

ವಿಜಯವಾಣಿ ಸುದ್ದಿಜಾಲ ದೇವನಹಳ್ಳಿ
ದೇಶದ ಸಂಸ್ಕೃತಿ, ಪುರಾಣ, ಇತಿಹಾಸಗಳಲ್ಲಿ ಉಲ್ಲೇಖಿಸಿದಂತೆ ವಿಶ್ವಕರ್ಮ ವಿಶ್ವದ ಮೊದಲ ವಾಸ್ತುತಜ್ಞ, ಮೊದಲ ಇಂಜಿನಿಯರ್ ಆಗಿದ್ದರು. ಅಂತಹ ಮಹಾಪುರುಷನ ಜಯಂತಿ ಆಚರಣೆ ಮಾತೃ ಸಂಸ್ಕೃತಿ ಮೇಳೈಸುವ ಅಭೂತಪೂರ್ವ ಕಾರ್ಯಕ್ರಮವಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎನ್.ಕೃಷ್ಣಪ್ಪ ಅಭಿಪ್ರಾಯಪಟ್ಟರು.
ಪಟ್ಟಣದ ಆಡಳಿತ ಸೌಧದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ವಿಶ್ವಕರ್ಮ ಸಂಘದಿಂದ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ವಿಶ್ವಕರ್ಮ ಜಯಂತಿಯಲ್ಲಿ ಮಾತನಾಡಿದರು. ಎಲ್ಲ ಜಾತಿ, ಜನಾಂಗ, ಸಮಾಜದ ಮಹನೀಯರ, ದಾರ್ಶನಿಕರ ತತ್ವಾದರ್ಶಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಸಲುವಾಗಿ ಜಯಂತಿಗಳ ಆಚಿಸಲಾಗುತ್ತಿದೆ ಎಂದರು.
ವಿಶ್ವಕರ್ಮ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ್ ಮಾತನಾಡಿ, ದೇವರಿಗೆ ಜಯಂತಿ ಮಾಡುವಷ್ಟು ದೊಡ್ಡವರು ನಾವಲ್ಲ. ನಮ್ಮ ಸಮಾಜದ ರಾಜಕೀಯ ಅಸ್ತಿತ್ವಕ್ಕಾಗಿ 25 ವರ್ಷಗಳ ಹೋರಾಟದ ಬಳಿಕ ಸರ್ಕಾರ ಒಪ್ಪಿಗೆ ನೀಡಿ, ವಿಶ್ವಕರ್ಮ ಜಯಂತಿ ಎಂದು ಹೆಸರಿಡಲಾಯಿತು. ಪಂಚಮುಖ್ಯ ಕಸುಬುಗಳ ಮೂಲಕ ಗುರುತಿಸಿಕೊಂಡು, ಸಮಾಜದಲ್ಲಿ ಮುಖ್ಯ ಪಾತ್ರ ವಹಿಸಿರುವವರು, ದೇವರಿಗೆ ರೂಪ ಕೊಟ್ಟವರು, ವಿಶ್ವಕರ್ಮ ಜನಾಂಗದವರು ಎಂದರು.
40 ಲಕ್ಷ ಜನ ರಾಜ್ಯದಲ್ಲಿದ್ದರೂ ನಮ್ಮಲ್ಲಿನ ಒಗ್ಗಟ್ಟಿನ ಕೊರತೆಯಿಂದಾಗಿ ಇಂದಿಗೂ ಹಿಂದುಳಿದಿದ್ದೇವೆ. ಸರ್ಕಾರದಿಂದ ಜಯಂತಿ ಆಚರಿಸುವ ಮೂಲಕ ಸಮಾಜಕ್ಕೆ ಗೌರವಕೊಟ್ಟಿದೆ. ಆದರೆ, ಈ ಭಾಗದ ಜನಪ್ರತಿನಿಧಿಗಳು ಜಿಲ್ಲಾಧಿಕಾರಿಗಳು, ಈ ಕಾರ್ಯಕ್ರಮದಲ್ಲಿ ಭಾಗವಹಿಸದೆ ಅಪಮಾನ ಮಾಡಿದ್ದಾರೆ ಎಂದರು.
ಶಿಡ್ಲಘಟ್ಟ ಅಕ್ಷರ ಶಾಲೆಯ ಪ್ರಾಂಶುಪಾಲ ಪ್ರಕಾಶ್ ಮಾತನಾಡಿ, ಜಯಂತಿಗಳು ಅರ್ಥಪೂರ್ಣ ಮಹತ್ವ ಪಡೆದುಕೊಂಡಿರುತ್ತವೆ. ಇದರಿಂದ ಜ್ಞಾನದ ಪ್ರಸಾರವಾಗಲಿದೆ. ಇಡೀ ವಿಶ್ವದಲ್ಲಿ ಶ್ರೇಷ್ಠ ದೇಶ ಭಾರತ. ಇಲ್ಲಿ ಜಾತಿ ಮುಖ್ಯವಲ್ಲ ನೀತಿ ಮುಖ್ಯ ಎಂದರು.
ಉಪವಿಭಾಗಾಧಿಕಾರಿ ಶ್ರೀನಿವಾಸ್ ಮಾತನಾಡಿ, ಸಮಾಜಕ್ಕೆ ವಿಶ್ವಕರ್ಮರ ಕೊಡುಗೆ ಅಪಾರ. ಈ ಜನಾಂಗದಲ್ಲಿ ಕರಕುಶಲ, ವಾಸ್ತುಶಿಲ್ಪಿಗಳು ಹೆಚ್ಚಾಗಿದ್ದಾರೆ ಎಂದ ಅವರು, ಸಂಘದಿಂದ ಹಲವು ಬೇಡಿಕೆ ಈಡೇರಿಸಲು ಮನವಿಮಾಡಿದ್ದು, ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದರು.
ಜನಾಂಗದ ಅಧ್ಯಕ್ಷ ಎಸ್.ನಾರಾಯಣಾಚಾರ್ ಮಾತನಾಡಿ, ನಮ್ಮ ಜನ ಒಗ್ಗಟ್ಟಾಗಬೇಕು. ನಾವು ಒಂದಾಗದ ಹೊರತು, ನಮಗೆ ಸರ್ಕಾರಗಳಿಂದ ಸಿಗಬೇಕಾದ ನ್ಯಾಯ ಸಮ್ಮತ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ ಎಂದರು.
ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿಯಲ್ಲಿ ಶೇ.90ಕ್ಕೂ ಹೆಚ್ಚು ಅಂಕ ಗಳಿಸಿದ ವಿಶ್ವಕರ್ಮ ಜನಾಂಗದ ಮಕ್ಕಳನ್ನು ಗೌರವಿಸಲಾಯಿತು. ನೆಲಮಂಗಲದ ಸಿ.ಎಚ್.ಸಿದ್ದಯ್ಯ ತಂಡ ಜಾನಪದ ಹಾಗೂ ಸುಗಮ ಸಂಗೀತ ಗಾಯನ ನಡೆಸಿಕೊಟ್ಟರು.
ಜಿಪಂ ಉಪಕಾರ್ಯದರ್ಶಿ ರಮೇಶ್, ತಹಸೀಲ್ದಾರ್ ಕೆ.ಶಿವರಾಜ್, ವಿಶ್ವಕರ್ಮ ಸಂಘದ ಗೌರವಾಧ್ಯಕ್ಷ ಎನ್.ಸತ್ಯನಾರಾಯಣಾಚಾರ್, ಪದಾಧಿಕಾರಿಗಳಾದ ಅಶ್ವತ್ಥ, ದ್ರಾಕ್ಷಾಯಣಿ, ಸೌಭಾಗ್ಯಮ್ಮ, ಈಶ್ವರಾಚಾರ್, ನಾಗರಾಜ್, ಶಂಕರನಾರಾಯಣ, ಮೂರ್ತಾಚಾರ್, ಸುಧಾ ಚಂದ್ರ, ಶಿಕ್ಷಕ ಬಿ.ಪುಟ್ಟಸ್ವಾಮಿ ಇದ್ದರು.