

ಮಂಡ್ಯ: ಮಳವಳ್ಳಿಯಲ್ಲಿ ನೂತನ ಗ್ರಂಥಾಲಯ ನಿರ್ಮಿಸಲಾಗಿದೆ. ಅದೇ ರೀತಿ ಶ್ರೀರಂಗಪಟ್ಟಣ ಹಾಗೂ ಕೆ.ಆರ್.ಪೇಟೆಯಲ್ಲಿ ನೂತನ ಗ್ರಂಥಾಲಯ ಸ್ಥಾಪನೆಗೆ ಅನುಮೋದನೆ ದೊರೆತ್ತಿದ್ದು, ಟೆಂಡರ್ ಪ್ರಕ್ರಿಯೆ ಪ್ರಾರಂಭಗೊಂಡಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 2025-26ನೇ ಸಾಲಿನ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ 70ನೇ ಆಯವ್ಯಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಂಥಾಲಯಗಳಲ್ಲಿರುವ ಪುಸ್ತಕಗಳನ್ನು ಸಮರ್ಪಕವಾಗಿ ಓದಿ ಸದುಪಯೋಗಪಡಿಸಿಕೊಳ್ಳುವವರು ನಿಜವಾಗಿಯೂ ಸಾಧಕರು. ಜಿಲ್ಲೆಯ ಎಲ್ಲ ಗ್ರಂಥಾಲಯಗಳು ಸೇರಿ ಒಟ್ಟು 1.88 ಲಕ್ಷ ಪುಸ್ತಕಗಳಿವೆ ಎಂದು ತಿಳಿಸಿದರು.
ಜಿಲ್ಲಾ ಎಲ್ಲ ಗ್ರಂಥಾಲಯದಲ್ಲಿ 14 ಲಕ್ಷ ಜನರು ಡಿಜಿಟಲ್ ಸದಸ್ಯತ್ವ ಕಾರ್ಡ್ ಹೊಂದಿದ್ದರೆ, 53 ಸಾವಿರ ಜನರು ಮ್ಯಾನ್ಯುವಲ್ ಕಾರ್ಡ್ ಹೊಂದಿದ್ದಾರೆ. ಗ್ರಂಥಾಲಯಗಳಿಗೆ ಓದಲು ಬರುವವರಿಗೆ ಪ್ರೋತ್ಸಾಹ ನೀಡುವ ಕಾರ್ಯವಾಗಬೇಕಿದೆ. ಗ್ರಂಥಾಲಯದಲ್ಲಿ ಹೆಚ್ಚಿನ ಸಮಯ ಕಳೆಯುವವರನ್ನು ಗುರುತಿಸಿ, ಅವರಿಗೆ ಸನ್ಮಾನ ಮಾಡಿ. ಜತೆಗೆ ಗ್ರಂಥಾಲಯಗಳ ಸದಸ್ಯತ್ವ ಸಂಖ್ಯೆಯನ್ನು ಹೆಚ್ಚಿಸಿ. ಮಾಸಿಕ ಉತ್ತಮ ಓದುಗ ಅಭಿಯಾನ ಮಾಡಿ ಗ್ರಂಥಾಲಯಗಳಲ್ಲಿ ಕಲಿತು ಸಾಧನೆ ಮಾಡಿದವರನ್ನು ಕರೆಸಿ ಸನ್ಮಾನ ಮಾಡಿ ಹಾಗೂ ಮಾಸಿಕವಾಗಿ ಗ್ರಂಥಾಲಯದಲ್ಲಿ ಹೆಚ್ಚು ಸಮಯ ಕಳೆದು ವ್ಯಾಸಂಗ ಮಾಡುವವರನ್ನು ಗುರುತಿಸಿ ಅವರಿಗೆ ಸನ್ಮಾನ ಮಾಡುವ ಮೂಲಕ ಓದುಗರನ್ನು ಉತ್ತೇಜಿಸಿ ಎಂದು ಹೇಳಿದರು.
ಸಭೆಯಲ್ಲಿ ಶಿಕ್ಷಣ ಇಲಾಖೆ ಅಧಿಕಾರಿ ಚಂದ್ರಶೇಖರ್, ಜಿಲ್ಲಾ ಗ್ರಂಥಾಲಯ ಅಧಿಕಾರಿ ಕೃಷ್ಣಮೂರ್ತಿ, ಪ್ರಾಧಿಕಾರದ ಸದಸ್ಯರಾದ ಚಂದನ್, ತೈಲೂರು ವೆಂಕಟಕೃಷ್ಣ, ಚಂದ್ರು, ಎಸ್.ಎಸ್.ದಯಾನಂದ, ಎನ್.ಲಿಂಗರಾಜುಮೂರ್ತಿ, ಜಿ.ಕೆ ಮಂಜೇಗೌಡ ಇತರರಿದ್ದರು.