ಸಂತ್ರಸ್ತರಿಗೆ ಶೀಘ್ರ ಪರಿಹಾರ ನೀಡಿ

download
Published on


ವಿಜಯವಾಣಿ ಸುದ್ದಿಜಾಲ ಹಾಸನ
ಮಳೆಯಿಂದ ಹಾನಿಗೊಳಗಾದ ಕುಟುಂಬಗಳ ಸಂಪೂರ್ಣ ಮಾಹಿತಿ ಪಡೆದು ಸರ್ಕಾರದ ಮಾರ್ಗಸೂಚಿಯಂತೆ ಶೀಘ್ರವಾಗಿ ಪರಿಹಾರ ಒದಗಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಮಳೆ ಹಾನಿ ಹಾಗೂ ಪರಿಹಾರ ಕ್ರಮಗಳ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಮನೆ ಕಳೆದುಕೊಂಡವರಿಗೆ ರಾಜೀವ್‌ಗಾಂಧಿ ವಸತಿ ಯೋಜನೆಯಡಿ 5 ಲಕ್ಷ ರೂ. ಪರಿಹಾರ ನೀಡಬೇಕು. ರೈತರ ಬೆಳೆ, ಮನೆ, ಶಾಲೆ ಮತ್ತು ಅಂಗನವಾಡಿ ಕಟ್ಟಡಗಳ ದುರಸ್ತಿ ಹಾಗೂ ಮರು ನಿರ್ಮಾಣಕ್ಕೆ ಪರಿಹಾರ ಒದಗಿಸಬೇಕು. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮರಗಳು ಬಿದ್ದು ಅಥವಾ ಭೂ ಕುಸಿತದಿಂದ ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ಎಚ್ಚರ ವಹಿಸಬೇಕು ಎಂದು ಹೇಳಿದರು.
ಅತಿಯಾದ ಮಳೆಯಿಂದ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ವಿದ್ಯುತ್ ಮತ್ತು ಕುಡಿಯುವ ನೀರಿನ ಸಮಸ್ಯೆಯಾಗುತ್ತಿದ್ದು, 48 ಗಂಟೆ ಯೊಳಗೆ ಸಮಸ್ಯೆ ಪರಿಹರಿಸಬೇಕು. ಈ ನಿಟ್ಟಿನಲ್ಲಿ ಅಗತ್ಯವಿರುವ ವಿದ್ಯುತ್ ಕಂಬ ಮತ್ತು ಸಿಬ್ಬಂದಿ ವರ್ಗವನ್ನು ನೆರೆ ಜಿಲ್ಲೆಗಳಿಂದ ಪಡೆದುಕೊಳ್ಳುವಂತೆ ಸೆಸ್ಕ್ ಅಧಿಕಾರಿಗಳಿಗೆ ತಿಳಿಸಿದರು.
ಈಗಾಗಲೇ ಜಲಾಶಯಗಳು ಬಹುಮಟ್ಟಿಗೆ ತುಂಬುವ ಅಂಚಿನಲ್ಲಿದ್ದು, ನಾಲೆಗಳಿಗೆ ನೀರು ಹರಿಯಬಿಡಲಾಗುತ್ತಿದ್ದು, ರೈತರ ಬೆಳೆಗೆ ತೊಂದರೆಯಾಗದಂತೆ ಗಮನಹರಿಸಿ ಎಂದರಲ್ಲದೆ, ನರೇಗಾ ಯೋಜನೆಯಡಿ ಕೆರೆ-ಕಟ್ಟೆಗಳನ್ನು ಸರಿಪಡಿಸಿ ನೀರು ತುಂಬಿಸಿ ಎಂದು ಹೇಳಿದರು.
ತೊಂದರೆಯಾಗದಂತೆ ನೋಡಿಕೊಳ್ಳಿ:
ಕೋವಿಡ್-19 ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ಕೋವಿಡ್ ಆಸ್ಪತ್ರೆಯಲ್ಲಿ 5 ಐಸಿಯು ಬೆಡ್‌ಗಳನ್ನು ತುರ್ತು ಪರಿಸ್ಥಿತಿಗಾಗಿ ಕಾಯ್ದಿರಿಸಿಕೊಳ್ಳಬೇಕು. ಉಳಿದವರನ್ನು ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಬೇಕು.ಚಿಕಿತ್ಸಾ ವಿಧಾನದಲ್ಲಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು.ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಕೇಂದ್ರಗಳಲ್ಲಿ ಔಷಧಗಳ ಕೊರತೆಯಾಗಬಾರದು. ಊಟೋಪಚಾರ ಹಾಗೂ ಶೌಚಗೃಹ ವ್ಯವಸ್ಥೆ ಕಲ್ಪಿಸಬೇಕು ಎಂದರು.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್‌ರಾಜ್‌ಸಿಂಗ್ ಮಾತನಾಡಿ, ಕೋವಿಡ್-19ಗೆ ಮತ್ತು ಮಳೆ ಹಾನಿಗೆ ಸಂಬಂಧಿಸಿದಂತೆ ಜಿಲ್ಲಾ, ತಾಲೂಕು ಹಾಗೂ ಹೋಬಳಿ ಮಟ್ಟದ ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು. ಹೇಮಾವತಿ ಜಲಾಶಯದಲ್ಲಿನ ನೀರಿನ ಮಟ್ಟ ಹೆಚ್ಚಾದ ಸಂದರ್ಭದಲ್ಲಿ ಸುತ್ತಮುತ್ತಲ ಪ್ರದೇಶಗಳ ಜನರಿಗೆ ಯಾವುದೇ ಹಾನಿಯಾಗದಂತೆ ನೀರು ಹರಿಸಬೇಕು ಎಂದು ಸೂಚಿಸಿದರು.
ಶಾಸಕರಾದ ಎ.ಟಿ. ರಾಮಸ್ವಾಮಿ, ಎಚ್.ಡಿ. ರೇವಣ್ಣ, ಎಚ್.ಕೆ. ಕುಮಾರಸ್ವಾಮಿ, ಕೆ. ಎಂ. ಶಿವಲಿಂಗೇಗೌಡ, ಕೆ.ಎಸ್. ಲಿಂಗೇಶ್ ಹಾಗೂ ಪ್ರೀತಂ ಜೆ. ಗೌಡ ಮಾತನಾಡಿ, ಮಳೆ ಹಾನಿಗೊಳಗಾದ ಕುಟುಂಬಗಳಿಗೆ, ರೈತರಿಗೆ ಶೀಘ್ರ ಪರಿಹಾರ ಒದಗಿಸುವಂತೆ ಹಾಗೂ ಮಳೆಯಿಂದ ಹಾನಿಗೊಳಗಾದ ಶಾಲೆ ಮತ್ತು ಅಂಗನವಾಡಿ ಕಟ್ಟಡ, ರಸ್ತೆ ಹಾಗೂ ಸೇತುವೆಗಳ ದುರಸ್ತಿಗೆ ಅನುದಾನ ಕಲ್ಪಿಸುವಂತೆ ಮನವಿ ಮಾಡಿದರು.
ಜಿಲ್ಲಾಧಿಕಾರಿ ಆರ್. ಗಿರೀಶ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎ. ಪರಮೇಶ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ. ಶಿವರಾಂಬಾಬು, ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್. ನಂದಿನಿ, ಉಪವಿಭಾಗಾ ಧಿಕಾರಿಗಳಾದ ಡಾ. ನವೀನ್‌ಭಟ್, ಗಿರೀಶ್ ನಂದನ್, ಡಿಎಚ್‌ಒ ಡಾ. ಕೆ.ಎಂ. ಸತೀಶ್‌ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net