ವಿದ್ಯಾರ್ಥಿಗಳಿಗೆ ಸವಾಲೆದಿರಿಸುವ ಪಾಠ ಕಲಿಸಿ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸಲಹೆ

District Level Teachers Day Celebration Mandya
Published on
ಮಂಡ್ಯ: ಶಿಕ್ಷಕರು ಶೈಕ್ಷಣಿಕವಾಗಿ ಪಾಠ ಮಾಡುವುದು ಸಾಮಾನ್ಯ. ಆದರೆ ಇಂದಿನ ಸಮಾಜದಲ್ಲಿ ಎದುರಿಸಬೇಕಿರುವ ಸವಾಲು ಹಾಗೂ ಸದಾ ನೈತಿಕತೆಗೆ ಆದ್ಯತೆ ನೀಡಿ ಜೀವನ ನಡೆಸಬೇಕೆನ್ನುವ ಪಾಠ ಹೇಳಿಕೊಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಸಲಹೆ ನೀಡಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕರು ವಿದ್ಯಾರ್ಥಿಗಳಿಗೆ ಪ್ರತಿದಿನ ಅರ್ಧಗಂಟೆ ಜೀವನದ ಮೌಲ್ಯಗಳು ಮುಂದಿನ ದಿನಗಳಲ್ಲಿ ಸಮಾಜದಲ್ಲಿ ಎದುರಿಸಬೇಕಿರುವ ಸವಾಲುಗಳು, ಎದುರಿಸಲು ಬೇಕಿರುವ ದೈರ್ಯ, ದೃಢತೆ, ನಾಯಕತ್ವ ಗುಣಗಳನ್ನು ಬೆಳಸಿ ಅವರನ್ನು ದೇಶದ ಸತ್ಪ್ರಜೆಗಳಾಗಿ ಸಜ್ಜುಗೊಳಿಸಬೇಕು ಎಂದರು.
ಮಕ್ಕಳಿಗೆ ತಂದೆ, ತಾಯಿ ನಂತರ ಅವರ ತಪ್ಪುಗಳನ್ನು ತಿದ್ದಿ, ತಿಳಿ ಹೇಳುವ ಶಕ್ತಿ ಇರುವುದು ಶಿಕ್ಷಕರಿಗೆ ಮಾತ್ರ. ವಿದ್ಯಾರ್ಥಿಗಳು ಮಾಡುವ ಸಾಧನೆಯ ಹಿಂದೆ ಗುರುಗಳ ಪರಿಶ್ರಮವಿರುತ್ತದೆ. ಈ ಹಿನ್ನಲೆಯಲ್ಲಿ ಪ್ರತಿಯೊಂದು ಕ್ಷೇತ್ರದ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಅಪಾರ. ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮುಗಿಸಿದ ನಂತರ ಸರ್ಕಾರಿ, ಖಾಸಗಿ ಹಾಗೂ ಸ್ವಯಂ ಉದ್ಯೋಗಿಗಳಾಗಬಹುದು‌. ಅವರನ್ನು ಉದ್ಯೋಗಸ್ಥರನ್ನಾಗಿ ಮಾಡುವುದರ ಜತೆಗೆ ಅವರಿಗೆ ಸಂಸ್ಕಾರ ನೀಡಿ ಎಂದರು.
ಶಾಸಕ ರವಿಕುಮಾರ್ ಗಣಿಗ ಮಾತನಾಡಿ, ಜಿಲ್ಲೆಯಲ್ಲಿ ಕೆಲವು ಸರ್ಕಾರಿ ಶಾಲೆಗಳು ಮುಚ್ಚಿ ಹೋಗಿರುವುದು ನಿಜಕ್ಕೂ ವಿಪರ್ಯಾಸ. ಸರ್ಕಾರಿ ಶಾಲೆಯಿಲ್ಲವಾದರೆ ಅನೇಕ ಸರ್ಕಾರಿ ಶಿಕ್ಷಕರಿಗೆ ಉದ್ಯೋಗವಿರುವುದಿಲ್ಲ. ದಯಮಾಡಿ ಶಿಕ್ಷಕ ವೃಂದದವರು ಸರ್ಕಾರಿ ಶಾಲೆಗಳನ್ನು ಉಳಿಸುವಲ್ಲಿ ಮಹತ್ತರ ಪಾತ್ರ ನಿರ್ವಹಿಸಿ. ಮಕ್ಕಳು ಶಾಲೆ ಬಿಡದಂತೆ ನೋಡಿಕೊಳ್ಳಲು ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಗಮನವಹಿಸಿ.ಶಿಕ್ಷಕರಿಗೆ ಅನುಕೂಲವಾಗಲು ಜಿಲ್ಲೆಯಲ್ಲಿನ ಗುರುಭವನ ಅಭಿವೃದ್ಧಿ ಪಡಿಸಲು ಶಿಕ್ಷಣ ಸಚಿವರ ಸಹಕಾರದೊಂದಿಗೆ 50 ಲಕ್ಷ ರೂಗಳನ್ನು ಸರ್ಕಾರ ಬಿಡುಗಡೆಗೊಳಿಸಲಿದೆ. ಶೀಘ್ರದಲ್ಲೇ ಜಿಲ್ಲೆಯಲ್ಲಿನ ಗುರು ಭವನ ಸಂಪೂರ್ಣವಾಗಿ ಅಭಿವೃದ್ಧಿ ಹೊಂದಲಿದೆ ಎಂದು ಭರವಸೆ ನೀಡಿದರು.
ವಿಧಾನ ಪರಿಷತ್ ಶಾಸಕ ಕೆ.ವಿವೇಕಾನಂದ  ಮಾತನಾಡಿ, ಅತಿಥಿ ಶಿಕ್ಷರಿಗೆ ಸರ್ಕಾರಿ ಹುದ್ದೆ ನೀಡುವಲ್ಲಿ ಸರ್ಕಾರ ಗಮನ ಹರಿಸಬೇಕು. ಇತರೆ ಸರ್ಕಾರಿ ನೌಕರರ ರೀತಿ ಪ್ರತಿ ಐದು ವರ್ಷಕ್ಕೊಮ್ಮೆ ಶಿಕ್ಷಕರಿಗೂ ಕಡ್ಡಾಯವಾಗಿ ಬಡ್ತಿ ನೀಡಿ, ಸಂಬಳ ಹೆಚ್ಚಿಸಬೇಕು. ಶಿಕ್ಷಕರಿಂದ ದೇಶ, ರಾಜ್ಯ ಬೆಳಗುತ್ತದೆ. ಮಕ್ಕಳಿಗೆ ತಂದೆ, ತಾಯಿ ನಂತರ ದೇವರ ರೂಪದಲ್ಲಿ ಕಾಣುವವರು ಶಿಕ್ಷಕರು. ಅವರಿಗೆ ಅನ್ಯಾಯವಾದರೆ ವಿದ್ಯಾರ್ಥಿಗಳಿಗೆ ಅನ್ಯಾಯವಾದಂತೆ ದಯಮಾಡಿ ಸರ್ಕಾರ ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಶಿಕ್ಷಕರು ಲೋಕದ ಕಣ್ಣುಗಳಿದ್ದಂತೆ. ಅವರಿಂದ ವಿದ್ಯಾರ್ಥಿಗಳ ಬದುಕು, ಭವಿಷ್ಯ ಬೆಳಗುತ್ತದೆ. ಶಿಕ್ಷಕರ ಮಾರ್ಗದರ್ಶನವಿಲ್ಲದ ಮಕ್ಕಳ ಬದುಕನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಶಿಕ್ಷಕರು ವಿದ್ಯಾರ್ಥಿಗಳಿಗೆ ಅಂಕಗಳಿಸಲು,  ಪರೀಕ್ಷೆಯಲ್ಲಿ ಉತ್ತಿರ್ಣರಾಗಲು ಹಾಗೂ ಪ್ರಥಮ ಸ್ಥಾನ ಗಳಿಸುವುದರ ಬಗ್ಗೆ ಹೇಗೆ ತರಬೇತಿ ನಿಡುತ್ತಿರೋ, ಹಾಗೆಯೇ ಬದುಕಿನ ಏಳು-ಬೀಳುಗಳನ್ನ ದಾಟಿ ಭವಿಷ್ಯ ರೂಪಿಸಲು ಅಗತ್ಯವಾದ ಜೀವನ ಮೌಲ್ಯಗಳನ್ನು ಸಹ ವಿದ್ಯಾರ್ಥಿಗಳಿಗೆ ಶಿಕ್ಷಕರು ತಿಳಿಸಿಕೊಡಬೇಕು .
ಶಿಕ್ಷಣ ಕ್ಷೇತ್ರ ಶ್ರೇಷ್ಠವಾಗಿದ್ದು, ಶಿಕ್ಷಕರ ವೃತ್ತಿ ಬಹಳ ಜವಾಬ್ದಾರಿಯುತವಾದ ವೃತ್ತಿ. ಪ್ರತಿ ಶಿಕ್ಷಕರು ನೈತಿಕತೆಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ವಿದ್ಯಾರ್ಥಿಗಳ ಭವಿಷ್ಯದ ಉದ್ಧಾರಕ್ಕಾಗಿ ಶ್ರಮಿಸಿ ಮತ್ತು ಸಮಾಜಕ್ಕೆ ಮಾದರಿಯಾಗಿ ಎಂದು ತಿಳಿ ಹೇಳಿದರು.
ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್, ಮೈಸೂರು ಸಕ್ಕರೆ ಕಂಪನಿ ನಿಯಮಿತ ಅಧ್ಯಕ್ಷ ಸಿ.ಡಿ. ಗಂಗಾಧರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ನಂದಿನಿ, ಡಿಡಿಪಿಯು ಸಿ.ಚಲುವಯ್ಯ, ಡಿಡಿಪಿಐ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗೇಶ್, ಉಪಾಧ್ಯಕ್ಷ ವಾಸುಕಿ ಪ್ರಸನ್ನ, ಜಿಲ್ಲಾ ಪ್ರಾಥಮಿಕ ಸರ್ಕಾರಿ ಶಿಕ್ಷಣ ಸಂಘದ ಅಧ್ಯಕ್ಷ ಎಚ್.ಡಿ.ರಮೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಇದೇ ವೇಳೆ ಶಿಕ್ಷಕರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net