ಅನುದಾನ ಬಳಕೆ ಮೂಲಕ ಪ್ರಗತಿ ಸಾಧಿಸಿ

meeting
ದೇವನಹಳ್ಳಿಯ ಜಿಪಂ ಸಭಾಂಗಣದಲ್ಲಿ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಪಿ.ಸಿ.ಜಾರ್ ಮಾತನಾಡಿದರು. ಡಿಸಿ ಡಾ.ಎನ್.ಶಿವಶಂಕರ್, ಸಿಇಒ ಡಾ.ಕೆ.ಎನ್.ಅನುರಾಧಾ ಅರಣ್ಯ ಇಲಾಖೆ ಅಧಿಕಾರಿ ಸರೀನಾ ಮತ್ತಿತರರು ಇದ್ದರು.
Published on

ಉಸ್ತುವಾರಿ ಕಾರ್ಯದರ್ಶಿ ಡಾ. ಪಿ.ಸಿ ಜಾಫರ್ ಸೂಚನೆ

ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ


ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಪ್ರಸಕ್ತ ಸಾಲಿಗೆ ಇಲಾಖೆಗಳಿಗೆ ಬಿಡುಗಡೆಯಾಗಿರುವ ಅನುದಾನಕ್ಕೆ ಸಂಬಂಧಿಸಿದಂತೆ ಆಯಾ ಇಲಾಖೆಗಳು ಕ್ರಿಯಾಯೋಜನೆ, ಟೆಂಡರ್ ಪ್ರಕ್ರಿಯೆ, ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಿ ಅನುದಾನವನ್ನು ಸಂಪೂರ್ಣ ಖರ್ಚು ಮಾಡುವ ಮೂಲಕ ಶೇ.100 ಪ್ರಗತಿ ಸಾಧಿಸಬೇಕು ಎಂದು ಆರ್ಥಿಕ ಇಲಾಖೆಯ ಕಾರ್ಯದರ್ಶಿ ಹಾಗೂ ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿಡಾ. ಪಿ.ಸಿ ಜಾಫರ್ ಸೂಚಿಸಿದರು.
ದೇವನಹಳ್ಳಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಇಲಾಖೆಗಳಿಗೆ ಬಿಡುಗಡೆಯಾದ ಹಣವನ್ನು ಸಂಪೂರ್ಣವಾಗಿ ಖರ್ಚು ಮಾಡಬೇಕು. ಮಾರ್ಚ್ ಅಂತ್ಯದವರೆಗೆ ಕಾಯದೆ ತ್ವರಿತವಾಗಿ ಪ್ರಕ್ರಿಯೆ ಪೂರ್ಣಗೊಳಿಸಿ ಡಿಸೆಂಬರ್ ಅಂತ್ಯ ಅಥವಾ ಜನವರಿಯೊಳಗೆ ಆರ್ಥಿಕ ಭೌತಿಕ ಪ್ರಗತಿ ಸಾಧಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ನರೇಗಾ ಯೋಜನೆಯ ಸದ್ಬಳಕೆ ಆಗಬೇಕು: ನರೇಗಾ ಯೋಜನೆಯಡಿ ಹಲವು ಇಲಾಖೆಗಳಿಗೆ ಅನುದಾನ ಬಿಡುಗಡೆ ಆಗುತ್ತದೆ. ಅನುದಾನ ಸದ್ಬಳಕೆಯಾಗಬೇಕು. ಅರಣ್ಯ ಇಲಾಖೆಯಲ್ಲಿ ನರೇಗಾ ಯೋಜನೆಯಡಿ ಗಿಡ ನೆಡುವ ಅರಣ್ಯೀಕರಣ ಕಾರ್ಯಕ್ರಮ ಉತ್ತಮ ಯೋಜನೆಯಾಗಿದೆ. ಸಾಮಾಜಿಕ ಮತ್ತು ಪ್ರಾದೇಶಿಕ ಅರಣ್ಯ ವಿಭಾಗವು ಹೆಚ್ಚು ಹೆಚ್ಚು ಸಸಿಗಳನ್ನು ನಾಟಿ ಮಾಡಿ ಬೇಡಿಕೆ ಅನುಗುಣವಾಗಿ ರೈತರಿಗೆ, ಸಾರ್ವಜನಿಕರಿಗೆ ಹಂಚಬೇಕು. ಹಾಗೆಯೇ ವಿವಿಧ ವನಮಹೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸರ್ಕಾರಿ ಜಾಗಗಳಲ್ಲಿ, ಬೆಟ್ಟಗುಡ್ಡಗಳಲ್ಲಿ, ಪ್ರವಾಸಿ ತಾಣಗಳಲ್ಲಿ, ರಸ್ತೆ ಬದಿಗಳಲ್ಲಿ ಹೆಚ್ಚೆಚ್ಚು ಸಸಿಗಳನ್ನು ನೆಡಬೇಕು. ನೆಟ್ಟ ನಂತರ ಸಸಿಗಳನ್ನು ಪೋಷಿಸಿ ಬೆಳೆಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಪ್ರಸ್ತುತ ಈಗಿರುವ ವಾತಾವರಣ ಪರಿಸ್ಥಿತಿಯಲ್ಲಿ ಹವಾಮಾನ ವೈಪರೀತ್ಯ, ಪರಿಸರ ಸಂರಕ್ಷಣೆ, ಪ್ರಕೃತಿ ಸಮತೋಲನ ಕಾಪಾಡಲು ಗಿಡ ಮರಗಳನ್ನು ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಉಸ್ತುವಾರಿ ಕಾರ್ಯದರ್ಶಿಗಳು ಅಭಿಪ್ರಾಯಪಟ್ಟರು.
ವಲಸಿಗರ ಮೇಲೆ ನಿಗಾ ವಹಿಸಿ: ಜಿಲ್ಲೆಗೆ ಬೇರೆ ಪ್ರದೇಶದಿಂದ, ಬೇರೆ ರಾಜ್ಯದಿಂದ ಅಥವಾ ಬೇರೆ ರಾಷ್ಟ್ರಗಳಿಂದ ಉದ್ಯೋಗಕ್ಕೆ ಅಥವಾ ಇನ್ನಿತರ ಕಾರ್ಯ ಚಟುವಟಿಕೆಗಳಿಗೆ ಆಗಮಿಸುವ ವಲಸಿಗರ ಬಗ್ಗೆ ನಿಗಾ ವಹಿಸಿ. ಜಿಲ್ಲೆಯ ಯಾವ ಪ್ರದೇಶಗಳಲ್ಲಿ ವಲಸಿಗರು ವಾಸವಾಗಿದ್ದಾರೆ ಎಂಬ ಮಾಹಿತಿಯನ್ನು ಕಲೆ ಹಾಕಿ ಯಾವ ಉದ್ದೇಶಕ್ಕಾಗಿ ಬಂದಿದ್ದಾರೆ, ಆರ್ಥಿಕ ಸ್ಥಿತಿಗತಿ, ಆರೋಗ್ಯ, ಶಿಕ್ಷಣ ಇವುಗಳ ಬಗ್ಗೆ ಮಾಹಿತಿ ಕಲೆ ಹಾಕಲು ಆರೋಗ್ಯ, ಕಾರ್ಮಿಕ, ಪೋಲಿಸ್ ಇಲಾಖೆಗೆ ಸೂಚಿಸಿದರು.

=======

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net