

ಮಂಡ್ಯ: ಯುವಜನತೆ ವಿದ್ಯಾಭ್ಯಾಸ ಮುಗಿಸಿದ ನಂತರ ಉದ್ಯೋಗ ಗಳಿಸಿ ಉತ್ತಮ ಜೀವನ ನಡೆಸಲು ಕೌಶಲಾಭಿವೃದ್ಧಿ ತರಬೇತಿ ಅತಿ ಮುಖ್ಯ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಕೌಶಲ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪಿಎಂ ವಿಶ್ವಕರ್ಮ ಯೋಜನೆಯಡಿ 128 ಬ್ಯಾಚ್‌ನಲ್ಲಿ 3,917 ಜನರಿಗೆ ವೃತ್ತಿಪರ ತರಬೇತಿ ನೀಡಲಾಗಿದೆ. ಬೇಡಿಕೆಗೆ ಅನುಗುಣವಾಗಿ ಕೈಗಾರಿಕೆಗಳ ಆವರಣದಲ್ಲಿಯೇ ಅಭ್ಯರ್ಥಿಗಳಿಗೆ ತರಬೇತಿ ನೀಡಿ ಉದ್ಯೋಗ ಕಲ್ಪಿಸಿ ಕೊಡುವ ವಿನೂತನ ಕಾರ್ಯಕ್ರಮವಾದ ಇಂಡಸ್ಟ್ರೀಸ್ ಲಿಂಕೇಜ್ ಸೆಲ್ಸ್ ಅನ್ನು ಕರ್ನಾಟಕ ಕೌಶಲಾಭಿವೃದ್ಧಿ ನಿಗಮ ಜಾರಿಗೊಳಿಸಿದೆ ಎಂದರು.
ನಲ್ ಜಲ್ ಯೋಜನೆಯು ಎನ್‌ಆರ್‌ಎಲ್‌ಎಂನಡಿ ರೂಪಿಸಿರುವ ಮಹಿಳಾ ಸ್ವ ಸಹಾಯ ಗುಂಪುಗಳ ಆಯ್ದ ಸದಸ್ಯರಿಗೆ ಬಹು ಕೌಶಲ ತರಬೇತಿಯಡಿ ಪ್ಲಂಬಿಂಗ್, ವಿದ್ಯುತ್ ಕೆಲಸ, ಕಲ್ಲು ಮಟ್ಟು ಕೆಲಸ, ಉಪಕರಣ ಮತ್ತು ಯಂತ್ರೋಪಕರಣ ರಿಪೇರಿ ಬಗ್ಗೆ ಬಹು ಕೌಶಲ ತರಬೇತಿ ನೀಡಿ ವೃತ್ತಿಪರ ಶಿಕ್ಷಣ ಮತ್ತು ರಾಷ್ಟ್ರೀಯ ತರಬೇತಿ ಮಂಡಳಿ ವತಿಯಿಂದ ಪ್ರಮಾಣ ಪತ್ರ ನೀಡಲಾಗುವುದು. ಈ ಯೋಜನೆಯಲ್ಲಿ 49 ಜನರಿಗೆ ತರಬೇತಿ ನೀಡಲಾಗಿದೆ. ಇದಲ್ಲದೆ ನನ್ನ ವೃತ್ತಿ ನನ್ನ ಆಯ್ಕೆ ಕಾರ್ಯಕ್ರಮವನ್ನು ರಾಜ್ಯಾದ್ಯಂತ 500 ಶಾಲೆ, ಕಾಲೇಜಿನಲ್ಲಿ ಅನುಷ್ಠಾನಗೊಳಿಸಲಾಗಿದೆ. ಈ ಯೋಜನೆಯಲ್ಲಿ 8 ರಿಂದ 12ನೇ ತರಗತಿ ಮಕ್ಕಳಿಗೆ ಅವರ ಆಸಕ್ತಿ ಮತ್ತು ಸಾಮರ್ಥ್ಯದ ಆಧಾರದ ಮೇಲೆ ಮಾರ್ಗದರ್ಶನ ನೀಡಲಾಗುವುದು. ಜಿಲ್ಲೆಯ ಐದು ತಾಲೂಕಿನಲ್ಲಿ ಒಂದೊಂದು ಶಾಲೆ ಆಯ್ದುಕೊಂಡು ತರಬೇತಿ ನೀಡಲಾಗುವುದು ಎಂದು ತಿಳಿಸಿದರು.
ಪ್ರಧಾನ ಮಂತ್ರಿ ಕೌಶಲ ವಿಕಾಸ್ ಯೋಜನೆ 4.0 ಅಡಿ ಆಧುನಿಕ ಕೋಷ್ಟಕದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಬ್ಲಾಕ್‌ಚೈನ್ 3ಡಿ ಪ್ರಿಂಟಿಂಗ್, ಡ್ರೋನ್ ಬಳಸುವಿಕೆ ತರಬೇತಿ ನೀಡಲಾಗುವುದು. ದೀನ್ ದಯಾಳ್ ಅಂತ್ಯೋದಯ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ 222 ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಈ ಯೋಜನೆಯ ಮೂಲ ಉದ್ದೇಶ ನಗರ ಪ್ರದೇಶದ ಬಿಪಿಎಲ್ ಕುಟುಂಬಕ್ಕೆ ಸವಲತ್ತುಗಳನ್ನು ದೊರಕಿಸಿ ಬಡತನದ ರೇಖೆಯಿಂದ ಮೇಲೆ ತರುವುದಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಜಿಪಂ ಸಿಇಒ ಕೆ.ಆರ್.ನಂದಿನಿ, ಕೌಶಲ ಅಭಿವೃದ್ಧಿ ಅಧಿಕಾರಿ ನಾಗನಂದ ಇತರರಿದ್ದರು.