ಕನಕದಾಸರ ಸಂದೇಶ ಸರ್ವವ್ಯಾಪಿ, ಸರ್ವಸ್ಪರ್ಶಿ...

UDP-18-1-Kanakadasa
ಉಡುಪಿಯಲ್ಲಿ ಆಯೋಜಿಸಿದ್ದ ಕನಕದಾಸ ಜಯಂತಿಯನ್ನು ಕೋಟ ಶ್ರೀನಿವಾಸ್​ ಪೂಜಾರಿ ಉದ್ಘಾಟಿಸಿದರು. ಯಶ್​ಪಾಲ್​ ಸುವರ್ಣ, ಡಾ. ಕೆ.ವಿದ್ಯಾಕುಮಾರಿ, ಡಾ. ಅರುಣಕುಮಾರ್​ ಕೆ., ಮಮತಾದೇವಿ ಜಿ.ಎಸ್​., ದಿನಕರ್​ ಹೆರೂರು, ಹನುಮಂತ ಡೊಳ್ಳಿನ ಇತರರಿದ್ದರು.
Published on

ಸಂಸದ ಶ್ರೀನಿವಾಸ್​ ಪೂಜಾರಿ ಅಭಿಮತ

ಜಿಲ್ಲಾ ಮಟ್ಟದ ಕನಕ ಜಯಂತಿ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಶ್ರೇಷ್ಠ ದಾಸರುಗಳಲ್ಲಿ ಓರ್ವರಾದ ಕನಕದಾಸರು ದಾಸ ಸಾಹಿತ್ಯದ ಮೂಲಕ ಜನರನ್ನು ಜಾಗೃತಗೊಳಿಸಿದ್ದರಲ್ಲದೆ, ಸಮಾಜದಲ್ಲಿ ಅಸಮಾನತೆ ಭಾವ ದೂರಗೊಳಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ಅವರ ಸಂದೇಶ ಸರ್ವವ್ಯಾಪಿ ಹಾಗೂ ಸರ್ವಸ್ಪರ್ಶಿಯಾಗಿದ್ದು, ಸಮ ಸಮಾಜ ಕಟ್ಟಬಲ್ಲ ನಿತ್ಯದ ವಾಣಿಯಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ್​ ಪೂಜಾರಿ ಅಭಿಮತ ವ್ಯಕ್ತಪಡಿಸಿದರು.

ಉಡುಪಿಯ ಅಜ್ಜರಕಾಡುನಲ್ಲಿರುವ ಭುಜಂಗ ಪಾರ್ಕ್​ನಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕನಕದಾಸ ಸಮಾಜ ಸೇವಾ ಸಂಘ ಹಾಗೂ ಉಡುಪಿ ಜಿಲ್ಲಾ ಹಾಲುಮತ ಮಹಾಸಭಾ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಕನಕದಾಸ ಜಯಂತಿ ಉದ್ಘಾಟಿಸಿ ಮಾತನಾಡಿದರು.

ಭಕ್ತಿಯ ಪ್ರತಿಪಾದಕ

ಉಡುಪಿ ಹಾಗೂ ಕನಕದಾಸರಿಗೆ ಬಹು ದೊಡ್ಡ ಅವಿನಾಭಾವ ಸಂಬಂಧವಿದೆ. ದೇವರು ಮತ್ತು ಭಕ್ತನ ನಡುವೆ ಅಸಮಾನತೆಯೆಂಬ ಸ್ಥಾನವಿಲ್ಲ. ಭಕ್ತಿಯೇ ಪ್ರಧಾನ ಎನ್ನುವುದನ್ನು ಉಡುಪಿ ಶ್ರೀಕೃಷ್ಣನೇ ಭಕ್ತ ಕನಕದಾಸರ ಮೂಲಕ ಜಗತ್ತಿಗೇ ಸಾರಿದ್ದಾನೆ. ಅದಕ್ಕೆ ನಮ್ಮ ಉಡುಪಿಯಲ್ಲಿರುವ ಕನಕನ ಕಿಂಡಿ ಸಾಕ್ಷ್ಯವಾಗಿದ್ದು, ಭಕ್ತಿಯ ಪ್ರತೀಕದ ಶ್ರೇಷ್ಠ ತಾಣವಾಗಿದೆ ಎಂದರು.

ಪೂರ್ಣಪ್ರಜ್ಞಾ ಸಂಧ್ಯಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಪ್ರಜ್ಞಾ ಮಾರ್ಪಳ್ಳಿ, ಕನಕದಾಸರ ಜೀವನ ಕುರಿತು ಉಪನ್ಯಾಸ ನೀಡಿದರು.

ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್​ ವರಿಷ್ಠ ಡಾ. ಅರುಣಕುಮಾರ್​ ಕೆ., ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್​., ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ್​ ಹೆರೂರು, ಕನಕದಾಸ ಸಮಾಜ ಸಂಘದ ಜಿಲ್ಲಾಧ್ಯಕ್ಷ ಹನುಮಂತ ಡೊಳ್ಳಿನ, ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯ ಸಹ ಕಾರ್ಯದರ್ಶಿ ಬಸವರಾಜ್​ ವೈ. ಕುರುಬರ, ಹಾಲುಮತ ಮಹಾ ಸಭಾದ ಜಿಲ್ಲಾಧ್ಯಕ್ಷ ಸಿದ್ದಪ್ಪ ಎಚ್.​ ಐಹೊಳೆ ಹಾಗೂ ಸಮಾಜದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಎಸ್​. ಸ್ವಾಗತಿಸಿದರು. ಕಟೀಲು ಪ.ಪೂ. ಕಾಲೇಜಿನ ಉಪನ್ಯಾಸಕ ಪ್ರದೀಪ್​ ಡಿ.ಎಂ. ಹಾವಂಜೆ ಕಾರ್ಯಕ್ರಮ ನಿರೂಪಿಸಿದರು.

ಭಕ್ತಿಯ ಸಂಕೇತವಾದ ಕನಕನ ಕಿಂಡಿ

ಅಧ್ಯಕ್ಷತೆ ವಹಿಸಿದ್ದ ಶಾಸಕ ಯಶ್​ಪಾಲ್​ ಸುವರ್ಣ ಮಾತನಾಡಿ, ದೇಶ ಕಂಡ ಶ್ರೇಷ್ಠ ಸಂತರಲ್ಲಿ ಕನಕದಾಸರೂ ಒಬ್ಬರು. ಸಮಾಜಕ್ಕೆ ಅವರ ಕೊಡುಗೆ ಅಪಾರ. ಕೀರ್ತನೆ ಮೂಲಕ ದೇವರನ್ನು ಕಾಣಲು ಸಾಧ್ಯ ಎಂಬುದನ್ನು ಪ್ರತಿಪಾದಿಸಿ ತೋರಿಸಿಕೊಟ್ಟ ಮಹಾನ್​ ಸಂತ. ಶ್ರೀಕೃಷ್ಣನ ದರ್ಶನಕ್ಕೆಂದು ಮಠಕ್ಕೆ ಬಂದ ಸಂದರ್ಭದಲ್ಲಿ ಪ್ರವೇಶ ನಿರಾಕರಿಸಿದಾಗ ಕನಕನ ಭಕ್ತಿಗೆ ಒಲಿದು ಶ್ರೀಕೃಷ್ಣನೇ ತಿರುಗಿ ದರ್ಶನ ನೀಡಿದ ಪ್ರತೀತಿ ಇದೆ. ಭಕ್ತಿಯ ಸಂಕೇತವಾಗಿ ಕನಕನ ಕಿಂಡಿ ಇಂದಿಗೂ ವಿಶ್ವ ಪ್ರಸಿದ್ಧವಾಗಿದೆ ಎಂದರು.

ಮಾತಿನಿಂದ ಸಾಧ್ಯವಾಗದ ಕೆಲಸವನ್ನು ಸಂಗೀತ ಮಾಡುತ್ತದೆ ಎನ್ನುವದನ್ನು ಕನಕದಾಸರು ಹಾಡಿನ ಮೂಲಕ ಸಮಾಜಕ್ಕೆ ಅನೇಕ ಸಂದೇಶ ನೀಡಿದ್ದಾರೆ. ಅವರ ಕೀರ್ತನೆ ಹಾಗೂ ಮೌಲ್ಯಗಳು ಬದುಕಿಗೆ ದಾರಿ ದೀಪವಾಗಿದೆ. ಅವರ ಆದರ್ಶಗಳನ್ನು ಜೀವನದಲ್ಲಿ ಆಳವಡಿಸಿಕೊಂಡು ಉತ್ತಮ ಬದುಕು ರೂಪಿಸಿಕೊಳ್ಳಬೇಕು. | ಡಾ.ಪ್ರಜ್ಞಾ ಮಾರ್ಪಳ್ಳಿ. ಪ್ರಾಧ್ಯಾಪಕಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net