ಕಾರ್ಮಿಕರು ದೇಶದ ನರ ನಾಡಿಗಳಿದ್ದಂತೆ: ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಆನಂದ ಹೇಳಿಕೆ

District level workshop Mandya
Published on

ಮಂಡ್ಯ: ರೈತರು ದೇಶದ ಬೆನ್ನೆಲುಬು. ಅಂತೆಯೇ ಕಾರ್ಮಿಕರು ನರ ನಾಡಿಗಳಾಗಿದ್ದಾರೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಆನಂದ ಹೇಳಿದರು.

ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ವಿವಿಧ ಕಾರ್ಮಿಕ ಕಾಯ್ದೆಗಳು/ಯೋಜನೆ ಹಾಗೂ ಬಡತನ ನಿರ್ಮೂಲನೆಯ ಪರಿಣಾಮಕಾರಿ ಅನುಷ್ಠಾನದ ಕುರಿತ ಒಂದು ದಿನದ ಜಿಲ್ಲಾಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ದೇಶ ಸರ್ವತೋಮುಖ ಅಭಿವೃದ್ಧಿಯಾಗಬೇಕಾದರೆ ಕಾರ್ಮಿಕರು ಕೂಡ ಮುಖ್ಯ. ರೈತರು ಅನ್ನ ಒದಗಿಸಿದರೆ, ದೇಶ ಕಾಯುವ ಸೈನಿಕರು ರಕ್ಷಣೆ ಒದಗಿಸುತ್ತಾರೆ. ಹಾಗೆಯೇ ರಸ್ತೆ ಅಭಿವೃದ್ಧಿ, ಮೂಲ ಸೌಲಭ್ಯ ಕಲ್ಪಿಸಲು, ಮನೆ ಹಾಗೂ ಕಟ್ಟಡದ ನಿರ್ಮಾಣ, ಯಾವುದೇ ಕಾಮಗಾರಿ ಮಾಡಲು ಕಾರ್ಮಿಕರು ಮುಖ್ಯವಾಗಿರುತ್ತಾರೆ ಎಂದರು.

ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕರ ಅನುಕೂಲಕ್ಕಾಗಿ ಜಾರಿಯಾಗಿರುವ ಕಾಯ್ದೆಗಳ ಬಗ್ಗೆ ಅರಿವಿದ್ದಾಗ ಮಾತ್ರ ಕಾಯ್ದೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬಹುದು. ಕಾರ್ಯಾಗಾರದ ಪ್ರಮುಖ ಉದ್ದೇಶವೆಂದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಂಘಟಿತ ಕಾರ್ಮಿಕರ ಅನುಕೂಲಕ್ಕಾಗಿ ಜಾರಿಯಾಗಿರುವ ಕಾಯ್ದೆ ಹಾಗೂ ಕಾರ್ಮಿಕರಿಗೆ ಸಿಗುವ ಸೌಲಭ್ಯ ಬಗ್ಗೆ ತಿಳಿಸುವುದಾಗಿದೆ. ಕಾರ್ಮಿಕ ನಿರೀಕ್ಷಕರು ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕರ ಯೋಜನೆಗಳ ಬಗ್ಗೆ ತಿಳಿದುಕೊಂಡು ಜಾರಿಗೊಳಿಸಿದಾಗ ಮಾತ್ರ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತದೆ ಎಂದು ಹೇಳಿದರು.

ಮಾಲೀಕ ಹಾಗೂ ಕಾರ್ಮಿಕರ ನಡುವಿನ ಬಾಂಧವ್ಯ ಉತ್ತಮವಾಗಿರಬೇಕು. ಮಾಲೀಕರ ಏಳಿಗೆಗಾಗಿ ಕಾರ್ಮಿಕರು ದುಡಿಯುತ್ತಾರೆ. ಅದನ್ನು ಅರಿತು ಮಾಲೀಕರ ಕಾರ್ಮಿಕರಿಗೆ ನೀಡಬೇಕಾದ ಸವಲತ್ತು ಹಾಗೂ ವೇತನ ನೀಡಬೇಕು. ಆಗ ಮಾತ್ರ ಕಾರ್ಮಿಕ ಹಾಗೂ ಮಾಲೀಕರ ಸಂಬಂಧ ಉತ್ತಮವಾಗಿರಲು ಸಾಧ್ಯ. ಕಾರ್ಮಿಕರು ಕಾರ್ಮಿಕರಾಗಿಯೇ ಉಳಿಯಬಾರದು. ಬದಲಿಗೆ ಮಾಲೀಕರಾಗಿ ಬೆಳೆಯಬೇಕು. ಭಾರತ ಸಂವಿಧಾನ ಪ್ರತಿಯೊಬ್ಬರಿಗೂ ಉನ್ನತ ಬದುಕು ಕಟ್ಟಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ. ಒಂದು ವೇಳೆ ಸಂವಿಧಾನ ಇರಲಿಲ್ಲವೆಂದರೆ ಇಂದು ನಾವು ಸುಖಮಯ ಜೀವನ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಕಾನೂನನ್ನು ನಾವು ಗೌರವಿಸಿದರೆ, ಕಾನೂನು ನಮ್ಮನ್ನು ರಕ್ಷಿಸುತ್ತದೆ. ಪ್ರತಿಯೊಬ್ಬರೂ ಸಂವಿಧಾನಕ್ಕೆ ಗೌರವವನ್ನು ನೀಡಿ, ಕಾನೂನುನನ್ನು ಪಾಲನೆ ಮಾಡಿ ಎಂದು ಸಲಹೆ ನೀಡಿದರು.

ಮೈಸೂರು ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತೆ ಎಸ್.ಆರ್.ವೀಣಾ ಮಾತನಾಡಿ, ರೈತ, ಯೋಧ ಹಾಗೂ ಕಾರ್ಮಿಕ ಮೂವರು ದೇಶದ ಬೆನ್ನೆಲುಬಾಗಿದ್ದಾರೆ. ದೇಶದ ಸರ್ವತೋಮುಖ ಬೆಳವಣಿಗೆಗೆ ಕಾರಣರಾಗಿದ್ದಾರೆ. ಕಾರ್ಮಿಕರ ಏಳಿಗೆಗಾಗಿ ಕಟ್ಟಡ ಮತ್ತು ಕಲ್ಯಾಣ ಮಂಡಳಿ ಪ್ರಾರಂಭಿಸಲಾಗಿದ್ದು, ಅದರಲ್ಲಿ ಹಲವಾರು ಯೋಜನೆ ಜಾರಿಗೊಳಿಸಲಾಗಿದೆ. ಕಾರ್ಮಿಕರು ಸೌಲಭ್ಯಗಳನ್ನು ಪಡೆಯಲು ಮೊದಲು ನೋಂದಣಿ ಮಾಡಿಕೊಳ್ಳಬೇಕು ಎಂದರು.

ಖಾಸಗಿ ವಾಹನ ಚಾಲಕರ ಮರಣ ಹೊಂದಿದ್ದಲ್ಲಿ ಅವರ ಕುಟುಂಬಕ್ಕೆ ಸಹಾಯಧನ ಹಾಗೂ ಅವರ ಮಕ್ಕಳ ಶಿಕ್ಷಣಕ್ಕಾಗಿ ಸೌಲಭ್ಯ ನೀಡುವ ಯೋಜನೆ ಜಾರಿಗೆ ತರಲಾಗಿದೆ. ಇದಲ್ಲದೆ ವೆಲ್‌ಫೇರ್ ಬೋರ್ಡ್‌ನಲ್ಲಿ ಕಾರ್ಮಿಕರ ಮಕ್ಕಳಿಗೆ ಕಂಪ್ಯೂಟರ್ ಹಾಗೂ ಇತರೆ ಸೌಲಭ್ಯ ನೀಡಲಾಗುವುದು. ಈ ಎಲ್ಲ ಅವಕಾಶವನ್ನು ಕಾರ್ಮಿಕರು ಪಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಮಂಡ್ಯ ಉಪವಿಭಾಗದ ಕಾರ್ಮಿಕ ಅಧಿಕಾರಿ ಸುಭಾಷ್ ಎಂ.ಆಲದಕಟ್ಟೆ, ಮೈಸೂರು ವಿಭಾಗ-1ರ ಕಾರ್ಖಾನೆಗಳ ಉಪನಿರ್ದೇಶಕ ಡಾ.ರಾಜೇಶ್ ಕೋಟೆ, ಇಎಸ್‌ಐಸಿ ಮಂಡ್ಯ ಸಹಾಯಕ ನಿರ್ದೇಶಕ ಎಸ್.ಶ್ರವಣ್‌ಕುಮಾರ್, ಎಂ.ಅಶೋಕ್‌ಕುಮಾರ್, ಆರ್. ಕುಮಾರಸ್ವಾಮಿ, ಎಚ್.ಬಿ.ಪ್ರಭಾಕರ, ಎಸ್.ಗಂಗಾಧರ್, ಎಂ.ಸ್ವಾಮಿ, ಎನ್.ಟಿ.ಶಿವಕುಮಾರ, ಹೇಮಚಂದ್ರ, ಸಿ.ಅನಿತಾ, ಬಿ.ಎನ್. ನಾಗರತ್ನಾ, ಆರ್.ಎನ್.ಅಮರಾವತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net