

ವಿಜಯವಾಣಿ ಸುದ್ದಿಜಾಲ ಕುಂದಾಣ
ದಲಿತರ ಹಕ್ಕೊತ್ತಾಯ ಜಾರಿಗೊಳಿಸಲು ತಮ್ಮನ್ನು ತಾವು ಅರ್ಪಿಸಿಕೊಂಡ ಡಾ.ಬಿ.ಆರ್.ಅಂಬೇಡ್ಕರ್ ಅವರು ನಡೆದು ಬಂದ ಹಾದಿಯನ್ನು ಪ್ರತಿಯೊಬ್ಬರು ಸ್ಮರಿಸಬೇಕೆಂದು ಭೀಮಾ ಆರ್ಮಿ ಅಧ್ಯಕ್ಷ ರಾಜ್ ಗೋಪಾಲ್ ತಿಳಿಸಿದರು.
ಮನಗೊಂಡನಹಳ್ಳಿ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಭೀಮಾ ಆರ್ಮಿ(ಭಾರತ್ ಏಕತಾ ಮಿಷನ್)ನ ನೂತನ ಜಿಲ್ಲಾ ಪದಾಧಿಕಾರಿಗಳ ಸಭೆ ಹಾಗೂ ಸಂವಿಧಾನ ಪೀಠಿಕೆಯ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ದಲಿತರ ಮೇಲೆ ಕಳೆದ ಹದಿನೈದು ವರ್ಷಗಳಿಂದ ಮಾರಣಾಂತಿಕ ಹಲ್ಲೆ, ಮರ್ಯಾದೆ ಹತ್ಯೆಯಂತಹ ಹಲವು ಶೋಷಣೆಗಳು ಹೆಚ್ಚುತಿದ್ದರೂ, ಸರ್ಕಾರಗಳು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿವೆ ಎಂದರು.
ದಲಿತ ವಿದ್ಯಾರ್ಥಿಯೊಬ್ಬ ಉತ್ತಮವಾಗಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ ಎಂದು ಸವರ್ಣೀಯ ಸಮುದಾಯದ ಮಕ್ಕಳು ಒಟ್ಟಾಗಿ ದಲಿತ ವಿದ್ಯಾರ್ಥಿಗೆ ಕಳ್ಳಿ ಹಾಲು ಕುಡಿಸಿದ ಪ್ರಕರಣ ಕೆಲ ತಿಂಗಳ ಹಿಂದೆ ನಡೆದಿದೆ. ದಲಿತರು ಪಕ್ಷಭೇಧ, ಪಂಗಡ ಮರೆತು ಸಂವಿಧಾನ ಆಶಯಗಳನ್ನು ರಕ್ಷಣೆ ಮಾಡದಿದ್ದರೆ, ದಲಿತರ ಮಾರಣಹೋಮವಾಗುವ ಮುನ್ನ ಎಚ್ಚೆತ್ತುಕೊಳ್ಳಬೇಕು ಎಂದು ತಿಳಿಸಿದರು.
ಭೀಮಾ ಆರ್ಮಿ ಜಿಲ್ಲಾಧ್ಯಕ್ಷ ಎಂ.ಆರ್.ಮಂಜುನಾಥ್ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ಬಡವ, ಬಲ್ಲಿದರು ಎನ್ನದೆ ಎಲ್ಲರಿಗೂ ಉಚಿತ ಮತದಾನದ ಹಕ್ಕು ನೀಡಿದ್ದಾರೆ. ಅಮಿಷಗಳಿಗೆ ಒಳಗಾಗದೆ ಸಂವಿಧಾನ ರಕ್ಷಕರು, ದಲಿತರ ಏಳಿಗೆಗಾಗಿ ಶ್ರಮಿಸಬಲ್ಲ ಸಮರ್ಥ ಅಭ್ಯರ್ಥಿ ಗೆಲುವಿಗೆ ಮತದಾನ ಮಾಡಬೇಕು. ಅಂದು ಮದ್ಯಪಾನದಿಂದ ದೂರವಿದ್ದು, ತಪ್ಪದೇ ಮತಚಲಾಯಿಸಿ ಎಂದರು.
ನೆಲಮಂಗಲ ನೂತನ ಅಧ್ಯಕ್ಷ ಲೋಕೇಶ್, ಹೊಸಕೋಟೆ ಮತ್ತು ತಾಲೂಕು ಹಾಗೂ ಹೋಬಳಿ ಪದಾಧಿಕಾರಿಗಳಾದ ಚಂದ್ರಪ್ಪ, ಶಾಮಣ್ಣ, ಮುನಿಶಾಮಪ್ಪ, ಮುನಿ ಆಂಜಿನಪ್ಪ, ನಾರಾಯಣಸ್ವಾಮಿ, ರವಿಕುಮಾರ್, ಮಾರಪ್ಪ, ಮುನಿರಾಜು, ಧನು, ಸುಬ್ರಮಣಿ, ಮಧು, ನೀಲಾ ಇದ್ದರು.