ಮಕ್ಕಳಿಗೆ ಸವಾಲು ಎದುರಿಸುವ ಸಾಮರ್ಥ್ಯ ಬೆಳೆಸಿ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಕಿವಿಮಾತು

3
Published on

ಮಂಡ್ಯ: ಭವಿಷ್ಯದಲ್ಲಿ ದೇಶದ ಆಸ್ತಿಯಾಗಲಿರುವ ಮಕ್ಕಳಿಗೆ ಶಾಲಾ ಹಂತದಿಂದಲೇ ಸವಾಲು ಎದುರಿಸುವ ಸಾಮರ್ಥ್ಯ ಬೆಳೆಸುವ ಜವಾಬ್ದಾರಿಯನ್ನು ಶಿಕ್ಷಕರು ನಿರ್ವಹಿಸಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಕಿವಿಮಾತು ಹೇಳಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಿಕ್ಷಣ ಇಲಾಖೆ ಹಾಗೂ ಶಿಕ್ಷಕ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ಮಾನಸಿಕ ಧೈರ್ಯ, ಸಂಸ್ಕಾರ, ಉತ್ತಮ ಶಿಕ್ಷಣ, ಭವಿಷ್ಯದಲ್ಲಿರುವ ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ಹಾಗೂ ಬದುಕಿನ ಹೊಣೆಗಾರಿಕೆಯನ್ನು ರೂಪಿಸುವ ಬದ್ಧತೆಯನ್ನು ಬೆಳೆಸಬೇಕಿದೆ. ಈ ನಿಟ್ಟಿನಲ್ಲಿ ಶಿಕ್ಷಕರು ಕರ್ತವ್ಯ ನಿರ್ವಹಿಸಬೇಕು ಎಂದರು.

ಜನ್ಮ ನೀಡಿದ ತಾಯಿಯ ನಂತರ ಪೂಜ್ಯ ಭಾವನೆಯಿಂದ ಪ್ರತಿಯೊಬ್ಬರು ಕಾಣುವ ಶಿಕ್ಷಕರು ಸಮಾಜದಲ್ಲಿ ಶ್ರೇಷ್ಟ ಗೌರವವನ್ನು ಹೊಂದಿದ್ದಾರೆ. ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜಯಂತಿಯನ್ನು ಶಿಕ್ಷಕರ ದಿನವನ್ನಾಗಿ ಆಚರಿಸುವ ಸುಯೋಗ ಲಭಿಸಿರುವುದು ಅವರ ಕರ್ತವ್ಯ ನಿಷ್ಠೆ ಹಾಗೂ ಪಾಂಡಿತ್ಯದಿಂದ ಎಂಬುದನ್ನು ನಾವೆಲ್ಲರೂ ಅರಿತುಕೊಳ್ಳಬೇಕು. ಶಿವೈಕ್ಯ ಡಾ.ಶಿವಕುಮಾರಸ್ವಾಮೀಜಿ ಅವರು ನನ್ನ ಶಿಕ್ಷಣಾವಧಿಯಲ್ಲಿ ಉತ್ತಮ ಸಂಸ್ಕಾರ ಹಾಗೂ ಹೊಣೆಗಾರಿಕೆಯ ಜೀವನ ನಿರ್ವಹಣೆ ಮಾಡುವ ಬದುಕಿನ ಪಾಠವನ್ನು ಮನನ ಮಾಡಿಸಿದ್ದರು. ಇದು ಪುಣ್ಯವೆಂದು ಸ್ಮರಿಸಿದರು.

ಸಮಾಜದಲ್ಲಿ ಶಿಕ್ಷಕ ವೃಂದಕ್ಕೆ ಅಪಾರ ಗೌರವಿದ್ದು, ಹಿಂದಿನ ಶಿಕ್ಷಕರಂತೆ ಪ್ರಾಮಾಣಿಕತೆ, ಬದ್ದತೆಯಿಂದ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಇಂದಿನ ಶಿಕ್ಷಕರು ಕಾಳಜಿ ತೋರಬೇಕು. ಸರ್ಕಾರಿ ಶಾಲಾ ಅವಧಿ ಪೂರೈಸುವ ಧಾವಂತ ಬಿಟ್ಟು ಭವಿಷ್ಯದ ಪ್ರಜೆಗಳಾಗಿ ರೂಪಿಸುವ ಹೊಣೆಗಾರಿಕೆ ಮೆರೆಯಬೇಕಿದೆ. ರಾಜ್ಯ ಸರ್ಕಾರ ಮಕ್ಕಳಲ್ಲಿನ ಅಪೌಷ್ಠಿಕತೆ ನಿವಾರಿಸಲು ಮೊಟ್ಟೆ ಹಾಗೂ ಬಾಳೆಹಣ್ಣು ವಿತರಿಸುವ ಯೋಜನೆ ಜಾರಿಗೊಳಿಸಿದೆ. ಅಂತೆಯೇ ಮಕ್ಕಳಿಗೆ ಅನುಕೂಲವಾಗುವಂತೆ ಪ್ರಸಕ್ತ ವರ್ಷ 10 ಸಾವಿರ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಮುಂದಾಗಿದ್ದು, ಖಾಲಿ ಇರುವ ಶಿಕ್ಷಕ ಹುದ್ದೆಗಳಿಗೂ ನೇಮಕಾತಿಗೂ ಆದ್ಯತೆ ನೀಡಲಿದೆ. ಜತೆಗೆ ನೌಕರರ ಎನ್‌ಪಿಎಸ್ ಬೇಡಿಕೆ ಈಡೇರಿಸಲು ಬದ್ದವಾಗಿದೆ. ಜಿಲ್ಲೆಯ ಶಿಕ್ಷಕರಾದ ಪ್ರಶಾಂತ ಹಾಗೂ ರಜಿನಿ ಅವರು ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿರುವುದು ಶ್ಲಾಘನೀಯ. ಸರ್ಕಾರ ಶಿಕ್ಷಣ ಕ್ಷೇತ್ರದ ಬಲವರ್ಧನೆಗೆ ಶ್ರಮಿಸಲಿದ್ದು, ಶಿಕ್ಷಕರು ಜವಾಬ್ದಾರಿಯಿಂದ ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ಹಾಗೂ ಹೊಣೆಗಾರಿಕೆ ರೂಪಿಸಲು ಆಸಕ್ತಿ ತೋರಬೇಕೆಂದು ಮನವಿ ಮಾಡಿದರು.

ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾಗಿದೆ. ಬೇರೆ ವೃತ್ತಿಗೆ ಹೋಲಿಕೆ ಮಾಡಿದರೆ ಶಿಕ್ಷಕ ವೃತ್ತಿಗೆ ಸಿಗುವ ಗೌರವ, ಮನ್ನಣೆ ಬೇರೆಯವರಿಗೆ ಸಿಗುವುದಿಲ್ಲ. ಐಎಎಸ್, ಐಪಿಎಸ್ ಸೇರಿದಂತೆ ಇನ್ನಿತರ ಹುದ್ದೆಗಳಿಗಿಂತಲೂ ಶಿಕ್ಷಕರ ಹುದ್ದೆ ಉನ್ನತ ಸ್ಥಾನವಿದೆ. ತರಗತಿಯ ಕೊಠಡಿಯಲ್ಲಿ ವಿದ್ಯಾರ್ಥಿಗೆ ನೈತಿಕ ಮೌಲ್ಯಗಳ ಶಿಕ್ಷಣವನ್ನು ಹೇಳಿಕೊಟ್ಟಾಗ ಮಾತ್ರ ಆರೋಗ್ಯಕರ ಸಮಾಜ ನಿರ್ಮಾಣ ಮಾಡುವ ಗುರಿ ಯಶಸ್ವಿಯಾಗುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಕರು ನೈತಿಕ ಶಿಕ್ಷಣಕ್ಕೆ ಆದ್ಯತೆ ನೀಡಿ. ಶಿಕ್ಷಕರು ತರಗತಿಗೆ ತೆರಳಿ ಪುಸ್ತಕದ ಪಾಠ ಮಾತ್ರ ಹೇಳಿ ಬರುವುದಲ್ಲ. ಆದರ್ಶ ಶಿಕ್ಷಕರಾಗಿ ಮಕ್ಕಳನ್ನು ತಿದ್ದಬೇಕು. ಹಾಗಾಗಿ ಒಬ್ಬ ವಿದ್ಯಾರ್ಥಿಯ ಸರ್ವತೋಮುಖ ಅಭಿವೃದ್ಧಿಯ ಬೆಳವಣಿಗೆಗೆ ದಾರಿ ರೂಪಿಸುವಂತಹ ಹೊಣೆಗಾರಿಕೆ ಶಿಕ್ಷಕರ ಮೇಲಿದೆ ಎಂದರು.

ಶಾಸಕ ರವಿಕುಮಾರ್ ಗಣಿಗ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿ.ಪಂ ಸಿಇಒ ತನ್ವೀರ್ ಶೇಖ್ ಆಸಿಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಡಿಡಿಪಿಐ ಶಿವರಾಮೇಗೌಡ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಬಿ.ಜಯಪ್ರಕಾಶ್‌ಗೌಡ, ಎಸ್‌ಬಿಇಟಿ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ, ರಾಜ್ಯ ಶಿಕ್ಷಕರ ಸಂಘದ ಅಧ್ಯಕ್ಷ ಎನ್.ನಾಗೇಶ್, ಜಿಲ್ಲಾಧ್ಯಕ್ಷ ಜೆ.ವೈ.ಮಂಜುನಾಥ್, ಕಾರ್ಯದರ್ಶಿ ರವಿಶಂಕರ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಎಸ್.ರವೀಶ್, ಕಾರ್ಯದರ್ಶಿ ಜಯರಾಮು, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಂಭೂಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net