ಉಡುಪಿ ಜಿಲ್ಲೆಯಲ್ಲಿ 11 ಕಾಲರಾ ಪ್ರಕರಣ ವರದಿ

udp-18-dc
Published on

ಉಡುಪಿ: ಜಿಲ್ಲೆಯಲ್ಲಿ ಕಳೆದ ವಾರದಲ್ಲಿ 11 ಕಾಲರಾ ಪ್ರಕರಣ ವರದಿಯಾಗಿದೆ. ಕಾರ್ಕಳದ ಈದು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ 5 ಪ್ರಕರಣ, ಮಲ್ಪೆ, ಶಿರ್ವ, ಕಾಪು, ಕೆಮ್ಮಣ್ಣು ವಾಂತಿ ಬೇಧ ಪ್ರಕರಣ ಕಂಡುಬಂದಿದೆ. ಸಾರ್ವಜನಿಕರು ಕಾಲರಾ ರೋಗದ ಬಗ್ಗೆ ಮುಂಜಾಗ್ರತೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹೇಳಿದರು.

ರಜತಾದ್ರಿಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಕಣ್ಗಾವಲು ಸಮಿತಿ ಸಭೆ ಹಾಗೂ ಡೆಂಗ್ಯೂ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಾರ್ವಜನಿಕರು ತಮ್ಮ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎಲ್ಲಾ ಸಮುದ್ರ ಉತ್ಪನ್ನಗಳನ್ನು ಚೆನ್ನಾಗಿ ತೊಳೆದು ಉಪಯೋಗಿಸಬೇಕು. ಊಟ ತಯಾರಿ ಹಾಗೂ ಊಟ ಮಾಡುವ ಮುನ್ನಾ ಕೈಗಳನ್ನು ಸಾಬೂನಿನಿಂದ ಸ್ವಚ್ಛಗೊಳಿಸಬೇಕು. ಶೌಚಾಲಯಗಳನ್ನು ಬಳಸಿದ ನಂತರವು ಸಹ ಕೈಗಳನ್ನು ಸಾಬೂನಿನಿಂದ ತೊಳೆದು ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದರು.

ಹೋಟೆಲ್​, ರೇಸ್ಟೂರೆಂಟ್​ನಲ್ಲಿ ಜನರಿಗೆ ಕುಡಿಯಲು ಬಿಸಿ ನೀರನ್ನು ನೀಡಬೇಕು. ಹೋಟೆಲ್​ಗಳಲ್ಲಿ ಬಳಸುವ ಲೋಟ, ತಟ್ಟೆ ಹಾಗೂ ಪಾತ್ರೆಗಳನ್ನು ಸಹ ಬಿಸಿ ನೀರಿನಲ್ಲಿ ತೊಳೆಯಬೇಕು. ಯಾವುದೇ ಸಮುದ್ರದ ಉತ್ಪನ್ನಗಳನ್ನು ಮುಟ್ಟಿದಾಗ ಸರಿಯಾಗಿ ಕೈತೊಳೆದು ಆಹಾರ ಪದಾರ್ಥಗಳನ್ನು ಮುಟ್ಟುವುದು ಸೂಕ್ತ ಎಂದರು.

ಸಾರ್ವಜನಿಕರು ರಸ್ತೆ ಬದಿಯಲ್ಲಿ ಮಾರಾಟ ಮಾಡುವ ತಿನಿಸು ಹಾಗೂ ತಳ್ಳು ಗಾಡಿಯಲ್ಲಿ ಮಾರಾಟ ಮಾಡುವ ಆಹಾರಗಳನ್ನು ಹಾಗೂ ಹಣ್ಣುಗಳನ್ನು ಸೇವಿಸಬಾರದು. ಶಾಲಾ-ಕಾಲೇಜು ಹಾಗೂ ಅಂಗನವಾಡಿಗಳಲ್ಲಿ ಮಕ್ಕಳು ಕೈಗಳನ್ನು ಸ್ವಚ್ಛವಾಗಿ ತೊಳೆದು ಆಹಾರ ಉತ್ಪನ್ನಗಳನ್ನು ಬಳಸುವ ಬಗ್ಗೆ ಅರಿವು ಮೂಡಿಸಬೇಕು ಎಂದರು.

ಅಕ್ಟೋಬರ್​ 2 ರವರೆಗೆ ಸ್ವಚ್ಚತಾ ಸೇವಾ ಅಭಿಯಾನವನ್ನು ಅಂದೋಲನದ ರೀತಿಯಲ್ಲಿ ನಡೆಸಲಾಗುತ್ತಿದೆ. ಸಾರ್ವಜನಿಕರು ತಮ್ಮ ಮನೆಯ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಸ್ಥಳಿಯ ಸಂಸ್ಥೆಗಳು ಸಾರ್ವಜನಿಕ ಸ್ಥಳಗಳು ಬಸ್​ ನಿಲ್ದಾಣ ರೈಲ್ವೆ ನಿಲ್ದಾಣ, ಸಾರ್ವಜನಿಕ ಶೌಚಾಲಯಗಳಲ್ಲಿ ನೈರ್ಮಲ್ಯವನ್ನು ಕಾಪಾಡಲು ಹೆಚ್ಚಿನ ಆದ್ಯತೆ ವಹಿಸಬೇಕು ಎಂದು ಸೂಚನೆ ನೀಡಿದರು.

ಮಣಿಪಾಲ ಇನ್​ಸ್ಟಿಟ್ಯೂಟ್​ ಆಫ್​ ಟೆಕ್ನಾಲಜಿ ವತಿಯಿಂದ ಗರ್ಭಿಣಿ ಮಹಿಳೆಯರ ಆರೋಗ್ಯ ಸುಧಾರಣೆ ಕುರಿತು ಮಾಹಿತಿಗಳನ್ನು ಕ್ರೋಢಿಕರಿಸುವ ಜನನಿ ಆ್ಯಪ್​ ಸೃಜನಿಸಿದ್ದು ಇದರ ಪ್ರಾತ್ಯಕ್ಷೀತೆಯನ್ನು ಸಭೆಯಲ್ಲಿ ಪ್ರದರ್ಶಿಸಿ ಸಾಧಕ ಭಾದಕಗಳನ್ನು ಚರ್ಚಿಸಲಾಯಿತು.

ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತಿಕ್​ ಬಾಯಲ್​, ಎಂ.ಐ.ಟಿ ಡೈರೆಕ್ಟರ್​ ಡಾ. ಅನಿಲ್​ ರಾಣಾ, ಎಂ.ಐ.ಟಿ ಉಪನಿರ್ದೇಶಕ ಸೋಮಶೇಖರ ಭಟ್​, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಐ.ಪಿ ಗಡಾದ್​, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನಾಗರತ್ನ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಪ್ರಶಾಂತ್​ ಭಟ್​, ಪೌರಾಯುಕ್ತ ರಾಯಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ. ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net