ಕಾವೇರಿ ಆರತಿ ಹೆಸರಲ್ಲಿ ಹಣ ಪೋಲು: ವೈಜ್ಞಾನಿಕ ಸಂಶೋಧನಾ ಪರಿಷತ್ ಗೌರವಾಧ್ಯಕ್ಷ ಬಿ.ಟಿ.ವಿಶ್ವನಾಥ್ ಅಸಮಾಧಾನ

District Scientific Research Council Press Conference Mandya
Published on

ಮಂಡ್ಯ: ರಾಜ್ಯಸರ್ಕಾರ ಕಾವೇರಿ ಆರತಿ ಹೆಸರಿನಲ್ಲಿ ಹಣ ಪೋಲು ಮಾಡುತ್ತಿರುವುದು ಖಂಡನೀಯ. ಇಂತಹ ಆಚರಣೆ ಬಿಟ್ಟು ರೈತರು ಹಾಗೂ ಜನಸಾಮಾನ್ಯರಿಗೆ ನೀರಿನ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಿ ಎಂದು ಜಿಲ್ಲಾ ವೈಜ್ಞಾನಿಕ ಸಂಶೋಧನಾ ಪರಿಷತ್ ಗೌರವಾಧ್ಯಕ್ಷ ಬಿ.ಟಿ.ವಿಶ್ವನಾಥ್ ಒತ್ತಾಯಿಸಿದರು.

ಸಂವಿಧಾನದ ಆರ್ಟಿಕಲ್ 51(ಎ)(ಎಚ್) ಸ್ಪಷ್ಟಪಡಿಸುವಂತೆ ದೇಶದ ಪ್ರಜೆ ತನ್ನ ನಡೆ, ನುಡಿ ಬದುಕಿನಲ್ಲಿ ವೈಚಾರಿಕತೆ ಅಳವಡಿಸಿಕೊಳ್ಳಬೇಕಿರುವುದು ಆದ್ಯ ಕರ್ತವ್ಯವಾಗಿದೆ. ಹೀಗಿರುವಾಗ ಸರ್ಕಾರ, ರಾಜಕೀಯ ಪಕ್ಷ ಪೈಪೋಟಿಗೆ ಬಿದ್ದಿವೆ. ಅಂತೆಯೇ ಧಾರ್ಮಿಕ ಚಟುವಟಿಕೆಗೆ ಜನರ ತೆರಿಗೆಯ ಹಣ ಪೋಲು ಮಾಡಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಗಂಗಾರತಿ ಆಚರಣೆಗೆ ಹೇಗೆ ಜನರ ಹಣ ಪೋಲು ಮಾಡುವುದೋ ಅಪರಾಧವೋ, ಕಾವೇರಿ ಆರತಿಗೂ ಸರ್ಕಾರ ಮುಂದಾಗಿರುವುದು ಅಪರಾಧವೇ ಆಗಲಿದೆ. ಇದರ ಬದಲು ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿರುವ ಕೆರೆ, ಕುಂಟೆಗೆ ನೀರು ತುಂಬಿಸುವುದು. ಕೆರೆ ಜಾಲವನ್ನು ವಿಸ್ತರಣೆ ಮಾಡುವುದು. ಮುಖ್ಯವಾಗಿ ಕಾವೇರಿ ನದಿಗೆ ಸೇರುತ್ತಿರುವ ಕೊಳಚೆ ನೀರನ್ನು ತಪ್ಪಿಸಲಿ. ಜನ, ಜಾನುವಾರು, ಪಕ್ಷಿ ಹಾಗೂ ಜಲಚರ ಅಭಿವೃದ್ಧಿಗೆ ಪೂರಕವಾದ ಯೋಜನೆ ರೂಪಿಸಲಿ. ಅದನ್ನು ಬಿಟ್ಟು ಕಾವೇರಿ ಆರತಿ ಮಾಡುವುದರಿಂದ ಹಣ ವ್ಯರ್ಥವಾಗುವುದರ ಜತೆಗೆ ಜನರನ್ನು ಮೌಢ್ಯಕ್ಕೆ ತಳ್ಳಿದಂತಾಗುತ್ತದೆ ಎಂದರು.

ಇನ್ನು ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಸಂತಸದ ವಿಷಯ. ಈ ಹಿನ್ನೆಲೆಯಲ್ಲಿ ನೆಲ ಮೂಲ ಸಂಸ್ಕೃತಿಯ ವೈಚಾರಿಕ ಗಟ್ಟಿತನದ ಜತೆಗೆ ಬುದ್ಧ ಮಾರ್ಗದ ಪ್ರತಿಪಾದಕರೂ ಆಗಿರುವ ಪ್ರೊ.ಕೆ.ಎಸ್.ಭಗವಾನ್ ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.

ಪರಿಷತ್‌ನ ಗೌರವಾಧ್ಯಕ್ಷೆ ವಸಂತಮ್ಮ ಮಾತನಾಡಿ, ಇಂದಿನ ಡಿಜಿಟಲ್ ಯುಗದಲ್ಲಿಯೂ ಮೌಢ್ಯಾಚರಣೆ ಕ್ಯಾನ್ಸರ್‌ನಂತೆ ಹಬ್ಬುತ್ತಿದೆ. ಇದಕ್ಕೆ ಮಹಿಳೆಯರನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದಲ್ಲದೆ ಜಿಲ್ಲೆಯಲ್ಲಿ ಹೆಣ್ಣು ಭ್ರೂಣ ಹತ್ಯೆ ವ್ಯಾಪಕವಾಗಿ ನಡೆಯುತ್ತಿದೆ. ಆದ್ದರಿಂದ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಲು 87ನೇ ನುಡಿಜಾತ್ರೆಯಲ್ಲಿ ಮಹಿಳಾ ವೈಚಾರಿಕ ಗೋಷ್ಠಿ ಆಯೋಜನೆ ಮಾಡಬೇಕೆಂದು ಆಗ್ರಹಿಸಿದರು.

ಜಿಲ್ಲಾಧ್ಯಕ್ಷ ಶಿವಲಿಂಗಯ್ಯ, ಗೌರವಾಧ್ಯಕ್ಷ ಬಸವರಾಜು, ಉಪಾಧ್ಯಕ್ಷ ಗುರುಮೂರ್ತಿ, ವೆಂಕಟಚಲಯ್ಯ, ಜಯರಾಮು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net