ಪ್ರಶ್ನಿಸದೇ ಒಪ್ಪಿಕೊಳ್ಳುವುದು ಮೌಢ್ಯಕ್ಕೆ ದಾರಿ: ವಿಶ್ರಾಂತ ಕುಲಪತಿ ಸಬಿಹಾ ಭೂಮಿಗೌಡ ಅಭಿಮತ

District Level Youth Scientific Parliament Session mandya
Published on

ಮಂಡ್ಯ: ಮೌಢ್ಯ ಎನ್ನುವುದು ನಮ್ಮನ್ನು ಕುಗ್ಗಿಸುತ್ತಿದೆ. ಆತ್ಮಶ್ರೀ ಎಂದರೆ ಆತ್ಮಾಭಿಮಾನ, ಆತ್ಮಗೌರವ, ಸ್ವಂತಿಕೆ, ಅಸ್ಮಿತೆಯನ್ನು ಉಳಿಸುವುದಕ್ಕಾಗಿ ಕುವೆಂಪು ಕೊಟ್ಟ ಕರೆ. ನಿರಂಕುಶಮತಿಗಳಾಗಿ ಎಂಬುದು ಆನೆಯನ್ನು ಪುಟ್ಟ ಅಂಕುಶ ನಿಯಂತ್ರಿಸುವಂತೆ ನಮ್ಮೆಲ್ಲರಲ್ಲೂ ಇರುವ ಬೇರೆ ಬೇರೆ ಆಲೋಚನೆಗಳನ್ನು ಅಂಕುಶಗಳಾಗಿ ನಿಯಂತ್ರಿಸುವ ಅಂಶಗಳನ್ನು ದಾಟಿ ನಿರಂಕುಶಮತಿಗಳಾಗಿ ಎಂದು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಸಬಿಹಾ ಭೂಮಿಗೌಡ ಸಲಹೆ ನೀಡಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಸಹಯೋಗದಲ್ಲಿ ಕುವೆಂಪು ಅವರ ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ ಭಾಷಣದ 50ನೇ ವರ್ಷಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಯುವ ವೈಜ್ಞಾನಿಕ ಸಂಸತ್ ಅಧಿವೇಶನ ಉದ್ಘಾಟಿಸಿ ಮಾತನಾಡಿದ ಅವರು, ಯಾವ ಕಾಲದಲ್ಲೋ ಕೊಟ್ಟಂತಹ ನಿರ್ದಿಷ್ಟವಾದ ಮತ್ತು ಅವರ ಕಾಲಕ್ಕೆ ಅನ್ವಯವಾದ ಸತ್ಯವನ್ನು ಇವತ್ತಿಗೂ ಪ್ರಶ್ನೆ ಮಾಡದೆ ಒಪ್ಪಿಕೊಳ್ಳುವುದು ಮೌಢ್ಯಕ್ಕೆ ದಾರಿ ಮಾಡಿಕೊಡುತ್ತದೆ ಎಂದರು.

ನಮ್ಮ ಕೆಲವು ಆಲೋಚನೆಗಳನ್ನು ಸಾಗಬೇಕಾದ ದಾರಿಗಿಂತ ಭಿನ್ನ ನೆಲೆಯಲ್ಲಿ ಕಟ್ಟಿಕೊಂಡು ಹೋಗುವಂತದ್ದು. ಅಂಕುಶಗಳು ಎಂದರೆ ನಂಬಿಕೆ ಅಥವಾ ಮೌಢ್ಯ. ನಮ್ಮೆಲ್ಲರಿಗೂ ಸಹಜವಾದ ಬಯಲು ದಾರಿಯಲ್ಲಿ ನಡೆಯುವುದು ತುಂಬಾ ಸುಲಭ. ಕಲ್ಲು-ಮುಳ್ಳು, ಬೆಟ್ಟಗುಡ್ಡಗಳ ಇನ್ನೊಂದು ದಾರಿ ಕಠಿಣ. ಮೌಢ್ಯವನ್ನು ದಾಟಿ ಹೆಜ್ಜೆ ಹೆಜ್ಜೆಗೂ ಎಚ್ಚರದಿಂದ ನಡೆಯಬೇಕಾಗುತ್ತದೆ ಎಂದು ಸಲಹೆ ನೀಡಿದ ಅವರು, ಕುತೂಹಲದಿಂದ ನೋಡುವುದು, ಪ್ರಶ್ನೆ ಮಾಡದಿರುವುದೇ ಆದರ್ಶ ಎಂಬುದನ್ನು ಕಲಿಸಲಾಗುತ್ತದೆ. ಆದರೆ ಪ್ರಶ್ನೆ ಮಾಡುವ ಮೂಲಕ ನಿಮ್ಮ ಬದುಕನ್ನು ರೂಪಿಸಿಕೊಳ್ಳಬೇಕಾಗುತ್ತದೆ. ಭಯ ಎನ್ನುವುದು ನಮ್ಮನ್ನು ನಿಯಂತ್ರಿಸುತ್ತದೆ. ವಿಮರ್ಶೆ ಮಾಡಿ ಪರೀಕ್ಷಿಸಿ ಕೆಲಸ ಮಾಡಬೇಕು. ವಿಶಾಲ ಓದಿನ ಮೂಲಕ ವ್ಯಕ್ತಿತ್ವ ರೂಪಿಸಿಕೊಳ್ಳಿ ಎಂದು ತಿಳಿಸಿದರು.

‘ಕುವೆಂಪು ಅವರ ಆತ್ಮಶ್ರೀಗಾಗಿ ನಿರಂಕುಶಮತಿ’ಗಳಾಗಿ ಕುರಿತು ಮಾತನಾಡಿದ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ರಾಷ್ಟ್ರಕವಿ ಕುವೆಂಪು ಅವರ ವಿಚಾರಧಾರೆಗಳನ್ನು ಮನಸಾರೆ ವ್ಯಕ್ತಿಗತವಾಗಿ ಅಳವಡಿಸಿಕೊಂಡು, ಸಮಾಜದ ಕುಟುಂಬದ ಜತೆ ವ್ಯವಹರಿಸಿದಾಗ ನಿಸ್ಸಂಶಯವಾಗಿ ಅವರಿಗೆ ಒಂದು ತನ್ನತನ ಬೆಳೆಯುತ್ತದೆ, ಇದರಿಂದ ಅಜ್ಞಾನ ಅಂಧಕಾರ ಕಡಿಮೆಯಾಗುತ್ತದೆ ಎಂದರು.

ಮೌಢ್ಯ ವ್ಯಕ್ತಿಯ ಬದುಕನ್ನು ದೃಷ್ಟಿಕೋನವನ್ನು ನಾಶಗೊಳಿಸುತ್ತದೆ. ಆದರಿಂದ ಎಲ್ಲರೂ ಜಾಗೃತವಾಗಬೇಕು. ಯುವಜನತೆ ವೈಜ್ಞಾನಿಕ ಪ್ರಜ್ಞೆ, ವೈಚಾರಿಕ ಪ್ರಜ್ಞೆ, ಆತ್ಮಶ್ರೀ ಪ್ರಜ್ಞೆಯನ್ನು ಬೆಳೆಸಿಕೊಂಡು ಅನುಸರಣೆ ಮಾಡಿದರೆ ಜಗತ್ತಿನ ಎಲ್ಲ ಜಂಜಾಟಗಳನ್ನು ಮೀರಿ ವೈಜ್ಞಾನಿಕ ಪರಿಕ್ರಮದಲ್ಲಿ ದೇಶ ಕಟ್ಟಬಹುದು. ಹೆಣ್ಣುಮಕ್ಕಳಲ್ಲಿ ಮೌಢ್ಯ ಹೆಚ್ಚು. ಅವರು ಹೆಚ್ಚು ವೈಚಾರಿಕತೆ ಬೆಳೆಸಿಕೊಳ್ಳಬೇಕು. ವೈಜ್ಞಾನಿಕ ಚಿಂತನೆ ರೂಢಿಸಿಕೊಂಡು ಅದನ್ನು ಪಸರಿಸುವ ಕೆಲಸ ಮಾಡಬೇಕು ಎಂದು ತಿಳಿ ಹೇಳಿದರು.

ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‌ನ ಸಂಸ್ಥಾಪಕ ಅಧ್ಯಕ್ಷ ಹುಲಿಕಲ್ ನಟರಾಜ್, ಯಾಚೇನಹಳ್ಳಿ ಸೇವಾಶ್ರಮದ ನಾದಾನಂದನಾಥ ಸ್ವಾಮೀಜಿ, ಬೋಧಿದತ್ತ ಬಂತೇಜಿ, ಅಭಿದಾ ಬೇಗಂ, ಪರಿಷತ್ ಜಿಲ್ಲಾಧ್ಯಕ್ಷ ಚಿಕ್ಕರಸಿನಕೆರೆ ಸಿ.ಶಿವಲಿಂಗಯ್ಯ, ಪದಾಧಿಕಾರಿಗಳಾದ ಸುನಂದಾ ಜಯರಾಂ, ಬಸವರಾಜು, ಪ್ರಭಾವತಿ, ಜಿ.ಎನ್.ಕೆಂಪರಾಜು, ವಿನಯಕುಮಾರ್ ಇತರರಿದ್ದರು. ಇದೇ ಸಂದರ್ಭದಲ್ಲಿ ಬೆಳಕು ಚೆಲ್ಲೋಣ ಕೃತಿಯನ್ನು ಬಿಡುಗಡೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net