

ರಾಯಚೂರು ಈ ಹಿಂದೆ ಕೇವಲ ಸವಣಿಯರು ಮಾತ್ರ ಶಿಕ್ಷಣ ಮತ್ತು ಇತರೆ ವಿದ್ಯೆಯನ್ನು ಕಲಿಯುವ ಪರಿಸ್ಥಿತಿ ಇತ್ತು. ನಂತರ ಡಾ.ಬಿ.ಆರ್.ಅಂಬೇಡ್ಕರ ನೀಡಿದ ಸಂವಿಧಾನದಿಂದ ಪ್ರತಿಯೊಬ್ಬರೂ ಕೂಡ ಶಿಕ್ಷಣ ಪಡೆದುಕೊಳ್ಳಲು ಸಾಧ್ಯವಾಯಿತೆಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ನಗರದ ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಭಾನುವಾರ ಕೆ.ಸಿ.ಬಿ ಆಂಡ್ ಸನ್ಸ್ ಕೆ.ಅಯ್ಯಣ್ಣ ವಡವಾಟಿ ಹಾಗೂ ಜಿಲ್ಲಾ ಕನಕ ನೌಕರರ ಸಂಘದಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಒಂದು ಸಮುದಾಯ ಮುಂದುವರೆಯಲು ಶಿಕ್ಷಣ ತಳಪಾಯವಾಗಿ ಸಮುದಾಯದದ್ದು,
ಪ್ರತಿಯೊಬ್ಬರೂ ಶಿಕ್ಷಣವನ್ನು ಪಡೆದು ಉನ್ನತ ಸ್ಥಾನಕ್ಕೆ ತಲುಪಬೇಕು ಅಂದಾಗ ಮಾತ್ರ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಯಾವುದೇ ಸಮಾಜ ಮುಂದೆ ಬರಬೇಕಾದರೆ ಆ ಸಮುದಾಯದ ಮಕ್ಕಳು ಶಿಕ್ಷಣವಂತರಾಗುವುದು ಅತ್ಯಂತ ಮುಖ್ಯವಾಗಿರುತ್ತದೆ ಎಂದರು. ಇಂದು ಅತಿ ಹೆಚ್ಚು ಅಂಕ ಪಡೆದು ಪ್ರತಿಭಾ ಪುರಸ್ಕಾರಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಸಾಧನೆ ಇಲ್ಲಿಗೆ ಮುಗಿಯಬಾರದು ಇನ್ನೂ ಹೆಚ್ಚಿನ ಸಾಧನೆ ಮಾಡಿ ಸಮುದಾಯಕ್ಕೆ ಕೊಡುಗೆ ನೀಡುವ ಕೆಲಸ ಮಾಡಬೇಕು.
ಕುರುಬ ಸಮಾಜವು ಇತರೆ ಸಮುದಾಯಗಳಂತೆ ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗದಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿಲ್ಲ. ಆದ್ದರಿಂದ ನಮ್ಮ ಹಕ್ಕುಗಳನ್ನು ನಾವು ಪಡೆಯಲು ಡಾ.ಬಿ.ಆರ್.ಅಂಬೇಡ್ಕರ್ ಅವರ ಮೂರು ಮಂತ್ರಗಳಾದ ಶಿಕ್ಷಣ, ಸಂಘಟನೆ ಮತ್ತು ಹೋರಾಟವನ್ನು ಎಂದಿಗೂ ಮರೆಯಬಾರದು ಎಂದರು.
ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಬಗ್ಗೆ ಅಪಪ್ರಚಾರ ಹೆಚ್ಚಾಗಿ ಕಂಡುಬರುತ್ತಿದೆ. ಸಮೀಕ್ಷೆಯಿಂದ ಸಮಾಜವನ್ನು ಒಡೆಯಲಾಗುತ್ತದೆ ಎಂದು ಅನೇಕರು ಅಪಪ್ರಾಚಾರ ಮಾಡುತ್ತಿದ್ದು, ಸರ್ಕಾರ ಸಮಾಜದಲ್ಲಿರುವ ಪ್ರತಿಯೊಂದು ಕುಟುಂಬದ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿಗಳನ್ನು ಪಡೆದುಕೊಂಡು ಅವರಿಗೆ ಶಕ್ತಿ ತುಂಬಲು ಸಮೀಕ್ಷೆ ನೆರವಾಗಲಿದೆ. ಅಪಪ್ರಚಾರಕ್ಕೆ ಕಿವಿಗೊಡದೇ ಸಮೀಕ್ಷೆಗೆ ಪ್ರತಿಯೊಬ್ಬರು ಬೆಂಬಲಿಸಬೇಕು ಎಂದು ತಿಳಿಸಿದರು.
ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಮಾತನಾಡಿ, ಸಿಎಂ ಸಿದ್ದರಾಮಯ್ಯ ಅವರು 2013ರಿಂದ 2018ರವರೆಗೆ 160 ಭರವಸೆಗಳನ್ನು ಈಡೇರಿಸಿದ್ದಾರೆ. ಸಮಾಜದ ಮಕ್ಕಳು ಉತ್ತಮವಾಗಿ ಅಭ್ಯಾಸ ಮಾಡಿ ಮುಂದೆ ಬರಬೇಕು ಎಂದು ತಿಳಿಸಿದರು. ಮಟಮಾರಿ ಶಿವಾನಂದ ಮಠದ ಶ್ರೀವಜ್ಞಾನಾನಂದ ಸ್ವಾಮೀಜಿ ಸಾನಿಧ್ಯವಹಿಸಿದ್ದರು.
ಈ ಸಂದರ್ಭದಲ್ಲಿ ಕೆ.ಸಿ.ಬಿ ಆಂಡ್ ಸನ್ಸ್‌ನ ಮಾಲೀಕ ಕೆ.ಅಯ್ಯಣ್ಣ ವಡವಾಟಿ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ನಿಕೇತರಾಜ್.ಎಂ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ನಿರ್ದೇಶಕ ರಾಮಕೃಷ್ಣ ರೊಳ್ಳೆ, ರಾಜ್ಯ ಪ್ರದೇಶ ಕುರುಬ ಸಂಘದ ಅಧ್ಯಕ್ಷ ಎಂ.ಈರಣ್ಣ, ಮಾಜಿ ಎಂಎಲ್ಸಿ ಶರಣಪ್ಪ ಮಟ್ಟೂರು, ಕೆ.ಬಸವಂತಪ್ಪ, ಕೆ.ಕರಿಯಪ್ಪ, ಆನಂದ ಬಂದ್ರಕಳ್ಳಿ, ಗಂಗಾಧರ, ಶ್ರೀದೇವಿ, ಜಿ.ಯು.ಹುಡೇದ, ಮಹಾದೇವಪ್ಪ ಮಿರ್ಜಾಪೂರ, ನಾಗವೇಣಿ ಪಾಟೀಲ್, ಅಶೋಕ್.ಬಿ, ಚಾಮುಂಡಿ, ಚಂದ್ರಶೇಖರ, ನಾಗರಾಜ ಮಡ್ಡಿಪೇಟೆ, ಮಂದಕಲ್ ಬಾಬು,ಬಜಾರಪ್ಪ ಸೇರಿದಂತೆ ಅನೇಕರು ಇದ್ದರು.