

ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆಗಳ ಜಿಲ್ಲಾ ಮಟ್ಟದಲ್ಲಿ ವಿವಿಧ ಅಭಿವೃದ್ಧಿ ಚಟುವಟಿಕೆಗಳ ತ್ವರಿತ ಅನುಷ್ಠಾನಕ್ಕಾಗಿ ಆಡಳಿತಾತ್ಮಕ, ತಾಂತ್ರಿಕ ಅನುಮತಿ ನೀಡಲು ಜಿಲ್ಲಾ ಮಟ್ಟದಲ್ಲಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಕಲ್ಯಾಣ ಖಾತೆ ಸಚಿವ ಓ.ಆರ್.ಕೇಳು ತಿಳಿಸಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಕಲ್ಯಾಣ ಇಲಾಖೆಗಳ ಜಿಲ್ಲಾ ಮಟ್ಟದ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿ ಮಟ್ಟದಲ್ಲಿ ಪರಿಶೀಲಿಸಲಾಗುವುದು. ತಾಂತ್ರಿಕ ಅನುಮೋದನೆ ನೀಡಲು ಸ್ಥಳೀಯ ಸ್ವ-ಆಡಳಿತ ಇಲಾಖೆ ಕಾರ್ಯಪಾಲಕ ಅಭಿಯಂತರರನ್ನೊಳಗೊಂಡ ತಜ್ಞರ ಸಮಿತಿ ನೇಮಿಸುವ ಪ್ರಸ್ತಾವನೆ ಪರಿಶೀಲನೆಯಲ್ಲಿದೆ. ನಿವೇಶನ ರಹಿತ ವಸತಿ ರಹಿತ ಕುಟುಂಬಗಳಿಗೆ ನಿವೇಶನ, ಹಕ್ಕುಪತ್ರ ದೊರಕಿಸಲು ಕ್ರಮಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಶಾಸಕರಾದ ಎನ್.ಎ ನೆಲ್ಲಿಕುನ್ನು, ಸಿ.ಎಚ್.ಕುಞಂಬು, ಎಂ.ರಾಜಗೋಪಾಲನ್, ಎ.ಕೆ.ಎಂ.ಅಶ್ರಫ್, ಇ.ಚಂದ್ರಶೇಖರನ್ ಅವರ ಪ್ರತಿನಿಧಿ ಪದ್ಮನಾಭನ್ ತಮ್ಮ ಕ್ಷೇತ್ರಗಳಲ್ಲಿನ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಸಮುದಾಯದ ವಿವಿಧ ಸಮಸ್ಯೆಗಳನ್ನು ಸಚಿವರಿಗೆ ಮನವರಿಕೆ ಮಾಡಿದರು.
ಜಿಪಂ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್, ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಬಿಪಿನ್‌ದಾಸ್, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಹೆಚ್ಚುವರಿ ನಿರ್ದೇಶಕ ಟಿ.ಸಜೀವನ್, ಪರಿಶಿಷ್ಟ ಜಾತಿ, ಪಂಗಡಗಳ ಅಭಿವೃದ್ಧಿ ಇಲಾಖೆ ಸಚಿವರ ಆಪ್ತ ಕಾರ್ಯದರ್ಶಿ ಶಿವಕುಮಾರ್, ಜಿಲ್ಲಾ ಪರಿಶಿಷ್ಟ ಜಾತಿ ಅಭಿವೃದ್ಧಿ ಅಧಿಕಾರಿ ರವಿರಾಜ್, ಕಾಸರಗೋಡು ಪರಿಶಿಷ್ಟ ಪಂಗಡ ಅಭಿವೃದ್ಧಿ ಅಧಿಕಾರಿ ಎಂ.ಮಲ್ಲಿಕಾ, ಪರಪ್ಪ ಪರಿಶಿಷ್ಟ ಪಂಗಡ ಅಭಿವೃದ್ಧಿ ಅಧಿಕಾರಿ ಎಂ.ಅಬ್ದುಲ್‌ಸಲಾಂ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕೋಯಿಕ್ಕೋಡ್ ಪ್ರಾದೇಶಿಕ ಅಧಿಕಾರಿ ಮತ್ತಿತರರು ಭಾಗವಹಿಸಿದ್ದರು.