ಯುವಜನರು ಸಮಾಜ ಕಟ್ಟಲು ಶ್ರಮಿಸಲಿ: ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಸಲಹೆ

District level youth festival Mandya
Published on

ಮಂಡ್ಯ: ಯುವ ಜನರು ಶ್ರಮದಾನ, ಸಾಂಸ್ಕೃತಿಕ ಮತ್ತು ಚಿಂತನಾ ಚಟುವಟಿಕೆಯಲ್ಲಿ ಭಾಗವಹಿಸುವುದರ ಜತೆಗೆ ಸಮಾಜವನ್ನು ಕಟ್ಟುವಲ್ಲಿ ಮುಂದಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಸಲಹೆ ನೀಡಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ ಹಾಗೂ ಎನ್‌ಎಸ್‌ಎಸ್ ಘಟಕ, ಮಂಡ್ಯ ವಿಶ್ವವಿದ್ಯಾಲಯ, ಮಹಿಳಾ ಸರ್ಕಾರಿ ಕಾಲೇಜು(ಸ್ವಾಯತ್ತ) ಸಹಯೋಗದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಯುವಜನೋತ್ಸವದಲ್ಲಿ ಮಾತನಾಡಿದರು. ಜಿಲ್ಲೆಯ ಯುವಜನರು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುವಿಕೆ ಕಡಿಮೆಯಾಗುತ್ತಿದೆ. ಸಮಾಜದಲ್ಲಿ ಅಭಿವೃದ್ಧಿ ಕೆಲಸ ಮಾಡಲು ನಿರಾಸಕ್ತಿ ಇರುವುದು ಕಂಡುಬಂದಿದೆ. ಈ ಬಗ್ಗೆ ನನಗೆ ವಿಷಾದವಿದೆ. ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನ ನೀಡಿ ಜಿಲ್ಲೆಗೆ ಕೀರ್ತಿ ತಂದ ಸಾಕಷ್ಟು ಯುವಜನರಿದ್ದು, ಅವರನ್ನು ಆದರ್ಶವಾಗಿ ಇಟ್ಟುಕೊಳ್ಳಬೇಕು ಎಂದರು.

ಯುವ ಮನಸ್ಸುಗಳಿಗೆ ಎಳೆಯ ವಯಸ್ಸಿನಲ್ಲಿಯೇ ಸಮಾಜದ ಅರಿವನ್ನು ಉಂಟು ಮಾಡಬೇಕು. ಸಮಾಜದ ಗುರಿ, ನೋವು, ಆಶಯವನ್ನು ತಿಳಿಯಬೇಕು. ಯಾವುದೇ ಸಮುದಾಯವನ್ನು ಹಾಗೂ ಕಾರ್ಯಕ್ರಮವನ್ನು ಉತ್ತಮವಾಗಿ ಆಯೋಜಿಸುವ ಸಾಮರ್ಥ್ಯ ವೃದ್ಧಿಯಾಗುವುದು ಯುವ ಜನೋತ್ಸವ ಕಾರ್ಯಕ್ರಮಗಳಲ್ಲಿ ಭಾಗವಹಿಸಿದಾಗ ಮಾತ್ರ ಸಾಧ್ಯ. ಯುವ ಜನತೆಗೆ ಅನೇಕ ವಿಚಾರ ಸಂಕಿರಣಗಳನ್ನು ಏರ್ಪಡಿಸಿ ಒಳ್ಳೆಯ ವಿಚಾರಗಳನ್ನು ಬಿತ್ತುವ ಅವಶ್ಯಕತೆ ಇದೆ. ಕೇವಲ ನಾಲ್ಕು ಗೋಡೆಗಳ ಮಧ್ಯೆ ಔಪಚಾರಿಕ ಶಿಕ್ಷಣವನ್ನು ಪಡೆದುಕೊಂಡರೆ ಸಾಲದು ಎಂದು ಅಭಿಪ್ರಾಯಪಟ್ಟರು.

ಪ್ರತಿಯೊಬ್ಬರೂ ತಮ್ಮ ಊರಿನ ಇತಿಹಾಸ, ಪೂರ್ವಿಕರು, ಪಾಲಕರ ಕಷ್ಟ ಸುಖ, ಮನೆಯ ಪರಿಸ್ಥಿತಿ, ಊರಿನ ಹಿರಿಯರ ಬಗ್ಗೆ ತಿಳಿದುಕೊಂಡು, ವರ್ತಮಾನದಲ್ಲಿ ಯೋಚನೆ ಮಾಡಿ ಭವಿಷ್ಯಕ್ಕೆ ಧ್ಯೇಯಗಳನ್ನು ರೂಪಿಸಬೇಕು. ಜತೆಗೆ ಹೈನುಗಾರಿಕೆ, ವ್ಯವಸಾಯಗಳಲ್ಲಿ ತೊಡಗಿಸಿಕೊಂಡು ಊರಿನ ಪೂರಕ ವಾತಾವರಣವನ್ನು ನಿರ್ಮಾಣ ಮಾಡಬೇಕು. ಸದೃಢ ದೇಹದಲ್ಲಿ ಸದೃಢ ಮನಸ್ಸಿರಬೇಕು. ಉತ್ತಮ ಯೋಜನೆ, ಆಲೋಚನೆ, ಸೃಜನತೆಯನ್ನು ಒಳಗೊಂಡ ನಂತರ ಉತ್ತಮ ಸಾಧನೆ ಸಾಧ್ಯ. ದೃಷ್ಟಿಯಂತೆ ಸೃಷ್ಟಿ ಎಂಬ ಮಾತನ್ನು ನೆನೆದು ನಮ್ಮ ದಾರಿ ಹಾಗೂ ದೃಷ್ಟಿಯನ್ನು ಉತ್ತಮವಾಗಿ ಇಟ್ಟುಕೊಂಡು ಬದುಕಿ. ಯಾವುದೇ ಋಣಾತ್ಮಕ ಮನೋಭಾವವನ್ನು ಹೊಂದದೆ ಒಳ್ಳೆಯ ರೀತಿಯಲ್ಲಿ ಸಮಾಜದಲ್ಲಿ ಗೌರವವನ್ನು ಸಂಪಾದಿಸಿ. ಜೀವನದಲ್ಲಿ ಸ್ಪರ್ಧೆ ಒಡ್ದುವಂತಹವರು ಇರಬೇಕು. ಸ್ಪರ್ಧಿಗಳು ಇದ್ದಾಗ ಮಾತ್ರ ಭಾಗವಹಿಸಿ ಬೆಳೆಯಲು ಸಾಧ್ಯ. ಇಂದು ಯುವಜನೋತ್ಸವ ಕಾರ್ಯಕ್ರಮದಲ್ಲಿ ನಡೆಯುತ್ತಿರುವ ಸ್ಪರ್ಧೆಗಳಲ್ಲಿ ಎಲ್ಲರಿಗೂ ಯಶಸ್ಸು ಸಿಗಲಿ. ಜಿಲ್ಲೆಯ ಯುವಜನತೆ ಸ್ಥಿರವಾದ ಮನಸ್ಸು ಹಾಗೂ ಆಸಕ್ತಿಯಿಂದ ಎಲ್ಲ ಕ್ಷೇತ್ರದಲ್ಲಿಯೂ ಪರಿಣಿತಿ ಪಡೆದುಕೊಂಡು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಸಾಧನೆ ಮಾಡುವ ಮೂಲಕ ಸಾಮಾಜಿಕ ಬೆಳವಣಿಗೆಗೆ ಅಡಿಪಾಯ ಹಾಕಬೇಕು. ಸ್ವಾಮಿ ವಿವೇಕಾನಂದರವರು ನಮ್ಮ ರಾಷ್ಟ್ರದ ನಿಜವಾದ ಸತ್ವವನ್ನು ಜಗತ್ತಿಗೆ ಸಾರಿ ಭಾರತೀಯ ಸಂಸ್ಕೃತಿಯ ಹೆಗ್ಗುರುತನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎತ್ತಿಹಿಡಿದ ಮಹಾನ್ ಚೇತನ. ಅವರ ಧ್ಯೇಯ, ಗುರಿ, ಉದ್ದೇಶಗಳನ್ನು ಅನುಸರಿಸಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ ಮಾತನಾಡಿ, ಹಿಂದಿನ ದಿನಗಳಲ್ಲಿ ಯುವಜನೋತ್ಸವ ಕಾರ್ಯಕ್ರಮವನ್ನು ಆಚರಿಸುವಾಗ ಪ್ರತಿಯೊಬ್ಬ ಯುವಜನರು ಕೂಡ ಬಹಳ ಉತ್ಸುಕತೆಯಿಂದ ಪಾಲ್ಗೊಳ್ಳುತ್ತಿದ್ದರು. ಕಾರ್ಯಕ್ರಮದ ಒಂದು ವಾರದ ಮುಂಚೆಯೇ ಎಲ್ಲ ತಯಾರಿ ನಡೆಸಿ ಬಾಳೆ ಕಂಬ, ಮಾವಿನ ತೋರಣ ಕಟ್ಟಿ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಜತೆಗೆ ಊರಿನ ಎಲ್ಲ ಜನರು ಯುವಜನೋತ್ಸವ ಕಾರ್ಯಕ್ರಮವನ್ನು ವೀಕ್ಷಣೆ ಮಾಡಲು ತಮ್ಮ ಮನೆಯಿಂದ ಚಾಪೆಗಳನ್ನು ತಂದು ಕಾತುರದಿಂದ ಕುಳಿತು ಕಾಯುತ್ತಿದ್ದರು. ಆದರೆ ಪ್ರಸ್ತುತ ದಿನಗಳಲ್ಲಿ ಸಾಕಷ್ಟು ಬದಲಾವಣೆಯಾಗಿದ್ದು, ಯುವಜನತೆಯಲ್ಲಿ ಭಾಗವಹಿಸುವಿಕೆ ಕಡಿಮೆಯಾಗಿದೆ ಎಂದರು.

ಪರಿಸರ, ನೀರು ಹಾಗೂ ಯುವ ಜನತೆ ಈ ಮೂರು ಅಂಶಗಳು ದೇಶಕ್ಕೆ ಪ್ರಮುಖವಾಗಿದೆ. ಇವುಗಳನ್ನು ಹೊರತುಪಡಿಸಿ ದೇಶವನ್ನು ಕಟ್ಟಲಿಕ್ಕೆ ಆಗುವುದಿಲ್ಲ. ಯುವಜನರಿಗೆ ಒಳ್ಳೆಯ ಸಂಸ್ಕಾರ ನೀಡಿ, ಉತ್ತಮ ಮಾರ್ಗವನ್ನು ತೋರಿಸುವ ಕೆಲಸ ಮಾಡಬೇಕು. ಮಾದಕ ವಸ್ತುಗಳು ಹಾಗೂ ಮೋಜಕ ವಸ್ತುವಾದ ಮೊಬೈಲ್ ಇವೆರಡು ಕಾಯಿಲೆಗಳಿಗೆ ಯುವಜನೆತೆ ತುತ್ತಾಗುತ್ತಿದ್ದಾರೆ. ಎಲ್ಲ ಸಮಯವನ್ನು ಹಾಗೂ ತಮ್ಮ ಕ್ರಿಯಾಶೀಲತೆಯನ್ನು ಮೊಬೈಲ್ ನೋಡುವುದರಲ್ಲಿಯೇ ತೊಡಗಿಸಿಕೊಳ್ಳುತ್ತಿದ್ದಾರೆ. ಇವುಗಳನ್ನು ಮಿತವಾಗಿ ಬಳಕೆ ಮಾಡಬೇಕು ಎಂದರು.

ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಓಂ ಪ್ರಕಾಶ್, ನೆಹರು ಯುವ ಕೇಂದ್ರದ ಮುಖ್ಯಲೆಕ್ಕಾಧಿಕಾರಿ ರವಿಚಂದ್ರನ್, ಮಹಿಳಾ ಸರ್ಕಾರಿ ಕಾಲೇಜಿನ ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಡಾ.ಎಚ್.ಎಸ್.ಶಿವರಾಜು, ಸ್ನಾತಕೋತ್ತರ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಲೋಕೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net