ಆ.30ರಂದು ಜಿಲ್ಲಾಮಟ್ಟದ ವಿಜ್ಞಾನ ತರಂಗ ಸ್ಪರ್ಧೆ: ಅಧ್ಯಾಪನ ಪಬ್ಲಿಕ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಎಂ.ಜಿ.ದಿವ್ಯಶ್ರೀ ಮಾಹಿತಿ

District Level Science Wave Competition Mandya
Published on

ಮಂಡ್ಯ: ಅಧ್ಯಾಪನ ಪಬ್ಲಿಕ್ ಚಾರಿಟಬಲ್ ಟ್ರಸ್ಟ್, ಶಾಲಾ ಶಿಕ್ಷಣ ಇಲಾಖೆ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಇಂಡಿಯನ್ ಸೈನ್ಸ್ ರಿಸರ್ಚ್ ಆರ್ಗನೈಸೇಷನ್ ಸಂಸ್ಥೆ ಸಹಯೋಗದಲ್ಲಿ ಆ.30ರಂದು ನಗರದ ಮೇಲುಕೋಟೆ ರಸ್ತೆಯಲ್ಲಿರುವ ಎ ಆ್ಯಂಡ್ ಎ ಕನ್ವೆನ್‌ಷನ್ ಹಾಲ್‌ನಲ್ಲಿ ಜಿಲ್ಲಾಮಟ್ಟದ ವಿಜ್ಞಾನ ತರಂಗ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷೆ ಎಂ.ಜಿ.ದಿವ್ಯಶ್ರೀ ತಿಳಿಸಿದರು.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸಮಾರಂಭ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಹಾಗೂ ಸೆಸ್ಕ್ ಅಧ್ಯಕ್ಷ ಎ.ಬಿ.ರಮೇಶ ಬಂಡಿಸಿದ್ದೇಗೌಡ ಉಪಸ್ಥಿತರಿರುವರು. ಶಾಸಕ ರವಿಕುಮಾರ್ ಗಣಿಗ ಅಧ್ಯಕ್ಷತೆ ವಹಿಸಲಿದ್ದು, ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ, ಪಿ.ಎಂ.ನರೇಂದ್ರಸ್ವಾಮಿ, ಎಚ್.ಟಿ.ಮಂಜು, ಕೆ.ಎಂ.ಉದಯ್, ಎಂಎಲ್‌ಸಿ ದಿನೇಶ್ ಗೂಳಿಗೌಡ, ಮಧು ಜಿ.ಮಾದೇಗೌಡ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿ.ಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಗ್ಯಾರಂಟಿ ಯೋಜನೆ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷ ವೆಂಕಟರಮಣೇಗೌಡ, ಡಿಡಿಪಿಐ ಶಿವರಾಮೇಗೌಡ, ಇಸ್ತ್ರೋ ಹಿರಿಯ ವಿಜ್ಞಾನಿ ಪಿ.ವಿ.ಎನ್ ಮೂರ್ತಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

5 ರಿಂದ 10ನೇ ತರಗತಿಯ 3,100 ಮಕ್ಕಳು ನೋಂದಾಯಿಸಿಕೊಂಡಿದ್ದು, 350 ಸ್ವಯಂಸೇವಕರು ಸೇರಿ ಒಟ್ಟಾರೆ 4 ಸಾವಿರ ಜನರು ಭಾಗವಹಿಸಲಿದ್ದಾರೆ. ಪ್ರತಿ ತಾಲೂಕಿನಿಂದ 250 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡಿದ್ದು, ಬಹುಮಾನ ಪಡೆದ ವಿದ್ಯಾರ್ಥಿಗಳನ್ನು ಇಸ್ತ್ರೋದಲ್ಲಿ ನಡೆಯಲಿರುವ ಸ್ಪರ್ಧೆಯಲ್ಲಿ ಪ್ರತಿನಿಧಿಸಲಿದ್ದಾರೆ. ಬೆಳಗ್ಗೆ 9 ಗಂಟೆಗೆ ಸ್ಪರ್ಧಾ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ಮಧ್ಯಾಹ್ನ 2 ಗಂಟೆಗೆ ವೇದಿಕೆ ಸಮಾರಂಭವಿರಲಿದೆ ಎಂದು ವಿವರಿಸಿದರು.

ಪಿಇಎಸ್ ಪ್ರೌಢಶಾಲೆ, ಗೀತಾ, ಸಿಐಎಂಟಿ ಶಾಲೆಯ 50 ಜನ ಶಿಕ್ಷಕರು ತೀರ್ಪುಗಾರರಾಗಿ ಭಾಗವಹಿಸಲಿದ್ದು, ನಂತರ ನಡೆಯುವ ಅಂತಿಮ ಸ್ಪರ್ಧೆಯ ತೀರ್ಪುಗಾರರಾಗಿ ಮೈಸೂರು ವಿವಿಯಿಂದ ಪ್ರಾಧ್ಯಾಪಕರು ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಹ್ಯಾಕಥಾನ್ ಸ್ಪರ್ಧೆ ಕೂಡ ಇರಲಿದ್ದು, ವಿಷಯಗಳನ್ನೂ ಅವರೇ ಮಕ್ಕಳಿಸಿ ತಿಳಿಸಿ ಪ್ರದರ್ಶನ ಮಾಡಬೇಕಿರುತ್ತದೆ. ಇದಕ್ಕಾಗಿ ನಾವು ಯಾವುದೇ ಪರಿಕರಗಳನ್ನೂ ನೀಡುವುದಿಲ್ಲ. ಎಲ್ಲವನ್ನೂ ವಿದ್ಯಾರ್ಥಿಗಳೇ ತರಬೇಕಿದೆ. 5 ತಂಡಗಳಿಗೆ ಬೆಸ್ಟ್ ಹ್ಯಾಕಥಾನ್ ಎಂದು ಆಯ್ಕೆ ಮಾಡಿ ಬಹುಮಾನ ನೀಡಲಾಗುತ್ತದೆ ಎಂದರು.

ಟ್ರಸ್ಟ್‌ನ ಕಾರ್ಯದರ್ಶಿ ಜಿ.ಟಿ.ಪ್ರವೀಣ್‌ಕುಮಾರ್, ಪೃಥ್ವಿ, ಪ್ರಿಯಾಂಕಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net