ನಕಲಿ ದಾಖಲೆ ಸೃಷ್ಟಿಗೆ ಮುಂದಾದ ಜಿಲ್ಲಾಡಳಿತ-ಕಸಾಪ ಆಕ್ಷೇಪ

Kasapa press meet
Published on

ಕಾರವಾರ: ಉತ್ತರ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಬಗ್ಗೆ ಕಾರವಾರ ತಾಲೂಕು ಕನ್ನಡ ಸಾಹಿತ್ಯ ಆಕ್ಷೇಪ ವ್ಯಕ್ತಪಡಿಸಿದೆ.‌
ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಕಸಾಪ ತಾಲೂಕು ಅಧ್ಯಕ್ಷ ರಾಮಾ ನಾಯ್ಕ, ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ ಪಡೆದ ಎಲ್ಲರಿಗೆ ಅಭಿನಂದನೆ ಸಲ್ಲಿಸುತ್ತೇವೆ. ಪ್ರಶಸ್ತಿಗೆ ಭಾಜನರಾದವರ ಬಗ್ಗೆ ನಮ್ಮ ಆಕ್ಷೇಪವಿಲ್ಲ. ಆದರೆ, ಅಧಿಕಾರ ಶಾಹಿ ಆಯ್ಕೆಯಾಗಿದೆ. ಜಿಲ್ಲಾ‌ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯಲ್ಲಿ ಸಾಮಾಜಿಕ ನ್ಯಾಯವಿಲ್ಲ. ಹಲವು ತಾಲೂಕುಗಳಿಗೆ ಪ್ರಶಸ್ತಿಯನ್ನೇ ನೀಡಿಲ್ಲ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಪ್ರಕ್ರಿಯೆ ಪ್ರಜಾಸತ್ತಾತ್ಮಕ ರೀತಿಯಲ್ಲಿ ಆಗಿಲ್ಲ. 8 ಜನರ‌ ಆಯ್ಕೆ ಸಮಿತಿಯಲ್ಲಿ ಐವರು ಅಧಿಕಾರಿಗಳೇ ಇದ್ದಾರೆ.
ಅಕ್ಟೋಬರ್ 30 ರಂದು ಸಾಯಂಕಾಲ 5 ಗಂಟೆಗೆ ಆಯ್ಕೆ ಸಮಿತಿ ಸಭೆ ಆಯೋಜಿಸಲಾಗಿತ್ತು. ಆದರೆ, ಅದೇ ದಿನ 4.30 ಕ್ಕೆ‌ ಕಸಾಪ ಜಿಲ್ಲಾ ಅಧ್ಯಕ್ಷರಿಗೆ ಸಂದೇಶ ಹಾಕಿ ಸಭೆ ರದ್ದಾಗಿರುವುದಾಗಿ ತಿಳಿಸಲಾಗಿದೆ.
ಪ್ರಶಸ್ತಿ ಪ್ರದಾನ ಮಾಡಿದ ನಂತರ ಸಭೆ ನಡೆದಿದೆ ಎಂದು ಸದಸ್ಯರ ಮನೆಗಳಿಗೆ ಹೋಗಿ ದುಂಬಾಲು‌ ಬಿದ್ದು ಸಹಿ ಪಡೆಯಲಾಗಿದೆ. ಜಿಲ್ಲಾಡಳಿತ ಸುಳ್ಳು ದಾಖಲೆ ಸೃಷ್ಟಿ ಮಾಡಲು ಹೊರಟಿದೆ ಎಂದು ಆರೋಪಿಸಿದರು.
ಸರ್ಕಾರಿ ಅಧಿಕಾರಿಗಳಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ಇದೆ. ಆದರೆ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ 9 ಅಧಿಕಾರಿಗಳನ್ನು ಆಯ್ಕೆ ಮಾಡಲಾಗುತ್ತಿದೆ. 6 ತಿಂಗಳ ಹಿಂದೆ ಜಿಲ್ಲೆಗೆ ಬಂದ ಅಧಿಕಾರಿಗೆ ಪ್ರಶಸ್ತಿ ನೀಡಲಾಗಿದೆ.

3 ತಿಂಗಳ ಹಿಂದೆ ಜಿಲ್ಲೆಗೆ ಬಂದ ಜಿಲ್ಲಾ ಅಧಿಕಾರಿಗೆ ಜಿಲ್ಲೆಯ ಬಗ್ಗೆ, ಕಲೆ, ಸಾಹಿತ್ಯದ ಬಗ್ಗೆ ಏನು ಗೊತ್ತಿದೆ ಎಂದು ರಾಮಾ ನಾಯ್ಕ ಪ್ರಶ್ನಿಸಿದರು.
ನೀವು ಇಷ್ಟು ನಿರ್ಲಕ್ಷ್ಯ ಮಾಡುವುದಿದ್ದರೆ, ಕನ್ನಡ ಸಾಹಿತ್ಯ ಪರಿಷತ್ ಸ್ವತಃ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಮಾಡಲು ಸಿದ್ಧವಿದೆ ಎಂದರು.
ಕಸಾಪ ಪದಾಧಿಕಾರಿ ಜಿ.ಡಿ.ಮನೋಜೆ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಕಳವಳಕಾರಿಯಾಗಿದೆ. ನಿಯಮಾವಳಿಗಳನ್ನು ಗಾಳಿಗೆ ತೂರಿ ಆಯ್ಕೆ ಮಾಡಲಾಗಿದೆ. ಪ್ರತಿಭಾವಂತರು ಎಲ್ಲ ಜಾತಿ, ಜನಾಂಗ, ಸಮೂಹದಲ್ಲಿದ್ದಾರೆ. ಆದರೆ, 26 ರಲ್ಲಿ ಒಬ್ಬರೂ ಎಸ್ ಸಿಗಳ ಹೆಸರಿಲ್ಲ. ಲಿಂಗಾಯತರಿಲ್ಲ.ಕಾಟಾಚಾರಕ್ಕೆ ಮನ ಬಂದಂತೆ ತಮ್ಮ‌ ಹಿತಾಸಕ್ತಿಗಳನ್ನು ಕಾಪಾಡಲು ಆಯ್ಕೆ ಮಾಡಲಾಗಿದೆ ಎಂದರು.

ದಾರಿ ತಪ್ಪಿದ ಜಿಲ್ಲಾಡಳಿತ:
ಕಸಾಪ ಪದಾಧಿಕಾರಿ ಮಾಧವ ನಾಯ್ಕ ಮಾತನಾಡಿ, ಜಿಲ್ಲಾಡಳಿತ ಕಾರ್ಯಕ್ರಮ ಆಚರಣೆಯಲ್ಲಿ ದಾರಿ ತಪ್ಪಿದೆ. ರಾಜ್ಯಕ್ಕೆ ಕರ್ನಾಟಕ ಹೆಸರು ಬಂದು 50 ವರ್ಷ ಆಗಿರುವ ಸುಸಂದರ್ಭದಲ್ಲಿ‌ ಪ್ರತಿ ಗ್ರಾಪಂ ಹಂತದಲ್ಲಿ ಆಚರಣೆ ನಡೆಯಬೇಕಿತ್ತು. ಅದಾಗಿಲ್ಲ. ಸಂಘ, ಸಂಸ್ಥೆಗಳನ್ನು ಆಚರಣೆಗೆ ಸೇರಿಸಿಕೊಂಡಿಲ್ಲ. ರಾಜರಾಜೇಶ್ವರಿ ಭಾವಚಿತ್ರ ಮೆರವಣಿಗೆ ಸರಿಯಾಗಿ ಆಗಿಲ್ಲ. ಅರ್ಜಿ ಹಾಕಿ ಪ್ರಶಸ್ತಿ ಕೊಡುವುದನ್ನು ಸರ್ಕಾರ ಕೈಬಿಡಬೇಕು. ಇನ್ನು ವಿವಿಧ ಜಯಂತಿಗಳನ್ನೂ ಕಾಟಾಚಾರಕ್ಕೆ‌ಆಚರಣೆ ಮಾಡಲಾಗುತ್ತಿದೆ ಅದನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ: ಇನ್ನು ನೀವೂ ಪೊಲೀಸರಿಗೆ ಸ್ಟಾರ್ ನೀಡಬಹುದು!!
ರಂಗಭೂಮಿ ಕಲಾವಿದರ ತಾಲೂಕು‌‌ ಸಂಘದ ಅಧ್ಯಕ್ಷ, ಬಾಬು ಶೇಖ್ ಮಾತನಾಡಿ,‌ ರಂಗಭೂಮಿಯಲ್ಲಿ ಸಾಕಷ್ಟು ಕಲಾವಿದರಿದ್ದಾರೆ. ಅವರನ್ನು ಗುರುತಿಸಿಲ್ಲ ಅದನ್ನು ನಾನು ಖಂಡಿಸುತ್ತೇನೆ ಎಂದರು.
ರಮೇಶ ಗುನಗಿ, ಎಂಎ ಖತೀಬ್, ಖೈರುನ್ನಿಸ್ಸಾ ಶೇಖ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net