ಕರ್ನಾಟಕದ ಗ್ಯಾರಂಟಿ ದೇಶಕ್ಕೆ ಮಾದರಿ: ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಹೇಳಿಕೆ

District level progress review meeting Mandya
Published on

ಮಂಡ್ಯ: ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆಯಂತೆ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ಕೂಡಲೇ ಪಂಚಗ್ಯಾರಂಟಿ ಯೋಜನೆ ಅನುಷ್ಠಾನಗೊಳಿಸುವಲ್ಲಿ ಯಶಸ್ವಿಯಾಗಿದ್ದೇವೆ. ಕರ್ನಾಟಕದ ಗ್ಯಾರಂಟಿ ಯೋಜನೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಮಾದರಿ ಯೋಜನೆಗಳಾಗಿವೆ ಎಂದು ಎಂಎಲ್‌ಸಿ ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಮಿನಿ ಸಭಾಂಗಣದಲ್ಲಿ ಆಯೋಜಿಸಿದ್ದ ಗ್ಯಾರಂಟಿ ಯೋಜನೆಯ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಳಸಮುದಾಯವರು ಸೇರಿದಂತೆ ಎಲ್ಲ ವರ್ಗದವರಿಗೆ ಗ್ಯಾರಂಟಿ ಯೋಜನೆ ಯಶಸ್ವಿಯಾಗಿ ತಲುಪುತ್ತಿವೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಇಡೀ ದೇಶಕ್ಕೆ ಮಾದರಿಯಾಗಿವೆ. ನಮ್ಮ ಸರ್ಕಾರದ ಈ ಮಹತ್ವಾಕಾಂಕ್ಷೆ ಯೋಜನೆಗಳ ಕುರಿತು ಫಲಾನುಭವಿಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮತ್ತಷ್ಟು ಪರಿಣಾಮಕಾರಿಯಾಗಿ ಆಗಬೇಕು ಎಂದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಮಂಡ್ಯ ಜಿಲ್ಲೆಯೊಂದಕ್ಕೆ 3,200 ಕೋಟಿ ರೂ ಬಿಡುಗಡೆ ಆಗಿದೆ. ಗ್ಯಾರಂಟಿ ಯೋಜನೆ ವಿರೋಧಿಸುವ ವಿರೋಧ ಪಕ್ಷದ ನಾಯಕರು, ಕಾರ್ಯಕರ್ತರು ಸಹ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಾಗಿದ್ದಾರೆ. ದೇಶಕ್ಕೆ ಮಾದರಿಯಾಗಿರುವ ಈ ಯೋಜನೆಯ ಬಗ್ಗೆ ಗ್ರಾಮ ಪಂಚಾಯತಿ ಮಟ್ಟದಲ್ಲಿ ಪ್ರಚಾರ ಕೈಗೊಳ್ಳಬೇಕು. ಈ ಯೋಜನೆಗೆ ನಮ್ಮ ಸರ್ಕಾರ 94 ಸಾವಿರ ಕೋಟಿ ರೂ ಖರ್ಚು ಮಾಡಿದೆ. ಇದರಿಂದಲೇ ದೇಶ, ವಿದೇಶದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ. ಗ್ಯಾರಂಟಿ ಯೋಜನೆಗಳಿಂದ ದೇಶದಲ್ಲೇ ಕರ್ನಾಟಕದ ತಲಾದಾಯ ನಂಬರ್ ಒನ್ ಆಗಿದೆ. ವಿರೋಧ ಪಕ್ಷದವರು ಟೀಕಿಸಿದರೂ ಸಾಮಾನ್ಯ ಜನರು ಸ್ವಾಗತಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ವಿಧಾನಸಭಾ ಕ್ಷೇತ್ರವಾರು ಗ್ಯಾರಂಟಿ ಸಮಾವೇಶ ಮಾಡುವ ಮೂಲಕ ಹಳ್ಳಿಹಳ್ಳಿಗಳಲ್ಲಿ ಸರ್ಕಾರದ ಸಾಧನೆ ಮುಟ್ಟಿಸಲಾಗುವುದು ಎಂದರು.

ಜಿಪಂ ಸಿಇಒ ಕೆ.ಆರ್.ನಂದಿನಿ ಮಾತನಾಡಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಂಬಂಧ ಇದುವರೆಗೂ 18 ಸಭೆ ನಡೆದಿವೆ. ಯೋಜನೆಗಳ ಅನುಷ್ಠಾನ ಸಂಬಂಧ ಯಾವುದೇ ಸಮಸ್ಯೆಗಳು ಕಂಡುಬಂದಲ್ಲಿ ಅವುಗಳನ್ನು ಪರಿಹರಿಸಲಾಗುತ್ತಿದೆ. ಜಿಲ್ಲೆಯಲ್ಲಿ ಐದು ಗ್ಯಾರಂಟಿ ಯೋಜನೆಯನ್ನು ಬಹಳ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲಾಗುತ್ತಿದೆ. ಯುವನಿಧಿ ಯೋಜನೆಗೆ ಸಂಬಂಧಿಸಿದಂತೆ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾಲೇಜು ಹಂತದಲ್ಲಿ ನೋಂದಣಿ ಹಮ್ಮಿಕೊಳ್ಳುವುದರ ಜತೆಗೆ ತರಬೇತಿ ಕೂಡ ನೀಡಲಾಗುತ್ತಿದೆ ಎಂದು ವಿವರಿಸಿದರು.

ಸಭೆಯಲ್ಲಿ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಚಿಕ್ಕಲಿಂಗಯ್ಯ, ಉಪಾಧ್ಯಕ್ಷರಾದ ಪ್ರಶಾಂತ್‌ಬಾಬು, ರಾಜೇಂದ್ರ, ಶಿವಣ್ಣ, ಹನುಮಂತಯ್ಯ, ಜಿಪಂನ ಮುಖ್ಯ ಯೋಜನಾಧಿಕಾರಿ ಧನುಷ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net