

ಮಂಡ್ಯ: ಡೆಂಘೆ ರೋಗ ನಿಯಂತ್ರಣ ಮಾಡಲು ಸಹಕರಿಸದಿದ್ದರೆ ದಂಡ ವಿಧಿಸಿ ಸೂಕ್ತ ಕ್ರಮ ಕೈಗೊಳ್ಳಿ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಡೆಂಘೆ ನಿಯಂತ್ರಣ ಕುರಿತ ಜಿಲ್ಲಾಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮನೆ ಮತ್ತು ವಾಣಿಜ್ಯ ಸಂಸ್ಥೆ, ಶಾಲಾ ಕಾಲೇಜು, ಹೋಟೆಲ್, ಕಟ್ಟಡ ನಿರ್ಮಾಣ ಕಾರ್ಯ, ಪಾಳು ಬಿದ್ದ ನಿವೇಶನ, ಖಾಲಿ ನಿವೇಶನಗಳಿಗೆ ಭೇಟಿ ನೀಡಿ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ. ಎಲ್ಲಾದರೂ ನೀರು ನಿಂತು ಸೊಳ್ಳೆಗಳು ಉತ್ಪತ್ತಿಯಾಗುವ ಸಾಧ್ಯತೆ ಇರುವ ಜಾಗಗಳು ಇದ್ದಲ್ಲಿ ಮಾಲೀಕರಿಗೆ ಸೊಳ್ಳೆಗಳ ನಿಯಂತ್ರಣ ಮಾಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ನೋಟಿಸ್ ಜಾರಿಗೊಳಿಸಿ ಎಂದು ಹೇಳಿದರು.
ನೋಟಿಸ್ ಜಾರಿ ಮಾಡಿದ ನಂತರವು ನಿರ್ದಿಷ್ಟ ಸಮಯದೊಳಗೆ ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದಿದ್ದಲಿ ಅಂತಹ ಮಾಲೀಕರಿಗೆ ದಂಡ ವಿಧಿಸಲಾಗುವುದು. ಮನೆಗಳ ಹೊರಾಂಗಣದಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ಕಂಡು ಬಂದರೆ ನಗರ ಪ್ರದೇಶದಲ್ಲಿ 800 ರೂ, ಗ್ರಾಮೀಣ ಪ್ರದೇಶದಲ್ಲಿ 400 ರೂ, ವಾಣಿಜ್ಯ ಸಂಸ್ಥೆಗಳು ಹಾಗೂ ಕಚೇರಿಗಳಲ್ಲಿ ಕಂಡು ಬಂದರೆ ನಗರ ಪ್ರದೇಶದಲ್ಲಿ 2000 ರೂ, ಗ್ರಾಮೀಣ ಪ್ರದೇಶದಲ್ಲಿ 1000 ರೂ, ನಿರ್ಮಾಣ ಕಾರ್ಯದಲ್ಲಿ ಕಂಡು ಬಂದರೆ ನಗರ ಪ್ರದೇಶದಲ್ಲಿ 4000 ರೂ, ಗ್ರಾಮೀಣ ಪ್ರದೇಶದಲ್ಲಿ 2000 ರೂ ದಂಡವನ್ನು ವಿಧಿಸಲಾಗುವುದು. ಆದಾಗ್ಯೂ ದಂಡದ ಮೊತ್ತ ಪಾವತಿಸದಿದಲ್ಲಿ ಪ್ರತಿ ದಿನಕ್ಕೆ ಶೇ.50 ಹೆಚ್ಚುವರಿ ದಂಡ ವಿಧಿಸಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಪ್ರಸ್ತುತ 103 ಡೆಂಘೆ, 11 ಚಿಕೂನ್ ಗುನ್ಯಾ ಪ್ರಕರಣ ದಾಖಲಾಗಿವೆ. ಹೆಚ್ಚಾಗಿ ವಲಸಿಗರಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚು ಕಂಡು ಬರುತ್ತಿವೆ. ಕಬ್ಬು ಕಟ್ಟಾವು ಮಾಡಲು 25 ಸಾವಿರಕ್ಕೂ ಹೆಚ್ಚಿನ ಜನರು ಜಿಲ್ಲೆಗೆ ಆಗಮಿಸಿದ್ದಾರೆ. ಅವರೆಲ್ಲರಿಗೂ ಕುಡಿಯುವ ನೀರಿನ ವ್ಯವಸ್ಥೆ, ಶೌಚಗೃಹದ ವ್ಯವಸ್ಥೆ, ಸೊಳ್ಳೆ ಪರದೆ ಹಾಗೂ ಇನ್ನಿತರ ಮೂಲ ಸೌಕರ್ಯ ಕಲ್ಪಿಸಬೇಕೆಂದು ಈಗಾಗಲೇ ಸಂಭಂದ ಪಟ್ಟ ಕಾರ್ಖಾನೆಗಳಿಗೆ ಸೂಚಿಸಲಾಗಿದೆ. ಆರೋಗ್ಯ ಇಲಾಖಾ ಅಧಿಕಾರಿಗಳು ವಲಸಿಗರಿರುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ವಲಸಿಗರಿಗೆ ಸರಿಯಾದ ಮೂಲ ಸೌಕರ್ಯ ನೀಡದಿರುವ ಕಾರ್ಖಾನೆಗಳ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲು ಮಾಡಿ. ಜಿಲ್ಲೆಯಲ್ಲಿ ಡೆಂಘೆಯಂತಹ ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಿ. ವಿಶೇಷ ಶಿಬಿರಗಳನ್ನು ಆಯೋಜಿಸಿ ಸಾರ್ವಜನಿಕರಿಗೆ ಅರಿವು ಮೂಡಿಸಿ ಎಂದು ತಿಳಿ ಹೇಳಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕುಮಾರ, ಡಿವಿಬಿಡಿಸಿ ಅಧಿಕಾರಿ ಕಾಂತರಾಜು, ಆರ್‌ಸಿಎಚ್ ಅಧಿಕಾರಿ ಡಾ.ಕೆ.ಪಿ.ಅಶ್ವಥ್, ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ.ಸೋಮಶೇಖರ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಬೆಟ್ಟಸ್ವಾಮಿ, ನಿವೃತ್ತ ಡಿಎಚ್‌ಒ ಡಾ.ಟಿ.ಎನ್.ಮರೀಗೌಡ ಇತರರಿದ್ದರು.