

ಧಾರವಾಡ: ಅಳ್ನಾವರ ತಾಲೂಕಿನ ಹೂಲಿಕೇರಿ ಗ್ರಾಮದ ಇಂದಿರಮ್ಮನ ಕೆರೆಗೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಇಂದು ಬೆಳಿಗ್ಗೆ ಭೇಟಿ ನೀಡಿ, ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಹೂಲಿಕೇರಿ ಗ್ರಾಮಸ್ಥರು, ಗ್ರಾಮದ ಎರಡು ಹಳ್ಳಗಳು ಹರಿಯುವ ಸ್ಥಳದಲ್ಲಿ ಗ್ರಾಮದ ರೈತರು ಹೊಲ,ಮನೆಗಳಿಗೆ ದಿನನಿತ್ಯ ಹೋಗಿ ಬರಲು ಅನುಕೂಲವಾಗುವಂತೆ ಕಿರು ಸೇತುವೆ ನಿರ್ಮಿಸಬೇಕೆಂದು ಜಿಲ್ಲಾಧಿಕಾರಿಗೆ ಅಹವಾಲು ಸಲ್ಲಿಸಿದರು.
ಹೂಲಿಕೇರಿಯ ಇಂದಿರಮ್ಮನ ಕೆರೆ ಸುತ್ತಮುತ್ತ ಹಸಿರು, ಬೆಟ್ಟಗುಡ್ಡಗಳು, ಇಲ್ಲಿನ ಪರಿಸರ ಸೌಂದರ್ಯ ಸವಿಯಲು ಇಲ್ಲಿಗೆ ಬರುತ್ತಾರೆ. ಅವರಿಗೆ ಕುಳಿತುಕೊಳ್ಳಲು ಆಸನಗಳು, ಕುಡಿಯುವ ನೀರು, ಎತ್ತರದಲ್ಲಿ ಗೋಪುರ ನಿರ್ಮಿಸಿ, ವಿವ್ಯೂ ಪಾಯಿಂಟ್ ಮಾಡಬೇಕು. ಈ ಸ್ಥಳವನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲು ಕ್ರಮಕೈಗೊಳ್ಳಬೇಕು. ಗ್ರಾಮ ವ್ಯಾಪ್ತಿಯಲ್ಲಿ ಇರುವ ಗೋಮಾಳ ಭೂಮಿಯನ್ನು ಕೆಲವರು ಒತ್ತುವರಿ ಮಾಡಿ, ಬಿತ್ತನೆ ಮಾಡುತ್ತಿದ್ದಾರೆ. ಕೆಲವರು ಒತ್ತುವರಿ ಮಾಡಿ ತಂತಿಬೇಲಿ ಹಾಕಿದ್ದಾರೆ. ಈ ಭಾಗದ ಗೌಳಿ ಜನರಿಗೆ, ಗ್ರಾಮದ ಭೂ ರಹಿತ ಜನರಿಗೆ ಅವರ ಗೋವು, ದನಕರು ಮೇಯಿಸಲು ಭೂಮಿ ಇಲ್ಲದಂತಾಗಿದೆ. ತಕ್ಷಣ ಗೋಮಾಳ ಭೂಮಿ ಸಮೀಕ್ಷೆ ಮಾಡಿ, ಒತ್ತುವರಿ ತೆರವುಗೊಳಿಸಬೇಕು ಎಂದು ಗೌಳಿ ಸಮುದಾಯದವರು ಮನವಿ ಮಾಡಿದರು.
ನಂತರ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾತನಾಡಿ, ಇದನ್ನು ಪ್ರವಾಸಿ ಸ್ಥಳವಾಗಿ ಅಭಿವೃದ್ಧಿಪಡಿಸಲು ಸರ್ಕಾರಕ್ಕೆ ಸೂಕ್ತ ಪ್ರಸ್ತಾವನೆ ಸಲ್ಲಿಸಲು ಕ್ರಮವಹಿಸಲಾಗುವುದು ಎಂದರು.
ಈಗಾಗಲೇ ಸಣ್ಣ ನೀರಾವರಿ ಇಲಾಖೆಯಿಂದ ಸುಮಾರು 9 ಕೋಟಿ ರೂ. ಅನುದಾನದಲ್ಲಿ ಸೇತುವೆ ನಿರ್ಮಿಸಲಾಗಿದೆ. ಇದಕ್ಕೆ ಪೂರಕವಾಗಿ ಸಚಿವರು 6 ಕೋಟಿ ಊ. ವೆಚ್ಚದಲ್ಲಿ ನೀರಾವರಿಗಾಗಿ ಕಾಲುವೆ ನಿರ್ಮಿಸಲಾಗಿದೆ. ಗ್ರಾಮಸ್ಥರ ಬೇಡಿಕೆಯಂತೆ ಸಚಿವರ ಗಮನಕ್ಕೆ ತಂದು, ಕಿರು ಸೇತುವೆ ನಿರ್ಮಿಸಲು ಕ್ರಮ ವಹಿಸಲಾಗುತ್ತದೆ ಎಂದು ತಿಳಿಸಿದರು.
ಸರ್ಕಾರಿ ಭೂಮಿ, ಗೋಮಾಳ ಭೂಮಿ ಒತ್ತುವರಿ ಮಾಡವುದನ್ನು ಸರಕಾರ ನಿಷೇಧಿಸಿದೆ. ಹೂಲಿಕೇರಿಯಲ್ಲಿ ಗೋಮಾಳ ಭೂಮಿ ಒತ್ತುವರಿ ಆಗಿರುವ ಕುರಿತು ಗ್ರಾಮಸ್ಥರು ದೂರು ಸಲ್ಲಿಸಿದ್ದು, ಶೀಘ್ರವಾಗಿ ಇದನ್ನು ಪರಿಶೀಲಿಸಿ, ಒತ್ತುವರಿ ತೆರವುಗೊಳಿಸಲು ತಹಶೀಲ್ದಾರ ಅವರು ಕ್ರಮ ಕೈಗೊಂಡು ತಮಗೆ ವರದಿ ಸಲ್ಲಿಸುವಂತೆ ಸೂಚಿಸಿದರು.
ನಂತರ ಜಿಲ್ಲಾಧಿಕಾರಿಗಳು ಗ್ರಾಮಸ್ಥರ ಪರವಾಗಿ ಇಂದಿರಮ್ಮನ ಕೆರೆಗೆ ಬಾಗಿನ ಅರ್ಪಿಸಿದರು. ಗ್ರಾಮಸ್ಥರ ಸನ್ಮಾನ ಗೌರವ ಸ್ವೀಕರಿಸಿದರು.
ಅಳ್ನಾವರ ತಹಸೀಲ್ದಾರ್ ಬಸವರಾಜ ಬೆಣ್ಣಿಶಿರೂರ, ಕ್ಷೇತ್ರಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ, ತಾಲೂಕು ಪಂಚಾಯತ ಇಓ ಪ್ರಶಾಂತ ತುರಕಾಣಿ, ಅಳ್ನಾವರ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಪ್ರಕಾಶ ಮಗದುಮ್ಮ, ಸಣ್ಣ ನಿರಾವರಿ ಇಲಾಖೆಯ ಸಹಾಯಕ ಅಭಿಯಂತರ ಪಾಟೀಲ ಹಾಗೂ ಹುಲಿಕೇರಿ ಗ್ರಾಮದ ಹಿರಿಯರಾದ ಬಸವರಾಜ ಇನಾಮದಾರ, ಶಿವಾಜಿ ಡೊಳ್ಳಿನ, ಮಲ್ಲಿಕಾರ್ಜುನ ಕಲ್ಲೂರ, ರಮೇಶ ಕಿತ್ತೂರ, ಸುಶೀಲಾ ಟೋಪಣವರ, ಕುಶಾ ಕಿತ್ತೂರ, ಗೀತಾ ಜಿನ್ನಪ್ಪಗೋಳ, ನೇತ್ರಾನಂದ ಬೆಳಗಾವಿ, ಈರಣ್ಣಾ ಕಲ್ಲೂರ, ರವಿ ಬೇಕ್ವಾಡಕರ ಇತರರಿದ್ದರು.