ಕ್ರೀಡೆಯಿಂದ ಯುವಜನತೆಯಲ್ಲಿ ಶಿಸ್ತು, ನಾಯಕತ್ವ...

Kridakoota
Published on

ಹರಿಪ್ರಸಾದ ರೈ ಅನಿಸಿಕೆ

ಜಿಲ್ಲಾ ಮಟ್ಟದ ಕ್ರೀಡಾಕೂಟ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಓದಿನೊಂದಿಗೆ ಕ್ರೀಡೆಯಲ್ಲೂ ತೊಡಗಿಕೊಂಡರೆ ಶಿಸ್ತು, ನಾಯಕತ್ವ ಬೆಳೆಯಲು ಸಹಕಾರಿಯಾಗುತ್ತದೆ. ಹೀಗಾಗಿ ಯುವಜನತೆ ಶಿಕ್ಷಣದ ಜತೆ ಕ್ರೀಡೆಗೂ ಒತ್ತು ನೀಡಿದಾಗ ಆರೋಗ್ಯವೂ ವೃದ್ಧಿಯಾಗುತ್ತದೆ. ಬದುಕಿನಲ್ಲಿ ಶಿಸ್ತು ಅಳವಡಿಸಿಕೊಂಡು ತಾವುಗಳು ದೇಶದ ಆಸ್ತಿಯಾಗಬೇಕು ಎಂದು ಉಡುಪಿ ಜಿಲ್ಲಾ ಅಥ್ಲೆಟಿಕ್​ ಅಸೋಸಿಯೇಷನ್​ ಅಧ್ಯಕ್ಷ ಹರಿಪ್ರಸಾದ ರೈ ಆಶಯ ವ್ಯಕ್ತಪಡಿಸಿದರು.

ಉಡುಪಿ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ನೆಹರು ಯುವ ಕೇಂದ್ರ ಉಡುಪಿ ಆಶ್ರಯದಲ್ಲಿ ಉಡುಪಿ ಜಿಲ್ಲಾಡಳಿತ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಕಾರದಲ್ಲಿ ಮಾ.16ರಂದು ಆಯೋಜಿಸಿದ್ದ ಉಡುಪಿ ಜಿಲ್ಲಾ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ಪರಿಪೂರ್ಣ ವ್ಯಕ್ತಿತ್ವ

ಉಡುಪಿ ರೆಡ್​ಕ್ರಾಸ್​ ಘಟಕದ ಸಂಯೋಜಕ ಡಾ.ಗಣನಾಥ ಶೆಟ್ಟಿ ಎಕ್ಕಾರು ಮಾತನಾಡಿ, ದೈಹಿಕ, ಮಾನಸಿಕ ಹಾಗೂ ಸಾಂಸತಿಕವಾಗಿ ಬೆಳೆಯಲು ಕ್ರೀಡೆ ಸಹಕಾರಿ. ಆದರೆ, ಯುವಸಮುದಾಯವನ್ನು ಸಂಘಟಿಸುವುದೇ ಸಮಸ್ಯೆಯಾಗಿದೆ. ಹೊಸ ಶಿಕ್ಷಣ ನೀತಿಯಲ್ಲಿ ಕ್ರೀಡೆಗೆ ಹೆಚ್ಚಿನ ಮಹತ್ವ ನೀಡಿದ್ದರಿದ ಪರಿಪೂರ್ಣ ವ್ಯಕ್ತಿತ್ವ ರೂಪುಗೊಳ್ಳಲು ಯುವಜನತೆ ಇಂತಹ ಕ್ರೀಡಾಕೂಟಗಳಲ್ಲಿ ಭಾಗವಹಿಸಬೇಕು ಎಂದರು.

ವಿವಿಧ ಸ್ಫರ್ಧೆ

ಕ್ರೀಡಾಕೂಟದಲ್ಲಿ 15ರಿಂದ 29 ವರ್ಷದೊಳಗಿನ ಪುರುಷರಿಗೆ ವಾಲಿಬಾಲ್​, ಮಹಿಳೆಯರಿಗೆ ಖೋಖೋ ಆಯೋಜಿಸಲಾಗಿತ್ತು. ವೈಯಕ್ತಿಕ ವಿಭಾಗದಲ್ಲಿ ಪುರುಷರಿಗೆ ಬ್ಯಾಡ್ಮಿಂಟನ್​, ಭಾರ ಎತ್ತುವ ಸ್ಪರ್ಧೆ, ಮಹಿಳೆಯರಿಗೆ 100 ಮೀ. ಓಟ ಹಾಗೂ ಸ್ಲೋ ಸೈಕಲ್​ ಸ್ಪರ್ಧೆ ನಡೆದವು.

ನೆಹರು ಯುವ ಕೇಂದ್ರದ ಕಾರ್ಯಕ್ರಮ ಸಂಯೋಜಕಿ ಶ್ರೀದೇವಿ, ಬೆಳಪು ಸ್ಪೋರ್ಟ್ಸ್​ ಕ್ಲಬ್​ನ ಅಧ್ಯಕ್ಷ ಶಾನವಾಝ್​ ಫಜಲುದ್ದೀನ್​ ಉಪಸ್ಥಿತರಿದ್ದರು. ಉಡುಪಿ ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್​ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ತಾಲೂಕು ಕ್ರೀಡಾಧಿಕಾರಿ ವಸಂತ ಜೋಗಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net