

ಬೆಳಗಾವಿ: ಕರೊನಾ ವೈರಸ್ ನಿಯಂತ್ರಿಸಲು ಸಿಎಂ ಪರಿಹಾರ ನಿಧಿಗೆ ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟದಿಂದ 25 ಲಕ್ಷ ರೂ. ಚೆಕ್‌ಅನ್ನು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಮಂಗಳವಾರ ಹಸ್ತಾಂತರಿಸಿದರು.
ಸಿಎಂ ಬಿಎಸ್‌ವೈ ಅವರನ್ನು ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರತಿ ಬಾರಿಯೂ ಕೆಎಂಎಫ್ ವತಿಯಿಂದ ಸಿಎಂ ಪರಿಹಾರ ನಿಧಿಗೆ ದೇಣಿಗೆ ನೀಡುತ್ತ ಬಂದಿದೆ ಎಂದರು.
ಮೇ 3ರ ವರೆಗೆ ಲಾಕ್‌ಡೌನ್ ಮುಂದುವರಿದಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿರುವ ಅಧಿಸೂಚಿತ ಕೊಳಗೇರಿಗಳು, ವಲಸೆ ಕಾರ್ಮಿಕರು, ಕಟ್ಟಡ ಕಾರ್ಮಿಕರು ಹಾಗೂ ಪುನರ್ವವಸತಿ ಶಿಬಿರಗಳ ನಿವಾಸಿಗಳಿಗೆ ಉಚಿತವಾಗಿ ವಿತರಿಸುತ್ತಿರುವ ನಂದಿನಿ ಹಾಲು ವಿತರಣೆಯನ್ನು ಏಪ್ರಿಲ್ 21ರಿಂದ 30ರ ವರೆಗೂ ಸಿಎಂ ವಿಸ್ತರಿಸಿದ್ದಾರೆ. ಜನತೆಯ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಏ.3ರಿಂದ ರಾಜ್ಯದ ಎಲ್ಲ ನಗರಗಳಲ್ಲಿರುವ ಬಡ ಕುಟುಂಬಗಳು, ಸ್ಲಂ ಪ್ರದೇಶಗಳಲ್ಲಿರುವ ಕುಟುಂಬಗಳಿಗಾಗಿ ಕೆಎಂಎಫ್‌ನಿಂದ ಪ್ರತಿದಿನ 7.75 ಲಕ್ಷ ಲೀಟರ್ ಹಾಲು ಖರೀದಿಸಿರುವ ಸರ್ಕಾರ ಅದನ್ನು ಉಚಿತವಾಗಿ ನೀಡುತ್ತಿದೆ ಎಂದು ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.