

ಮಂಡ್ಯ: ನಿವೃತ್ತ ಐಎಎಸ್ ಅಧಿಕಾರಿ ಟಿ.ತಿಮ್ಮೇಗೌಡ ಅವರ ಬರೆದಿರುವ ಎಲ್ಲ ಪುಸ್ತಕದ ಬಗ್ಗೆ ಒಂದು ಅವಲೋಕನ ಕಾರ್ಯಕ್ರಮ ಮಾಡಿದರೆ, ಅದು ಯುವ ಜನತೆಗೆ ಪ್ರೇರಣೆಯಾಗಲಿದೆ ಎಂದು ಸಾಹಿತಿ ಡಾ.ಪ್ರದೀಪ್‌ಕುಮಾರ್ ಹೆಬ್ರಿ ಅಭಿಪ್ರಾಯಿಸಿದರು.
ನಗರದ ಕೃಷಿಕ್ ಸರ್ವೋದಯ ೌಂಡೇಷನ್ ಸಭಾಂಗಣದಲ್ಲಿ ಮಂಗಲ ಟಿ.ತಿಮ್ಮೇಗೌಡ ಪ್ರತಿಷ್ಠಾನ, ಕನ್ನಿಕಾ ಶಿಲ್ಪಾ ನವೋದಯ ಎಜುಕೇಷನ್ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಟಿ.ತಿಮ್ಮೇಗೌಡ ಅವರ ಆಡಳಿತ ಅಂಗಳದಲ್ಲಿ ಪುಸ್ತಕದ ಅವಲೋಕನ, ಸಾಹಿತ್ಯ ಶ್ರೀ ಪ್ರಶಸ್ತಿ ಪ್ರದಾನ ಹಾಗೂ ಜಿಲ್ಲಾಮಟ್ಟದ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಪುಸ್ತಕವನ್ನು ರಚಿಸಿ ಸುಮ್ಮನಿದ್ದರೆ ಸಾಲುವುದಿಲ್ಲ. ಬದಲಿಗೆ ಅದನ್ನು ಓದುವ ಮೂಲಕ ಸಂವಾದ ನಡೆಸಿದರೆ ಮಾತ್ರ ಓದುಗರನ್ನು ತಲುಪಲು ಸಾಧ್ಯ. ಸಂವಾದವು ವಿಷಯ ತಿಳಿಸುವ ಮೂಲಕ ಓದುಗರ ಸಂಖ್ಯೆಯನ್ನು ಹೆಚ್ಚಿಸಲಿದೆ ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಆಡಳಿತ ಅಂಗಳದಲ್ಲಿ ಪುಸ್ತಕದ ಲೇಖಕ ಟಿ.ತಿಮ್ಮೇಗೌಡ ಮಾತನಾಡಿ, ಸಂವಿಧಾನದಲ್ಲಿ ಕಾರ್ಯಾಂಗ, ನ್ಯಾಯಾಂಗ ಹಾಗೂ ಶಾಸಕಾಂಗವಿದೆ. ಇದರ ಬಗ್ಗೆ ಪುಸ್ತಕ ಬರೆದಿದ್ದೇನೆ. ಇಲ್ಲಿ ವಿವಿಧ ಆಯಾಮಗಳ ಆಡಳಿತವನ್ನು ಗಮನಿಸಿದ್ದೇನೆ. ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುವುದು ಮುಖ್ಯವಾಗಬೇಕು. ಈ ಹಿಂದೆ ಹಣ ನೀಡಿ ಯಾವ ಕೆಲಸವನ್ನು ತೆಗೆದುಕೊಳ್ಳುತ್ತಿರಲಿಲ್ಲ. ಆದರೆ ಈಗ ಇದು ಬದಲಾಗಿದ್ದು, ಕಾಂಚಾಣವಿಲ್ಲದೇ ಯಾವ ಕಾರ್ಯವೂ ನಡೆಯಲ್ಲ ಎಂದು ವಿಷಾದಿಸಿದರು.
ಕನ್ನಿಕಾ ಶಿಲ್ಪಾ ನವೋದಯ ಕೇಂದ್ರದ ಸಂಸ್ಥಾಪಕಿ ಡಾ.ಎಚ್.ಆರ್.ಕನ್ನಿಕಾ, ಪಿಇಟಿ ನಿರ್ದೇಶಕ ಡಾ.ರಾಮಲಿಂಗಯ್ಯ, ಟ್ರಸ್ಟ್‌ನ ಅಧ್ಯಕ್ಷ ಎ.ಸಿ.ರಮೇಶ್, ಎಚ್.ಟಿ.ರಾಮಕೃಷ್ಣ, ಕಾರಸವಾಡಿ ಮಹದೇವು, ಲಂಕೇಶ್ ಮಂಗಲ ಇತರರಿದ್ದರು. ಇದೇ ವೇಳೆ ಸಾಹಿತಿ ಶುಭಶ್ರಿ ಪ್ರಸಾದ್ ಅವರಿಗೆ ಸಾಹಿತ್ಯ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಂತೆಯೇ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು. ಬಳಿಕ ಕವಿ ಕೆ.ಪಿ.ಮೃತ್ಯುಂಜಯ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದ ಕವಿಗೋಷ್ಠಿ ನಡೆಯಿತು.