ಡೆಂಘೆ ಜ್ವರದ ಜಾಗೃತಿ ಮೂಡಿಸಿ: ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ

District Level Task Force Committee Meeting Mandya
Published on

ಮಂಡ್ಯ: ಜಿಲ್ಲೆಯಲ್ಲಿ ಡೆಂಘೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಶಾಲೆ ಮತ್ತು ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜಿಸಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಡೆಂಘೆ ನಿಯಂತ್ರಣ ಕುರಿತು ಜಿಲ್ಲಾಮಟ್ಟದ ಟಾಸ್ಕ್‌ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಜುಲೈನಲ್ಲಿ ಒಟ್ಟು 395 ಪ್ರಕರಣ ದಾಖಲಾಗಿವೆ. ಮಂಡ್ಯ ನಗರದಲ್ಲಿ 75, ಮಂಡ್ಯ ಗ್ರಾಮಾಂತರದಲ್ಲಿ 147, ಮದ್ದೂರು 61, ಮಳವಳ್ಳಿ 24, ಪಾಂಡವಪುರ 19, ಶ್ರೀರಂಗಪಟ್ಟಣ 34, ಕೆ.ಆರ್.ಪೇಟೆ 14, ನಾಗಮಂಗಲ 21 ಪ್ರಕರಣ. ಆದ್ದರಿಂದ ಜಿಲ್ಲಾದ್ಯಂತ ಸಾರ್ವಜನಿಕರು ಡೆಂಘೆ ಜ್ವರ ಬಾರದಂತೆ ಮುನ್ನೆಚ್ಚರಿಕೆ ಕ್ರಮ ಅನುಸರಿಸಬೇಕು ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್ ಮಾತನಾಡಿ, ಒಂದು ಗ್ರಾಮ ಅಥವಾ ಪ್ರದೇಶದಲ್ಲಿ 100 ಮೀಟರ್ ಅಂತರದಲ್ಲಿ 2 ಡೆಂಘೆ ಪ್ರಕರಣಗಳು ವರದಿಯಾದಲ್ಲಿ ಅಂತಹ ಗ್ರಾಮ ಅಥವಾ ಪ್ರದೇಶವನ್ನು ಡೆಂಘೆ ಹಾಟ್‌ಸ್ಪಾಟ್ ಎಂದು ಗುರುತಿಸಿ, ರೋಗ ನಿಯಂತ್ರಣವನ್ನು ಸಮರೋಪಾದಿಯಲ್ಲಿ ಮಾಡಲಾಗುತ್ತಿದೆ. ತ್ವರಿತ ಜ್ವರ ಸಮೀಕ್ಷೆ ಹಾಗೂ ಈಡೀಸ್ ಲಾರ್ವಾ ಸಮೀಕ್ಷೆ ಕಾರ್ಯವನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಹಾಟ್‌ಸ್ಪಾಟ್ ಗ್ರಾಮಗಳಲ್ಲಿ ತಾತ್ಕಾಲಿಕ ಕ್ಲಿನಿಕ್ ತೆರೆದು ಚಿಕಿತ್ಸೆ ನೀಡಲಾಗುತ್ತಿದೆ. ಡೆಂೆ ಜ್ವರ ಪ್ರಕರಣಗಳಿಗೆ ರಕ್ತಲೇಪನ ಪರೀಕ್ಷೆ ಹಾಗೂ ಸಂಶಯಾಸ್ಪದ ಪ್ರಕರಣಗಳಿಂದ ರಕ್ತ ಮಾದರಿ ಸಂಗ್ರಹಿಸಿ ಜಿಲ್ಲಾ ಸರ್ವೆಲೆನ್ಸ್ ಲ್ಯಾಬ್‌ನಲ್ಲಿ ಪರೀಕ್ಷೆಗೋಳಪಡಿಸಲಾಗುತ್ತಿದೆ. ಇದುವರೆಗೂ 6 ಫಿವರ್ ಕ್ಲಿನಿಕ್ ಕರ್ತವ್ಯ ನಿರ್ವಹಿಸುತ್ತಿದೆ. ಇದಲ್ಲದೆ ಹಾಟ್‌ಸ್ಪಾಟ್ ವರದಿಯಾದ ಗ್ರಾಮಗಳಲ್ಲಿ ಬಿಪಿಎಲ್ ಕುಟುಂಬದವರಿಗೆ ಬೇವಿನ ಎಣ್ಣೆ ವಿತರಿಸಲಾಗುತ್ತಿದೆ. ಜತೆಗೆ ಜಿಲ್ಲೆಯ ಎಲ್ಲ ಶಾಲೆ ಮತ್ತು ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಡೆಂಘೆ ನಿಯಂತ್ರಣದ ಬಗ್ಗೆ ಆರೋಗ್ಯ ಶಿಕ್ಷಣ ನೀಡಿ ಅರಿವು ಮೂಡಿಸಿ ಬೇವಿನ ಎಣ್ಣೆಯನ್ನು ವಿತರಿಸಲಾಗುತ್ತಿದೆ. ಇದುವರೆಗೂ 50 ಎಂ.ಎಲ್ ನ 4,903 ಬಾಟಲಿ ಹಂಚಿಕೆ ಮಾಡಲಾಗಿದೆ ಎಂದು ವಿವರಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ತುಷಾರಮಣಿ, ನಿವೃತ್ತ ಡಿಎಚ್‌ಒ ಡಾ.ಮರೀಗೌಡ, ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಕಾಂತಾರಾಜು, ಶಿಕ್ಷಣಾಧಿಕಾರಿ ಚಂದ್ರಕಾಂತಾ, ಮಿಮ್ಸ್ ವೈದ್ಯ ಡಾ.ಹರೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net