

ಬೆಳಗಾವಿ: ಜಿಲ್ಲಾಸ್ಪತ್ರೆಯಲ್ಲಿ ಸೂಕ್ತ ಭದ್ರತೆ ಇಲ್ಲ ಎನ್ನುವುದು ಪದೇಪದೆ ರುಜುವಾತು ಆಗುತ್ತಿದೆ. ಹಾಡಹಗಲೇ ಜಿಲ್ಲಾಸ್ಪತ್ರೆ ಆವರಣದಲ್ಲಿ ಕೊಲೆಗಳು ನಡೆಯುತ್ತಿವೆ. ಕೊಲೆಗಡುಕರಿಗೆ ಯಾರ ಭಯವೂ ಇಲ್ಲದಂತಾಗಿದೆ. ಹೀಗಾಗಿ ಆಸ್ಪತ್ರೆ ಆವರಣದಲ್ಲಿ 2 ತಿಂಗಳ ಅವಧಿಯಲ್ಲಿ ಎರಡು ಕೊಲೆ ಪ್ರಕರಣ ಘಟಿಸಿವೆ.
ಬುಧವಾರ ಕರ್ತವ್ಯದಲ್ಲಿದ್ದ ಜಿಲ್ಲಾಸ್ಪತ್ರೆಯ ಮಹಿಳಾ ಸೆಕ್ಯೂರಿಟಿ ಸುಧಾರಾಣಿ ಹಡಪದ (30) ಅವರನ್ನು ಬೈಲಹೊಂಗಲ ನಿವಾಸಿ ಈರಣ್ಣ ಎಂಬಾತ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಅಕ್ಟೋಬರ್ ತಿಂಗಳಲ್ಲಿ ಯುವಕನೊಬ್ಬನ್ನು ದುಷ್ಕರ್ಮಿಗಳು ಅಡ್ಡಾದಿಡ್ಡಿ ಕೊಚ್ಚಿ ಕೊಲೆ ಮಾಡಿದ್ದು, ನಗರದ ಜನತೆಯನ್ನು ಬೆಚ್ಚಿ ಬೀಳಿಸಿತ್ತು. ಈ ಘಟನೆ ಮಾಸುವ ಮುನ್ನವೇ ಜಿಲ್ಲಾಸ್ಪತ್ರೆಯಲ್ಲಿ ಮತ್ತೊಮ್ಮೆ ನೆತ್ತರು ಹರಿದಿದೆ. ಜಿಲ್ಲಾಸ್ಪತ್ರೆಗೆ ಸೆಕ್ಯೂರಿಟಿ ನೀಡುತ್ತಿದ್ದ ಮಹಿಳೆಯನ್ನೇ ಜನರೆದುರು ಬರ್ಬರವಾಗಿ ಕೊಲೆ ಮಾಡಲಾಗಿದೆ.
ಜನನಿಬಿಡ ಆಸ್ಪತ್ರೆಯಲ್ಲಿ ಕೊಲೆಗಳು ನಡೆಯುತ್ತಿವೆ. ಪೊಲೀಸರು ನೆಪಕ್ಕೆ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ನಾಗಕರಿಕರು ಆಡಿಕೊಳ್ಳುತ್ತಿದ್ದಾರೆ.
ಆಸ್ಪತ್ರೆಗೆ ನುಗ್ಗಿ ಗಲಾಟೆ: ಕೆಲ ತಿಂಗಳ ಹಿಂದೆ ಜಿಲ್ಲಾಸ್ಪತ್ರೆಗೆ ನುಗ್ಗಿ ಕರೊನಾ ಕರ್ತವ್ಯದಲ್ಲಿದ್ದ ವೈದ್ಯ-ಸಿಬ್ಬಂದಿಯನ್ನು ದುಷ್ಕರ್ಮಿಗಳು ಎಳೆದಾಡಿ ಗಲಾಟೆ ಮಾಡಿದ್ದರು. ಸಾಲದೆಂಬಂತೆ ಆಗತಾನೆ ಕರೊನಾ ರೋಗಿಗಳನ್ನು ಕರೆದುಕೊಂಡು ಬಂದಿದ್ದ ಆಂಬುಲೆನ್ಸ್‌ಗೆ ಬೆಂಕಿ ಹಚ್ಚಿ, ದುಷ್ಕೃತ್ಯ ಮೆರೆದಿದ್ದರು.
ಆಂಬುಲೆನ್ಸ್‌ಗೆ ಬೆಂಕಿ ಹಚ್ಚುವಷ್ಟು ಘೋರ ಕೃತ್ಯ ನಡೆದಿದ್ದು, ಜಿಲ್ಲಾಸ್ಪತ್ರೆ ಹಾಗೂ ಕುಂದಾನಗರಿಗೆ ಕಪ್ಪು ಚುಕ್ಕೆಯಾಗಿಯೇ ಉಳಿಯಿತು. ಇದಕ್ಕೆ ಪೊಲೀಸರ ವೈಫಲ್ಯವೇ ಕಾರಣ ಎಂದು ಪ್ರಜ್ಞಾವಂತರು ಆಡಿಕೊಂಡಿದ್ದರು. ಆಸ್ಪತ್ರೆ ಆವರಣದಲ್ಲಿ ಸೂಕ್ತ ಭದ್ರತೆ ಇದ್ದಿದ್ದರೆ, ಇಂತಹ ಕೃತ್ಯಗಳು ನಡೆಯುತ್ತಿರಲಿಲ್ಲ ಎಂಬ ಮಾತುಗಳು ವ್ಯಾಪಕವಾಗಿ ಕೇಳಿ ಬಂದಿದ್ದವು. ಒಟ್ಟಾರೆಯಾಗಿ ಸಾರ್ವಜನಿಕ ಸ್ಥಳಗಳಲ್ಲಿ ಸೂಕ್ತ ಪೊಲೀಸ್ ಭದ್ರತೆ, ನೀಡಿ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ದುಷ್ಕರ್ಮಿಗಳು ಜುಲೈ ತಿಂಗಳಲ್ಲಿ ಜಿಲ್ಲಾಸ್ಪತ್ರೆಗೆ ನುಗ್ಗಿ ಆಂಬುಲೆನ್ಸ್‌ಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈವರೆಗೂ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿಲ್ಲ. ಘಟನೆಯಲ್ಲಿ ಭಾಗಿಯಾದ 24 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನುಳಿದವರನ್ನು ಪತ್ತೆ ಹಚ್ಚುತ್ತಿದ್ದಾರೆ. ಘಟನೆ ನಡೆದು 6 ತಿಂಗಳಾದರೂ ದೋಷಾರೋಪ ಪಟ್ಟಿ ಸಲ್ಲಿಕೆಯಾಗದಿರುವುದು ವಿಪರ್ಯಾಸವೇ ಸರಿ.
ಜಿಲ್ಲಾಸ್ಪತ್ರೆ ಆವರಣದಲ್ಲಿ ಪೊಲೀಸ್ ಪಹರೆಯನ್ನು (ಬೀಟ್) ಬಿಗಿಗೊಳಿಸಲಾಗುವುದು. ಸೂಕ್ತ ಭದ್ರತೆ ಕಲ್ಪಿಸಲಾಗುವುದು. ಮುಂಜಾಗ್ರತಾ ಕ್ರಮ ಕೈಗೊಳ್ಳುವುದಕ್ಕೆ ಜಿಲ್ಲಾಸ್ಪತ್ರೆ ಸಿಬ್ಬಂದಿಗೂ ತಿಳಿಸಲಾಗಿದೆ.| ಡಾ. ಕೆ.ತ್ಯಾಗರಾಜ್ ಬೆಳಗಾವಿ ನಗರ ಪೊಲೀಸ್ ಆಯುಕ್ತ