

ಶಿವಮೊಗ್ಗ: ನಾವು ಕಳೆದ ಮೂರ್ನಾಲ್ಕು ತಿಂಗಳ ಹಿಂದೆಯೇ ಜಿಪಂ ಹಂತದಲ್ಲಿ ಸಭೆ ನಡೆಸಿ ಗ್ರಾಪಂ ಚುನಾವಣೆಗೆ ಸಿದ್ಧತೆ ಮಾಡಿಕೊಂಡಿದ್ದೆವು. ಇದೀಗ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಮೇಲ್ವಿಚಾರಣಾ ಸಮಿತಿ ರಚಿಸಲಾಗಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್ ತಿಳಿಸಿದರು.
ಕಳೆದ ಗ್ರಾಪಂ ಚುನಾವಣೆಯಲ್ಲಿ ಶೇ.75 ಗ್ರಾಪಂನಲ್ಲಿ ನಮ್ಮ ಪಕ್ಷದ ಬೆಂಬಲಿತರು ಅಧಿಕಾರ ಪಡೆದಿದ್ದರು. ಈ ಬಾರಿ ಇನ್ನಷ್ಟು ಉತ್ತಮ ಸಾಧನೆ ತೋರುವ ವಿಶ್ವಾಸವಿದೆ. ವಿಧಾನಸಭಾ ಕ್ಷೇತ್ರಗಳ ಹಂತದಲ್ಲಿ ಸಭೆ ನಡೆಸಿ ಯಾವ ಅಭ್ಯರ್ಥಿಗಳನ್ನು ಬೆಂಬಲಿಸಬೇಕೆಂಬ ತೀರ್ಮಾನ ಕೈಗೊಳ್ಳಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜಿಲ್ಲಾ ಮಟ್ಟದ ಮೇಲ್ವಿಚಾರಣಾ ಸಮಿತಿಯಲ್ಲಿ ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ, ಕಿಮ್ಮನೆ ರತ್ನಾಕರ್ ಸೇರಿ ಜಿಲ್ಲೆಯ ಹಾಲಿ, ಮಾಜಿ ಶಾಸಕರು, ಪಕ್ಷದ ಮಾಜಿ ಜಿಲ್ಲಾಧ್ಯಕ್ಷರು, ಡಿಸಿಸಿ ವೀಕ್ಷಕರನ್ನೊಳಗೊಂಡ 18 ಮಂದಿ ಸದಸ್ಯರಿದ್ದಾರೆ. ಇವರು ಗ್ರಾಪಂ ಚುನಾವಣೆ ರಣತಂತ್ರ ರೂಪಿಸಲಿದ್ದಾರೆ ಎಂದರು.
ಪ್ರತಿ ವಿಧಾನಸಭಾ ಕ್ಷೇತ್ರಗಳಿಗೂ ತಲಾ ನಾಲ್ವರು ವೀಕ್ಷಕರನ್ನು ಜಿಲ್ಲಾ ಕಾಂಗ್ರೆಸ್ನಿಂದ ನೇಮಕ ಮಾಡಲಾಗಿದೆ. ಬ್ಲಾಕ್ ಹಂತದ ಸಮಿತಿಗಳನ್ನು ಕ್ರಿಯಾಶೀಲಗೊಳಿಸಲಾಗಿದೆ. ಗ್ರಾಪಂ ಚುನಾವಣೆಯಲ್ಲಿ ನಿರೀಕ್ಷಿತ ಸಾಧನೆ ತೋರುವ ವಿಶ್ವಾಸವಿದೆ ಎಂದು ಹೇಳಿದರು.
ಬಿಜೆಪಿ ಖರೀದಿ ಸಂಸ್ಕೃತಿ: ಬಿಜೆಪಿ ಖರೀದಿ ಸಂಸ್ಕೃತಿ ಮೈಗೂಡಿಸಿಕೊಂಡಿದೆ. ನಮ್ಮ ಪಕ್ಷದಿಂದ ಆಯ್ಕೆಯಾದ ಪುರಸಭೆ, ಪಪಂ ಸದಸ್ಯರು ಪ್ರಮಾಣವಚನ ಸ್ವೀಕರಿಸುವ ಮುನ್ನವೇ ಅವರಿಗೆ ಆಮಿಷವೊಡ್ಡಿ ಬಿಜೆಪಿ ಮುಖಂಡರು ಸೆಳೆದಿದ್ದಾರೆ. ಇದು ನೈತಿಕ ರಾಜಕಾರಣದ ಲಕ್ಷಣವಲ್ಲ ಎಂದು ಎಚ್.ಎಸ್.ಸುಂದರೇಶ್ ಆಕ್ಷೇಪ ವ್ಯಕ್ತಪಡಿಸಿದರು.
ಕಾಂಗ್ರೆಸ್ ಕಾರ್ಯಕರ್ತರ ಪಡೆಯಿದೆ. ಅದನ್ನು ಗ್ರಾಪಂ ಚುನಾವಣೆಯಲ್ಲಿ ಸದ್ಬಳಕೆ ಮಾಡಿಕೊಳ್ಳಲಾಗುವುದು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನ ವಿರೋಧಿ ಕಾಯ್ದೆ ಹಾಗೂ ಆಡಳಿತ ವೈಫಲ್ಯವನ್ನು ಜನರ ಮುಂದಿಟ್ಟು ಮತಯಾಚಿಸಲಿದ್ದೇವೆ. ಸರ್ಕಾರದ ವೈಫಲ್ಯ ಖಂಡಿಸಿ ಡಿ.22ರಂದು ಶಿವಮೊಗ್ಗದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿ ಅನೇಕ ನಾಯಕರು ಇದರಲ್ಲಿ ಭಾಗವಹಿಸಬೇಕಿತ್ತು. ಆದರೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸಮಾವೇಶ ಕೈಬಿಡಲಾಗಿದೆ ಎಂದರು.
ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ರಾಮೇಗೌಡ, ಪ್ರಮುಖರಾದ ಚಂದ್ರಭೂಪಾಲ, ಸೌಗಂಧಿಕಾ, ಪ್ರವೀಣ್ ಸುದ್ದಿಗೋಷ್ಠಿಯಲ್ಲಿದ್ದರು.