ಪತ್ರಕರ್ತರು ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಉತ್ತಮ: ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ ಅಭಿಮತ

District level sports meet Mandya
Published on

ಮಂಡ್ಯ: ಮಾಧ್ಯಮಗಳು ತ್ವರಿತವಾಗಿ ಸುದ್ದಿ ಬಿತ್ತರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಆದರೂ ಸುದ್ದಿ ಮಾಡುವುದರ ನಡುವೆಯೂ ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಉತ್ತಮ ಬೆಳವಣಿಗೆ ಎಂದು ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ ಹೇಳಿದರು.

ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸಂಘದ ಸದಸ್ಯರು ಮತ್ತು ಕುಟುಂಬದವರಿಗೆ ಏರ್ಪಡಿಸಲಾಗಿದ್ದ ಜಿಲ್ಲಾಮಟ್ಟದ ಕ್ರೀಡಾಕೂಟವನ್ನು ಗುಂಡು ಹಾಗೂ ಭರ್ಜಿ ಎಸೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಪತ್ರಕರ್ತರು ಒತ್ತಡದಲ್ಲಿ ಕೆಲಸ ಮಾಡುವವರು. ಅವರ ಒತ್ತಡ ಕಡಿಮೆ ಮಾಡಲು ಕ್ರೀಡಾಕೂಟಗಳು ನಡೆಯಬೇಕು. ಪತ್ರಕರ್ತರು ಮತ್ತು ಕುಟುಂಬದವರು ಇಷ್ಟು ಆಸಕ್ತಿಯಿಂದ ಕ್ರೀಡಾಕೂಟದಲ್ಲಿ ಭಾಗಿಯಾಗಿರುವುದು ಸಂತಸದ ವಿಚಾರ ಎಂದರು.

ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಮತ್ತೀಕೆರೆ ಜಯರಾಂ ಮಾತನಾಡಿ, ಪ್ರತಿ ವರ್ಷವೂ ಮಂಡ್ಯ ಪತ್ರಕರ್ತರ ಸಂಘದಿಂದ ಕ್ರೀಡಾಕೂಟ ನಡೆಸಲಾಗುತ್ತಿದೆ. ಪತ್ರಕರ್ತರು ಹಾಗೂ ಅವರ ಕುಟುಂಬ ಒಂದೇ ಕಡೆ ಸೇರಿ ಈ ರೀತಿಯ ಕ್ರೀಡಾಕೂಟದಲ್ಲಿ ಭಾಗಿಯಾಗುವುದು ಒಳ್ಳೆಯ ವಿಚಾರ ಎಂದು ಹೇಳಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್.ನವೀನ್‌ಕುಮಾರ್ ಮಾತನಾಡಿ, ಒತ್ತಡದಿಂದ ಕಾರ್ಯನಿರ್ವಹಿಸುವ ಪತ್ರಕರ್ತರು ಇಷ್ಟು ಉತ್ಸಾಹದಿಂದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಲ್ಲದೇ ಅವರ ಕುಟುಂಬಸ್ಥರನ್ನು ಕರೆ ತಂದಿದ್ದಾರೆ ಎಂದರು.

ರಾಜ್ಯ ಪತ್ರಕರ್ತರ ಸಂಘದ ಕಾರ್ಯದರ್ಶಿ ಸೋಮಶೇಖರ್ ಕೆರಗೋಡು, ಮಾಜಿ ಜಿಲ್ಲಾಧ್ಯಕ್ಷರಾದ ಎಸ್.ಕೃಷ್ಣ ಸ್ವರ್ಣಸಂದ್ರ, ಬಿ.ಪಿ.ಪ್ರಕಾಶ್, ನವೀನ್ ಚಿಕ್ಕಮಂಡ್ಯ, ಪ್ರಧಾನ ಕಾರ್ಯದರ್ಶಿ ಆನಂದ, ಖಜಾಂಚಿ ನಂಜುಂಡಸ್ವಾಮಿ ಇತರರಿದ್ದರು.

ಜಿಲ್ಲೆಯ ವಿವಿಧೆಡೆಗಳಿಂದ 200ಕ್ಕೂ ಹೆಚ್ಚು ಪತ್ರಕರ್ತರು ಹಾಗೂ ಕುಟುಂಬ ಸದಸ್ಯರು ಆಗಮಿಸಿ ವಿವಿಧ ಕ್ರೀಡೆಯಲ್ಲಿ ಭಾಗವಹಿಸಿದರು. ಓಟ, ಗುಂಡು ಎಸೆತ, ಭರ್ಜಿ ಎಸೆತ, ಲೆಮೆನ್ ಆ್ಯಂಡ್ ಸ್ಪೂನ್, ಮ್ಯೂಸಿಕಲ್ ಛೇರ್, ಹಾಗೂ ರಂಗಗೀತೆ, ಭಾವಗೀತೆ ಸ್ಪರ್ಧೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net