ಆರೋಗ್ಯವಂತ ಮಕ್ಕಳು ದೇಶದ ಆಸ್ತಿ

District level nutrition campaign
District level nutrition campaign
Published on

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಎಸ್.ಸಿದ್ದರಾಮಣ್ಣ ಹೇಳಿಕೆ


ವಿಜಯವಾಣಿ ಸುದ್ದಿಜಾಲ ಆನೇಕಲ್
ಆರೋಗ್ಯವಂತ ಮಕ್ಕಳು ಈ ದೇಶದ ಆಸ್ತಿಯಾಗಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಎಸ್.ಸಿದ್ದರಾಮಣ್ಣ ಹೇಳಿದರು.
ಪಟ್ಟಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಪೋಷಣ್ ಅಭಿಯಾನ ಮಾಸಾಚರಣೆ ಮತ್ತು ಸೀಮಂತ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಪೌಷ್ಟಿಕತೆಯಿಂದ ಬಳಲುತ್ತಿರುವವರಿಗೆ ಪೌಷ್ಟಿಕ ಆಹಾರ ನೀಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಲು, ಜಾಗೃತಿ ಮೂಡಿಸಲು ಪೋಷಣ್ ಅಭಿಯಾನ ರೂಪಿಸಲಾಗಿದೆ. ಭಾರತೀಯರು ಉತ್ತಮ ಆಹಾರ ಪದ್ಧತಿಯನ್ನು ಪುರಾತನ ಕಾಲದಿಂದಲೂ ಅಳವಡಿಸಿಕೊಂಡು ಬಂದಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಸೊಪ್ಪು ತರಕಾರಿ, ಹಣ್ಣುಗಳು, ಸಿರಿಧಾನ್ಯಗಳನ್ನು ಕಡಿಮೆ ಮಾಡಿ, ಜಂಕ್ ಫುಡ್ ಬಳಕೆಗೆ ಮಾರು ಹೋಗಿರುವ ಪರಿಣಾಮ ವಿವಿಧ ಆರೋಗ್ಯ ಸಮಸ್ಯೆ ಎದುರಿಸುವಂತಾಗಿದೆ ಎಂದರು.
ಮಕ್ಕಳು, ಬಾಣಂತಿಯರು, ಗರ್ಭೀಣಿಯರು ಪೌಷ್ಟಿಕ ಆಹಾರ ಸೇವಿಸುವ ಬಗ್ಗೆ ಜಾಗೃತಿ ಮೂಡಿಸಲು ಅಭಿಯಾನ ಉಪಯುಕ್ತವಾಗಿದೆ ಎಂದರು.
ತಾಲೂಕು ಶಿಶು ಅಭಿವೃದ್ಧಿ ಅಧಿಕಾರಿ ಕವಿತಾ ಮಾತನಾಡಿ, ಆನೇಕಲ್ ತಾಲೂಕಿನ ಎಲ್ಲ ಹೋಬಳಿಗಳಲ್ಲಿಯೂ ಪೋಷಣ್ ಅಭಿಯಾನ ನಡೆಸಲಾಗಿದೆ. ತಾಲೂಕು ಮಟ್ಟದಲ್ಲಿ ಕಾರ್ಯಕ್ರಮ ರೂಪಿಸಿ, ಎಲ್ಲರಿಗೂ ಪೌಷ್ಠಿಕತೆಯ ಮಹತ್ವವನ್ನು ತಿಳಿಸಿಕೊಡುವ ನಿಟ್ಟಿನಲ್ಲಿ ಅಭಿಯಾನ ಮಾಡಲಾಗಿದೆ. ಗರ್ಭಿಣಿಯರಿಗೆ ಸೀಮಂತ ಮಾಡುವ ಮೂಲಕ ಅವರಲ್ಲಿಯೂ ಆರೋಗ್ಯದ ಅರಿವನ್ನು ಮೂಡಿಸಲಾಗಿದೆ ಎಂದರು.
ತಾಲೂಕು ವೈದ್ಯಾಧಿಕಾರಿ ರವಿ ಮಾತನಾಡಿ, ಜನರಲ್ಲಿ ಆರೋಗ್ಯದ ಅರಿವು ಮೂಡಿಸಲು ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕರು ಶ್ರಮಿಸುತ್ತಿದ್ದಾರೆ. ಶಾಲೆಗಳಲ್ಲಿ ಮಕ್ಕಳಿಗೆ ಉತ್ತಮ ಆಹಾರ ದೊರೆಯುವ ನಿಟ್ಟಿನಲ್ಲಿ ಅಕ್ಷರ ದಾಸೋಹ ಯೋಜನೆ ಜಾರಿಯಲ್ಲಿದೆ. ಅಪೌಷ್ಠಿಕತೆಯುಳ್ಳ ಮಕ್ಕಳನ್ನು ಗುರುತಿಸಿ, ಅವರಿಗೆ ಅವಶ್ಯಕ ಔಷಧಿಗಳನ್ನು ಆರೋಗ್ಯ ಇಲಾಖೆಯ ಮೂಲಕ ಉಚಿತವಾಗಿ ನೀಡಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ವಿವಿಧ ಋತುಮಾನದಲ್ಲಿ ದೊರೆಯುವ ಹಣ್ಣು, ಸೊಪ್ಪು, ತರಕಾರಿಗಳನ್ನು ನಿಯಮಿತವಾಗಿ ಬಳಸುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು. ಇದರಿಂದ ಹಲವು ಆರೋಗ್ಯದ ಸಮಸ್ಯೆಗಳು ದೂರವಾಗುತ್ತವೆ. ವಿಟಮಿನ್, ಕ್ಯಾಲ್ಶಿಯಂ, ಪ್ರೊಟಿನ್‌ಯುಕ್ತ ಆಹಾರವನ್ನು ಸೇವಿಸಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net