

ಮಂಡ್ಯ: ದಢಾರ ಸಾಂಕ್ರಾಮಿಕ ರೋಗವಾಗಿದ್ದು, ಒಬ್ಬರಿಂದ ಮತ್ತೊಬ್ಬರಿಗೆ ಬಹುಬೇಗ ಹರಡುತ್ತದೆ. ಆದ್ದರಿಂದ ಜಿಲ್ಲೆಯಲ್ಲಿ ಮಕ್ಕಳು ಮೀಸಲ್ಸ್ ಮತ್ತು ರುಬೆಲ್ಲಾ ಲಸಿಕೆಯಿಂದ ವಂಚಿತರಾಗದಂತೆ ಎಚ್ಚರಿಕೆ ವಹಿಸಿ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ ಮತ್ತು ದಢಾರ ರುಬೆಲ್ಲಾ ನಿರ್ಮೂಲನೆ ಕಾರ್ಯಕ್ರಮ ಕುರಿತ ಜಿಲ್ಲಾಮಟ್ಟದ ಕಾರ್ಯಪಡೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಧ್ಯಮ ಅಥವಾ ತೀವ್ರ ಅಪೌಷ್ಟಿಕತೆ ಹೊಂದಿರುವ ಮಕ್ಕಳಲ್ಲಿ ರೋಗದ ಹರಡುವಿಕೆ ಹೆಚ್ಚು. ದಢಾರ ಮತ್ತು ರುಬೆಲ್ಲಾ ಕಾಯಿಲೆಯಿಂದ ರಕ್ಷಿಸಲು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿ ಮಕ್ಕಳಿಗೆ 9 ರಿಂದ 11 ತಿಂಗಳುಗಳಲ್ಲಿ ಮೊದಲನೇ ವರಸೆ ಮತ್ತು 16 ರಿಂದ 24 ತಿಂಗಳಲ್ಲಿ ಎರಡನೇ ವರಸೆ ಲಸಿಕೆ ನೀಡಲಾಗುವುದು ಎಂದರು.
ಜಿಲ್ಲೆಯಲ್ಲಿ ಈ ವರ್ಷದ ಏಪ್ರಿಲ್ನಿಂದ ಅಕ್ಟೋಬರ್‌ರವರೆಗೆ ಮೀಸಲ್ಸ್ ಮತ್ತು ರುಬೆಲ್ಲಾ ಮೊದಲನೇ ವರಸೆ ಲಸಿಕೆ ಪಡೆಯಲು 12,361 ಗುರಿ ನಿಗದಿಯಾಗಿತ್ತು. ಈ ಪೈಕಿ 11,885 ಮಕ್ಕಳಿಗೆ ಲಸಿಕೆ ನೀಡಿ ಶೇ 96.1ರಷ್ಟು ಗುರಿ ಸಾಧಿಸಲಾಗಿದೆ. ಎರಡನೇ ವರಸೆಯಲ್ಲಿ 12,361 ಗುರಿ ನಿಗದಿಯಾಗಿದ್ದು, 11,759 ಮಕ್ಕಳಿಗೆ ಲಸಿಕೆ ನೀಡಿ ಶೇ.95.1ರಷ್ಟು ಗುರಿ ಸಾಧಿಸಲಾಗಿದೆ. ಆದರೆ ಶೇ.100 ರಷ್ಟು ಸಾಧನೆಗೆ ಅಧಿಕಾರಿಗಳು ಶ್ರಮಿಸಬೇಕು ಎಂದರು.
ಜಿಲ್ಲೆಯಲ್ಲಿ ಮೀಸಲ್ಸ್ ಮತ್ತು ರುಬೆಲ್ಲಾ ಕಾಯಿಲೆ ಲಕ್ಷಣ ಅಥವಾ ಯಾವುದೇ ಶಂಕಿತ ಪ್ರಕರಣಗಳು ಕಂಡುಬಂದಲ್ಲಿ ಜಿಲ್ಲಾ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು. ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ ಕುರಿತು ಹಾಗೂ ದಢಾರ ಮತ್ತು ರುಬೆಲ್ಲಾ ನಿರ್ಮೂಲನೆ ಕುರಿತು ಜಾಗೃತಿ ಮೂಡಿಸುವಲ್ಲಿ ಧಾರ್ಮಿಕ ಮುಖಂಡರು, ಗಣ್ಯ ವ್ಯಕ್ತಿಗಳ ಸಹಕಾರದೊಂದಿಗೆ ಹಾಗೂ ಇಲಾಖಾ ಮುಖ್ಯಸ್ಥರು ವ್ಯಾಪಕವಾಗಿ ಐ.ಇ.ಸಿ ಚಟುವಟಿಕೆ ನಡೆಸಬೇಕು. ತಾಲೂಕು ಮಟ್ಟದಲ್ಲಿ ಆರೋಗ್ಯಇಲಾಖಾ ಮುಖ್ಯಸ್ಥರು ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲ ಮಕ್ಕಳು ಲಸಿಕೆ ಪಡೆದಿರುವುದರ ಕುರಿತು ಖಾತರಿಪಡಿಸಿಕೊಳ್ಳಬೇಕು ಎಂದರು
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ ಮೋಹನ್, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಸೋಮಶೇಖರ್, ಆರ್‌ಸಿಎಚ್ ಅಧಿಕಾರಿ ಡಾ.ಅಶ್ವಥ್, ಕುಟುಂಬ ಕಲ್ಯಾಣಾಧಿಕಾರಿ ಡಾ.ಬೆಟ್ಟಸ್ವಾಮಿ ಇತರರಿದ್ದರು.