ್ಯುತ್ ಕಂಬಗಳಿದ್ದರೂ ದೀಪ ಹಾಕಿಲ್ಲ. ಈ ಹಿಂದೆ ಹಾಕಿದ್ದ ದೀಪಗಳು ಹಾಳಾದ ನಂತರ ಪಪಂ ಅಧಿಕಾರಿಗಳು ಅಳವಡಿಸುವ ಗೋಜಿಗೆ ಹೋಗಿಲ್ಲ. ಸಂಜೆ ವಾಯುವಿಹಾರಕ್ಕೆ ಬರುವ ವೃದ್ಧರು ಬೆಳಕಿರುವ ಭಾಗದಲ್ಲಿ ಮಾತ್ರ ಕಾಲ ಕಳೆಯುತ್ತಾರೆ. ಅಲ್ಲದೆ ಮಳೆಯಿಂದ ಅನೇಕ ಮರ-ಗಿಡಗಳು ಬೆಳೆದಿವೆ. ಇದೇ ಪರಿಸ್ಥಿತಿಯಲ್ಲಿ ಸಾರ್ವಜನಿಕರು ವಾಯುವಿಹಾರ ಮಾಡಬೇಕಿದೆ. ರಾತ್ರಿ ವೇಳೆ ಕುಡುಕರ ಹಾವಳಿಯೂ ಹೆಚ್ಚಾಗಿ ಕುಡಿದು, ತಿಂದು ತ್ಯಾಜ್ಯ ಎಸೆಯುತ್ತಿದ್ದಾರೆ. ಇದರಿಂದ ಇಡೀ ಕ್ರೀಡಾಂಗಣದಲ್ಲಿ ಗಾಜುಗಳು ಕಂಡುಬರುತ್ತವೆ.
ಅಧಿಕಾರಿಗಳು ಕ್ರಮಕ್ಕೆ ಮುಂದಾಗಲಿ: ಕ್ರೀಡಾಂಗಣದಲ್ಲಿ ತಾಲೂಕಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಕ್ರೀಡಾಭ್ಯಾಸ ಮಾಡುತ್ತಾರೆ. ಆದರೆ, ಸ್ವಚ್ಛತೆ ಇಲ್ಲದಿರುವ ಕಾರಣ ವಿದ್ಯಾರ್ಥಿಗಳಿಗೂ ತೊಂದರೆಯಾಗುತ್ತಿದೆ. ಆದ್ದರಿಂದ ವಿದ್ಯುತ್ ದೀಪ ಅಳವಡಿಸಿ, ಆಸ್ಪತ್ರೆ ತ್ಯಾಜ್ಯ ಬಿಡದಂತೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ವಹಿಸುವಂತೆ ಪಪಂ ಮಾಜಿ ಅಧ್ಯಕ್ಷ ಉದಯ ಜನ್ನು, ಪ್ರಮುಖರಾದ ಕೋಗಳಿ ಮಂಜುನಾಥ, ಬಾಣದ ಶಿವಮೂರ್ತಿ, ವಕೀಲ ಜಯರಾಮ ರಮೇಶ್, ಗುಪ್ಪಾಲ್ ಕೊಟ್ರೇಶ್, ವೆಂಕಟೇಶ ಆಗ್ರಹಿಸಿದ್ದಾರೆ.