

ಗದಗ: ಮಕ್ಕಳು ಶೈಕ್ಷಣಿಕ ಜೀವನದ ವಿದ್ಯಾರ್ಥಿ ಹಂತದಿಂದಲೇ ಕ್ರೀಡಾ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಆರೋಗ್ಯಯುತ ಜೀವನ ಸಾಗಿಸಬೇಕು ಎಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಅವರು ತಿಳಿಸಿದರು.
ನಗರದ ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಆಯೋಜಿಸಲಾದ ಪದವಿ ಪೂರ್ವ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಕ್ರೀಡಾ ಧ್ವಜಾರೋಹಣ ಹಾಗೂ ಕ್ರೀಡಾ ಜ್ಯೋತಿ ನೀಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಕ್ರೀಡೆಗಳಲ್ಲಿ ಸೋಲು ಗೆಲುವಿಗೆ ಮಹತ್ವ ನೀಡದೇ ಚಟುವಟಿಕೆ ಹಾಗೂ ಹುಮ್ಮಸ್ಸಿನಿಂದ ಭಾಗವಹಿಸುವಿಕೆ ಮುಖ್ಯ. ನಿಮ್ಮ ಇಂದಿನ ಕ್ರೀಡಾ ಚಟುವಟಿಕೆ ಭಾಗವಹಿಸುವಿಕೆಯು ಮುಂದಿನ ಜೀವನದಲ್ಲಿ ನೆನಪಿನಂಗಳದಲ್ಲಿ ಉಳಿಯುವಂತೆ ಆಗಬೇಕು ಎಂದರು. ದೈಹಿಕ ಚಟುವಟಿಕೆಗಳು ಶಿಕ್ಷಣ ವ್ಯವಸ್ಥೆಯಲ್ಲಿ ಕಡೆಗಣನೆಯಾದಾಗ ಸಮಾಜದಲ್ಲಿ ಜಿಮ್ ಹಾಗೂ ವ್ಯಾಯಾಮ ತರಬೇತಿ ಸಂಸ್ಥೆಗಳು ಉಗಮವಾಗಿವೆ. ಜೀವನವು ಸಂಪೂರ್ಣವಾಗಿ ಚಟುವಟಿಕೆಯಿಂದ ಕೂಡಿರಲು ದೈಹಿಕ ಕ್ರೀಡಾ ಚಟುವಟಿಕೆ ಮುಖ್ಯವಾಗಿದೆ ಎಂದರು.
ಪದವಿ ಪೂರ್ವ ಹಂತದಲ್ಲಿ ಮಕ್ಕಳು ತಮ್ಮ ಜೀವನದ ನಿರ್ಣಾಯಕ ಹಂತವಾಗಿರುವುದರಿಂದ ಹೆಚ್ಚಾಗಿ ಶೈಕ್ಷಣಿಕ ವಿದ್ಯಾಭ್ಯಾಸದಲ್ಲಿ ಅಂಕಗಳ ಗಳಿಸುವಿಕೆಯಲ್ಲಿ ಗಮನ ಹರಿಸುತ್ತಾರೆ. ಇದರಿಂದಾಗಿ ಮಕ್ಕಳು ಮಾನಸಿಕ ಹಾಗೂ ದೈಹಿಕವಾಗಿ ಅಶಕ್ತರಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ.ಶೈಕ್ಷಣಿಕ ಪ್ರಗತಿಯೊಂದಿಗೆ ದೈಹಿಕ ಕ್ರೀಡಾ ಚಟುವಟಿಕೆಗಳಲ್ಲಿಯೂ ಸಹ ತಮ್ಮನ್ನು ತಾವು ತೊಡಗಿಸಿಕೊಂಡು ಜೀವನವನ್ನು ಕ್ರೀಯಾಶೀಲತೆಯಿಂದ ಕೂಡಿರುವಂತೆ ನೋಡಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ಪಂಜಾಬ ಹರಿಯಾಣ ರಾಜ್ಯಗಳಲ್ಲಿನ ಮಕ್ಕಳು ಹಾಗೂ ವಯಸ್ಕರು ದೈಹಿಕವಾಗಿ ಹೆಚ್ಚು ಸದೃಢರಾಗಿರುತ್ತಾರೆ. ಹಾಗೂ ಸಾಕಷ್ಟು ಚಟುವಟಿಕೆಯಿಂದ ಕೂಡಿರುತ್ತಾರೆ. ಇದಕ್ಕೆ ಕಾರಣ ಅಲ್ಲಿನ ಆಹಾರ ವ್ಯವಸ್ಥೆ ಹಾಗೂ ಕ್ರೀಡಾ ಸ್ಪೂರ್ತಿ, ದೈಹಿಕ ಕ್ರಿಯಾಶೀಲತೆ ಕಾರಣವಾಗಿದೆ. ಅದರಂತೆ ಮೂಲಭೂತ ಶಿಕ್ಷಣಕ್ಕೆ ನಾವೆಲ್ಲರೂ ಹೆಚ್ಚು ಒತ್ತು ನೀಡುವ ಮೂಲಕ ಕ್ರೀಯಾಶೀಲವಾಗಿಸಬೇಕಿದೆ ಎಂದರು.
ಸರ್ಕಾರಿ ಹಾಗೂ ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ದೈಹಿಕ ಶಿಕ್ಷಕರ ಕೊರತೆ ಅಧಿಕವಾಗಿರುವ ಕುರಿತು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಅವರು ಮಾತನಾಡಿದ್ದು ಈ ವಿಷಯವನ್ನು ಗಂಭೀರವಾಗಿ ವಿಧಾನಸಭೆಯಲ್ಲಿ ಚರ್ಚಿಸುವ ಮೂಲಕ ಪಕ್ಷಾತೀತವಾಗಿ ದೈಹಿಕ ಶಿಕ್ಷಕರ ನೇಮಕಾತಿ ಕುರಿತು ಕ್ರಮ ಕೈಗೊಳ್ಳಬೇಕಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಮಾತನಾಡಿ ರಾಜ್ಯದಲ್ಲಿ 1102 ಸರ್ಕಾರಿ ಹಾಗೂ 1015 ಅನುದಾನಿತ ಪದವಿ ಪೂರ್ವ ಕಾಲೇಜುಗಳಿದ್ದು ಇಲ್ಲಿ ಅಗತ್ಯಕ್ಕೆ ತಕ್ಕಂತೆ ದೈಹಿಕ ಶಿಕ್ಷಕರ ನೇಮಕಾತಿ ಕಳೆದ ಹಲವಾರು ವರ್ಷಗಳಿಂದ ಆಗಿಲ್ಲ. ಈಬಗ್ಗೆ ಸದನದಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಗಮನ ಸೆಳೆಯಲಾಗಿದೆ. ಕಾನೂನು ಸಚಿವರು ಹಾಗೂ ಸಂಪುಟದ ಹಿರಿಯ ಸಚಿವರಾದ ಎಚ್.ಕೆ.ಪಾಟೀಲ ಅವರು ದೈಹಿಕ ಶಿಕ್ಷಕರ ನೇಮಕಾತಿ ಕುರಿತು ಗಮನ ಹರಿಸುವಂತೆ ಕೋರಿದರು.
ಕಳೆದ ವರ್ಷ ಕರಾಟೆ ಹಾಗೂ ಯೋಗ ಸ್ಪರ್ಧೆಯಲ್ಲಿ ಜಿಲ್ಲೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ ಪಾಲ್ಗೊಳ್ಳುವ ಮೂಲಕ ಕ್ರೀಡಾಸ್ಪೂರ್ತಿ ಮೆರೆದಿದ್ದು ಇನ್ನೂ ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಹಲವು ಕ್ರೀಡೆಗಳಲ್ಲಿ ರಾಜ್ಯ, ರಾಷ್ಟ್ರ ಮಟ್ಟದ ಸಾಧನೆ ಮಾಡಲು ಅಣಿಯಾಗಬೇಕಿದೆ ಎಂದರು.
ವೇದಿಕೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ.ಕೃಷ್ಣಪ್ಪ, ಜಿ.ಎನ್. ಕುರ್ತಕೋಟಿ, ಎಂ.ಸಿ. ಕಟ್ಟಿಮನಿ, ಸೋಮಣ್ಣ ಸೇರಿದಂತೆ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು, ಮಕ್ಕಳು ಹಾಜರಿದ್ದರು. ಬಿಪಿನ್ ಚಿಕ್ಕಟ್ಟಿ ಪದವಿ ಪೂರ್ವ ಕಾಲೇಜಿನ ಪ್ರೊ. ಎಸ್.ವೈ. ಚಿಕ್ಕಟ್ಟಿ ಅವರು ಅತಿಥಿಗಳನ್ನು ಸ್ವಾಗತಿಸಿ ವಂದಿಸಿದರು.