

ಉಡುಪಿ: ಜಿಲ್ಲೆಯಲ್ಲಿ ಡಿಸಿ ಮನ್ನಾ ಭೂಮಿ ಆದಷ್ಟು ಶೀಘ್ರದಲ್ಲಿ ಗುರುತಿಸಿ ನಿಖರವಾದ ಅಂಕಿ ಅಂಶಗಳೊಂದಿಗೆ ಮುಂದಿನ ಕುಂದು ಕೊರತೆ ಸಭೆಗೆ ಮಾಹಿತಿ ನೀಡುವಂತೆ ಸಮಾಜ ಕಲ್ಯಾಣ ಇಲಾಖೆ ಹಾಗೂ ಕಂದಾಯ ಇಲಾಖಾಧಿಕಾರಿಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು ಸೂಚಿಸಿದ್ದಾರೆ.
ಕುಂದಾಪುರ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ (ದೌರ್ಜನ್ಯ ನಿಯಂತ್ರಣ) ಕಾಯ್ದೆ ಪ್ರಕಾರ ಕಂದಾಯ ಉಪವಿಭಾಗ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದರು.
ಸರ್ಕಾರದ ನಿಯಮಾವಳಿಯಂತೆ ಡಿಸಿ ಮನ್ನಾ ಭೂಮಿಯನ್ನು ಪರಿಶಿಷ್ಟ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ವಿತರಿಸಲು ಶೀಘ್ರದಲ್ಲಿ ಸೂಕ್ತ ಕ್ರಮಕೈಗೊಳ್ಳಬೇಕು. ಪ್ರತೀ ದಲಿತ ಕಾಲೊನಿಗಳಲ್ಲಿ ಪೊಲೀಸ್ ಸಭೆಗಳನ್ನು ಔಚಿತ್ಯ ಪೂರ್ಣವಾಗಿ ಏರ್ಪಡಿಸಬೇಕು. ಈ ಪಂಗಡದವರಿಗೆ ವಿವಿಧ ಇಲಾಖೆಗಳಡಿ ಸ್ವ ಉದ್ಯೋಗ ಕೈಗೊಳ್ಳಲು ಬ್ಯಾಂಕ್ ಸಬ್ಸಿಡಿ ಸಾಲ ಸೌಲಭ್ಯ ನೀಡಲಾಗುತ್ತಿದೆ. ಆದರೆ ಬ್ಯಾಂಕಿನ ವ್ಯವಸ್ಥಾಪಕರು ವಿನಾ ಕಾರಣ ಆಕ್ಷೇಪಿಸುತ್ತಿದ್ದು, ಈ ರೀತಿ ವರ್ತಿಸುವವರ ಮೇಲೆ ಸೂಕ್ತ ಕ್ರಮವಹಿಸುವಂತೆ ತಿಳಿಸಿದರು. ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತ ಕೆ.ರಾಜು ಉಪಸ್ಥಿತರಿದ್ದರು.