

ಕೊಳ್ಳೇಗಾಲ: ಸಮಾಜ ಚಿಂತಕ, ಅಪ್ರತಿಮ ಹೋರಾಟಗಾರ ಪ್ರೊ.ನಂಜುಂಡಸ್ವಾಮಿ ಅವರ 89ನೇ ಹುಟ್ಟುಹಬ್ಬದ ಪ್ರಯುಕ್ತ ಜಿಲ್ಲಾ ಮಟ್ಟದ ಬೃಹತ್ ಸಮಾವೇಶವನ್ನು ಮೈಸೂರಿನ ಟೌನ್ ಹಾಲ್‌ನಲ್ಲಿ ಫೆ.13 ರಂದು ಮಧಾಹ್ನ 12 ಗಂಟೆಗೆ ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶೈಲೇಂದ್ರ ಹೇಳಿದರು.
ರೈತರ ಕಷ್ಟಗಳನ್ನು ನಿವಾರಿಸಲು ಭೂಮಿಗೆ ಬಂದ ಚೇತನ ಪ್ರೊ.ನಂಜುಂಡಸ್ವಾಮಿ ಅವರು ಈ ಬಾರಿ ಅವರ ಜನ್ಮ ದಿನದಂದು ಮೈಸೂರಿನಲ್ಲಿ ರೈತರ ಬೃಹತ್ ಸಮಾವೇಶ ದಿನವನ್ನಾಗಿ ಆಯೋಜಿಸಿದ್ದೇವೆ. ಇದಕ್ಕೆ ವಿವಿಧ ಜಿಲ್ಲೆಯ ರೈತರು ಭಾಗವಹಿಸಲಿದ್ದಾರೆ ಎಂದು ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಸಮಾವೇಶದಲ್ಲಿ ರೈತ ಸಂಘದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ಸಿಗಲಿದೆ. ಹೊಸತನದಲ್ಲಿ ಹಳ್ಳಿ-ಹಳ್ಳಿ ರೈತ ಸಂಘ ಎಂಬ ಕಿರು ಹೊತ್ತಿಗೆ ಬಿಡುಗಡೆ ಕಾರ್ಯಕ್ರಮ ನಡೆಸಲಾಗುತ್ತದೆ. ರೈತ ಮುಖಂಡ ಪುಟ್ಟಣ್ಣಯ್ಯ ಅವರ ಪುತ್ರ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸಮ್ಮುಖದಲ್ಲಿ ರೈತ ಪರವಾದ ಬಜೆಟ್ ಮಂಡನೆ ಬಗ್ಗೆ ಚರ್ಚಿಸಲಾಗುತ್ತದೆ. ಜತೆಗೆ ರೈತ ಪರ ಚಟುವಟಿಕೆಗಳ ಬಗ್ಗೆಯು ಮಾತುಕತೆ ನಡೆಯಲಿದೆ. ಈ ಮಹತ್ವದ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಆಗಮಿಸಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಾಸ್ಕರ್, ತಾಲೂಕು ಉಪಾಧ್ಯಕ್ಷ ಚಾರ್ಲಿ, ಪ್ರಧಾನ ಕಾರ್ಯದರ್ಶಿ ಪೆರಿಯಾನಾಯಗಂ, ತಾಲೂಕು ಕಾರ್ಯಾಧ್ಯಕ್ಷ ಜೋಯಲ್, ಬೂದಿತಿಟ್ಟು ಗ್ರಾಮ ಘಟಕ ಅಧ್ಯಕ್ಷ ರಾಜು, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜಾನ್, ಸತ್ತೇಗಾಲ ಗ್ರಾಮ ಘಟಕ ಅಧ್ಯಕ್ಷ ಮಹದೇವ, ಮೋಳೆ ರಾಜೇಂದ್ರ ಇದ್ದರು.