

ರಾಯಚೂರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಜು.27ರಂದು ಬೆಳಗ್ಗೆ 11 ಗಂಟೆಗೆ ಲಿಂಗಸುಗೂರಿನ ವಿಜಯಮಹಾಂತೇಶ್ವರ ಶಾಖಾ ಮಠದಲ್ಲಿ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆಂದು ಸಂಘದ ಜಿಲ್ಲಾಧ್ಯಕ್ಷ ಆರ್.ಗುರುನಾಥ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜು.27ರಂದು ಬೆಳಗ್ಗೆ 10ಕ್ಕೆ ಪಟ್ಟಣದ ಬಸ್ ನಿಲ್ದಾಣದ ಬಳಿಯ ಬಿ.ಆರ್. ಅಂಬೇಡ್ಕರ ವೃತ್ತದಿಂದ ಮೆರವಣಿಗೆಯು ಆರಂಭವಾಗಲಿದೆ. ನಂತರ 11 ಗಂಟೆಗೆ ವೇದಿಕೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ಕಾರ್ಯಕ್ರಮದ ಸಾನಿಧ್ಯವನ್ನು ಸಿದ್ದಲಿಂಗ ಸ್ವಾಮೀಜಿ ವಹಿಸಲಿದ್ದಾರೆ. ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ನೆರವೇರಿಸಲಿದ್ದು, ಪ್ರಶಸ್ತಿ ಪ್ರದಾನವನ್ನು ಸಚಿವ ಎನ್.ಎಸ. ಬೋಸರಾಜು ಮಾಡಲಿದ್ದಾರೆ. ಆಶಯ ನುಡಿಗಳನ್ನು ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ನೀಡಲಿದ್ದಾರೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಜಿಲ್ಲೆಯ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ಜಿಲ್ಲಾ ಮಟ್ಟದ ಅಧಿಕಾರಿಗಳು, ವಾರ್ತಾ ಇಲಾಖೆಯ ಅಧಿಕಾರಿ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ್, ರಾಜ್ಯ ಸಮಿತಿ ಸದಸ್ಯ ಶಿವಮೂರ್ತಿ ಹಿರೆಮಠ, ನಗರ ಯೋಜನಾ ಪ್ರಾಧಿಕಾರ ಲಿಂಗಸುಗೂರು ಅಧ್ಯಕ್ಷ ಭುಪನಗೌಡ ಕರಡಕಲ್ ಭಾಗವಹಿಸಲಿದ್ದಾರೆ ಎಂದರು.
ವಾರ್ಷಿಕ ಪ್ರಶಸ್ತಿ
ಈ ಬಾರಿ ಇಬ್ಬರು ಪತ್ರಕರ್ತರಿಗೆ ವಿಶೇಷ ಪ್ರಶಸ್ತಿ,10 ಜನರಿಗೆ ವಾರ್ಷಿಕ ಹಾಗೂ ಒಬ್ಬರು ಪತ್ರಿಕಾ ವಿತರಕರಿಗೆ ವಾರ್ಷಿಕ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ. ಈ ಪೈಕಿ ದಿ.ಎನ್.ಕೆ.ಕುಲಕರ್ಣಿ ಸ್ಮರಣಾರ್ಥ ರಾಯಚೂರುವಾಣಿ ಪ್ರಾಯೋಜಿತ ಜೀವಮಾನ ಸಾಧನೆ ವಿಶೇಷ ಪ್ರಶಸ್ತಿಯನ್ನು ಸಂಪಾದಕ ಭೀಮರಾಯ ಹದ್ದಿನಾಳ ಹಾಗೂ ದಿ.ಶಿವಶಂಕರಗೌಡ ಯದ್ದಲದಿನ್ನಿ ಸ್ಮರಣಾರ್ಥ ವಿಶೇಷ ಪ್ರಶಸ್ತಿಯನ್ನು ಲಿಂಗಸೂಗೂರು ತಾಲೂಕಿನ ವಿಜಯವಾಣಿ ವರದಿಗಾರ ಎನ.ಬಸವರಾಜ ಅವರಿಗೆ ಪ್ರದಾನ ಮಾಡಲಾಗುವುದು.
ವಾರ್ಷಿಕ ಪ್ರಶಸ್ತಿಯನ್ನು ವಿಜಯವಾಣಿ ದೇವದುರ್ಗ ವರದಿಗಾರ ಅಮರೇಶ ಚಿಲ್ಕರಾಗಿ, ಹಟ್ಟಿ ವರದಿಗಾರ ಸುನೀಲ್ ಕುಮಾರ, ಪತ್ರಕರ್ತ ವಿಶ್ವನಾಥ ಹೂಗಾರ, ನೀಲಕಂಠಸ್ವಾಮಿ, ಹಿರಿಯ ವರದಿಗಾರ ಹೆಚ್. ವೀರನಗೌಡ, ನವೀನ್ ಕುಮಾರ, ಅಮರೇಶ ಸಾಲಿಮಠ, ರಾಘವೇಂದ್ರ, ಬಿ.ಮಲ್ಲಪ್ಪ, ಶಶಿಧರ ಕಂಚಿಮಠ ಮತ್ತು ಪತ್ರಿಕಾ ವಿತರಕ ವೀರೇಶ ಎಂ.ಕರಡಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಶಿವಪ್ಪ ಮಡಿವಾಳ, ಪ್ರಧಾನ ಕಾರ್ಯದರ್ಶಿ ಪಾಷಾ ಹಟ್ಟಿ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಸಿದ್ದಯ್ಯಸ್ವಾಮಿ ಕುಕುನೂರು ಇದ್ದರು.