ಜಿಲ್ಲಾ ಮಡಿವಾಳ ಸಂಘ ಹಾಗೂ ಕರ್ನಾಟಕ ದಲಿತ ಚಳವಳಿ ನವ ನಿರ್ಮಾಣ ವೇದಿಕೆಯಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ

Published on

ಮೈಸೂರು: ಹರವೆ ಗ್ರಾಮದ ಎಚ್.ಸಿ.ಹರೀಶ್ ಸಾವಿನ ಪ್ರಕರಣವನ್ನು ಸಾಲಿಗ್ರಾಮ ಠಾಣೆ ಪೊಲೀಸರು ಸರಿಯಾಗಿ ನಿರ್ವಹಿಸುವಂತೆ ಒತ್ತಾಯಿಸಿ ಡಿ.11ರಂದು ಜಿಲ್ಲಾಧಿಕಾರಿ ಕಚೇರಿ ಬಳಿ ಜಿಲ್ಲಾ ಮಡಿವಾಳ ಸಂಘ ಹಾಗೂ ಕರ್ನಾಟಕ ದಲಿತ ಚಳವಳಿ ನವ ನಿರ್ಮಾಣ ವೇದಿಕೆಯಿಂದ ಧರಣಿ ನಡೆಸಲಾಗುವುದು ಎಂದು ವೇದಿಕೆ ಅಧ್ಯಕ್ಷ ಹರಿಹರ ಆನಂದಸ್ವಾಮಿ ತಿಳಿಸಿದರು.

ಹುಣಸೂರು ತಾಲೂಕು ಮಡಿವಾಳ ಸಂಘದ ಉಪಾಧ್ಯಕ್ಷರೂ ಆಗಿದ್ದ ಎಚ್.ಸಿ.ಹರೀಶ್ ಅವರ ಸಾವು ಸಂಭವಿಸಿ 8 ತಿಂಗಳು ಕಳೆದಿವೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸರಿಯಾಗಿ ತನಿಖೆ ನಡೆಸದೆ ನೊಂದ ಕುಟುಂಬಕ್ಕೆ ನ್ಯಾಯ ದೊರಕಿಲ್ಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ದಕ್ಷಿಣ ಕನ್ನಡ ಮೂಲದ ವ್ಯಕ್ತಿಯೊಬ್ಬರು ನಡೆಸುತ್ತಿದ್ದ ಬಡ್ಡಿ ಸುಲಿಗೆ ವ್ಯವಹಾರವನ್ನು ಖಂಡಿಸಿದ್ದ ಹರೀಶ್, ದೊಡ್ಡಕೊಪ್ಪಲಿನ ತಮ್ಮ ಅಂಗಡಿಯಿಂದ ಹರವೆ ಗ್ರಾಮಕ್ಕೆ ವಾಪಸಾಗುವ ಮಾರ್ಗಮಧ್ಯೆ ಸಾಮಾಜಿಕ ಅರಣ್ಯ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಅಲ್ಲದೇ ಶವದ ಕೆಲ ಭಾಗಕ್ಕೆ ಪೆಟ್ರೋಲ್ ಹಾಕಿ ಸುಟ್ಟಿದ್ದಾರೆ. ಆದರೆ ಪೊಲೀಸರು, ಮೃತನ ಪತ್ನಿಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಪತ್ರಕ್ಕೆ ಸಹಿ ಹಾಕಿಸಿಕೊಂಡು ವಂಚಿಸಿದ್ದಾರೆ ಎಂದು ಆರೋಪಿಸಿದರು.

ಹರೀಶ್ ಸಾವಿಗೆ ನ್ಯಾಯ ದೊರಕಿಸಿಕೊಡುವಂತೆ ಜಿಲ್ಲಾಧಿಕಾರಿ ಸೇರಿದಂತೆ ಇನ್ನಿತರ ಹಿರಿಯ ಪೊಲೀಸ್ ಅಧಿಕಾರಿಗಳ ಗಮನ ಸೆಳೆದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಪ್ರಕರಣದ ಮರು ತನಿಖೆಗೆ ಆಗ್ರಹಿಸಿ ಧರಣಿ ನಡೆಸಲಾಗುತ್ತಿದೆ ಎಂದರು.

ಮೃತನ ಪತ್ನಿ ಸುನೀತಾ, ಮುಖಂಡರಾದ ರವಿನಂದನ್, ನಾಗೇಶ್, ಹೊರಳವಾಡಿ ನಂಜುಂಡಸ್ವಾಮಿ, ಬಂಗವಾದಿ ನಾರಾಯಣಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net