ಮಾತಿನ ಭರದಲ್ಲಿ ‘ಮಾರಾಟ’ ಎಂದಿದ್ದೆ: ಜಿಲ್ಲಾಧ್ಯಕ್ಷ ಎಚ್.ಎಸ್.ಮುದ್ದೇಗೌಡ ಸ್ಪಷ್ಟನೆ

District President H.S. Muddegowda press conference Mandya
Published on

ಮಂಡ್ಯ: ಕನ್ನಡ ಸಾಹಿತ್ಯ ಪರಿಷತ್ ಭವನ ಮಾರಾಟಕ್ಕಿದೆ ಎಂದು ಮಾತಿನ ಭರದಲ್ಲಿ ಹೇಳಿದ್ದೇನೆ ಎಂದು ಕಸಾಪ ಜಿಲ್ಲಾಧ್ಯಕ್ಷ ಪ್ರೊ.ಎಚ್.ಎಸ್.ಮುದ್ದೇಗೌಡ ಸ್ಪಷ್ಟನೆ ನೀಡಿದರು.

ಕಸಾಪ ಭವನ ಮಾರಾಟ ಮಾಡಲಾಗುವುದೆನ್ನುವ ವಿಚಾರ ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದ್ದ ಬೆನ್ನಲ್ಲೇ ಎಚ್ಚೆತ್ತುಕೊಂಡ ಮುದ್ದೇಗೌಡ ಸುದ್ದಿಗೋಷ್ಠಿಯಲ್ಲಿ ತಮ್ಮ ಮಾತಿನ ತಪ್ಪೊಪ್ಪಿಕೊಂಡರು. ಭವನವನ್ನು ಸರ್ಕಾರದ ಇಲಾಖೆಗೆ ವಹಿಸಿಕೊಟ್ಟು ನಗರದ ಹೃದಯ ಭಾಗದಲ್ಲಿ ಹೊಸದಾಗಿ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದೆನ್ನುವುದು ನನ್ನ ಉದ್ದೇಶ ಎಂದರು.

2008ರಲ್ಲಿ ನಾನು ಅಧ್ಯಕ್ಷನಾಗಿದ್ದಾಗ ಅಂದಿನ ಜಿಲ್ಲಾಧಿಕಾರಿ ಡಾ.ಜಾಫರ್ ಅವರಿಗೆ ಹೊಸ ಭವನ ನಿರ್ಮಾಣಕ್ಕೆ ಮನವಿ ನೀಡಲಾಗಿತ್ತು. ಅದರಂತೆ ಅವರು ಸ್ಥಳ ಹುಡುಕಿ ಎಂದಿದ್ದರು. ಆಗ ಕಸಾಪ ಅಧ್ಯಕ್ಷ ನಲ್ಲೂರು ಪ್ರಸಾದ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ಆಗಿನ ಅವಧಿಯಲ್ಲಿ ಮಾರಾಟಕ್ಕೆ ಆಲೋಚನೆ ಮಾಡಿದ್ದು, ಕಾಲ ಕೂಡಿ ಬರಲಿಲ್ಲ ಎಂದು ಸಮಜಾಯಿಷಿ ನೀಡಿದ ಜಿಲ್ಲಾಧ್ಯಕ್ಷ, ಕನ್ನಡ ಭವನ ಮಾರಾಟ ಮಾಡುವುದಿಲ್ಲ. ಜಿಲ್ಲಾಧಿಕಾರಿ ಮತ್ತು ಸರ್ಕಾರ ತೆಗೆದುಕೊಳ್ಳುವ ತೀರ್ಮಾನದ ಆಧಾರದ ಮೇಲೆ ನಿರ್ಣಯ ಕೈಗೊಳ್ಳಲಾಗುವುದು. ನಗರದ ಮಧ್ಯೆ ತಂದು ಉನ್ನತ ಮಟ್ಟದ ಕನ್ನಡ ಸಾಹಿತ್ಯ ಪರಿಷತ್ ಭವನವನ್ನು ನಿರ್ಮಿಸಲಾಗುವುದು ಎಂದು ಹೇಳಿದರು.

ಜಿಲ್ಲಾ ಕಸಾಪ ಕೋಶಾಧ್ಯಕ್ಷ ಬಿ.ಎಂ.ಅಪ್ಪಾಜಪ್ಪ, ಸಾಹಿತಿ ಕೃಷ್ಣ ಸ್ವರ್ಣಸಂದ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net