

ಮಂಡ್ಯ: ವಿವಿಧ ಯೋಜನೆಗೆ ಸಂಬಂಧಿಸಿದಂತೆ ಪ್ರೋತ್ಸಾಹಧನದ ಸೌಲಭ್ಯ ಪಡೆದುಕೊಂಡವರು ಆರ್ಥಿಕಾಭಿವೃದ್ಧಿ ಸಾಧಿಸಿರುವುದರ ಮಾಹಿತಿ ಸಂಗ್ರಹಿಸಿ ವರದಿ ಸಲ್ಲಿಸಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಉದ್ಯೋಗಿನಿ, ಅಂಗವಿಕಲ, ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಹಾಗೂ ಧನಶ್ರೀ ಯೋಜನೆಗೆ ಆರ್ಥಿಕ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿರುವ ಫಲಾನುಭವಿಗಳ ಆಯ್ಕೆಗಾಗಿ ಆಯೋಜಿಸಿದ್ದ ಜಿಲ್ಲಾಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು, ಸೌಲಭ್ಯಗಳು ಫಲಾನುಭವಿಗಳಿಗೆ ತಲುಪಿಯೂ ಅವರು ಆರ್ಥಿಕ ಅಭಿವೃದ್ಧಿ ಹೊಂದದಿದ್ದರೆ ಯೋಜನೆಗಳು ವಿಫಲವಾದಂತೆ. ಈ ಹಿನ್ನೆಲೆಯಲ್ಲಿ ಕಳೆದ ಮೂರು ವರ್ಷದಿಂದ ಯೋಜನೆಯಡಿ ಪ್ರೋತ್ಸಾಹಧನ ಪಡೆದಿರುವವರು ಆರ್ಥಿಕವಾಗಿ ಸಬಲರಾಗಿದ್ದಾರೆ ಎಂಬುದರ ಕುರಿತು ವರದಿ ಸಲ್ಲಿಸಿ ಸೂಚಿಸಿದರು.
ಸರ್ಕಾರದಿಂದ ಲಿಂಗತ್ವ ಅಲ್ಪಸಂಖ್ಯಾತರಿಗೆ ನೀಡಲಾಗುವ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಿ. ಉದ್ಯೋಗಿನಿ ಯೋಜನೆ, ಲಿಂಗತ್ವ ಅಲ್ಪಸಂಖ್ಯಾತರು, ಎಚ್‌ಐವಿ ಸೋಂಕಿತರು ಹಾಗೂ ಧಮನಿತ ಮಹಿಳೆಯರಿಗೆ ತಲಾ 3 ರಂತೆ ಒಟ್ಟು 9 ಅರ್ಹ ಫಲಾನುಭವಿಗಳಿಗೆ ಆಯ್ಕೆ ಮಾಡಲಾಗುವುದು. ಚೇತನ ಯೋಜನೆಯಡಿ ಧಮನಿತ ಮಹಿಳೆಯರು( ಲೈಂಗಿಕ ವೃತ್ತಿ ನಿರತ ಮಹಿಳೆಯರು) ಈಗಿರುವ ವೃತ್ತಿಯಿಂದ ಹೊರಬಂದು ಆರ್ಥಿಕ ಅಭಿವೃದ್ಧಿ ಹೊಂದಲು ಪ್ರೇರೆಪಿಸಲು ಜಿಲ್ಲೆಯಲ್ಲಿ 9 ಜನರಿಗೆ ತಲಾ 30000 ರೂ ಧನಸಹಾಯ ನೀಡಲು ಯೋಜನೆ ರೂಪಿಸಲಾಗಿದ್ದು, ಇದಕ್ಕೆ 23 ಜನ ಅರ್ಜಿ ಸಲ್ಲಿಸಿರುವುದಾಗಿ ತಿಳಿಸಿದರು.
ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆಯಡಿ ಲಿಂಗತ್ವ ಅಲ್ಪಸಂಖ್ಯಾತರು ಗೌರವಾನ್ವಿತ ಜೀವನ ನಡೆಸಲು ಹಾಗೂ ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಭೌತಿಕವಾಗಿ ಜಿಲ್ಲೆಯಲ್ಲಿ 30 ಜನರಿಗೆ ತಲಾ 30000 ರೂ ಆರ್ಥಿಕ ಚಟುವಟಿಕೆ ನಡೆಸಿ ಅಭಿವೃದ್ಧಿ ಹೊಂದಲು ಈ ಯೋಜನೆ ಪ್ರೇರೇಪಿಸುತ್ತದೆ. ಈಗಾಗಲೇ 19 ಜನ ಅರ್ಜಿ ಸಲ್ಲಿಸಿದ್ದಾರೆ. ಧನಶ್ರೀ ಯೋಜನೆಯಡಿ ಎಚ್‌ಐವಿ ಸೋಂಕಿತ ಮಹಿಳೆಯರು ಸ್ವ ಉದ್ಯೋಗ ಕೈಗೊಂಡು ಆರ್ಥಿಕ ಅಭಿವೃದ್ಧಿ ಕಾಣಲು ತಲಾ 30000 ರೂನಂತೆ 14 ಸೋಂಕಿತ ಮಹಿಳೆಯರಿಗೆ ಯೋಜನೆ ತಲುಪಿಸುವ ಭೌತಿಕ ಗುರಿ ಹೊಂದಲಾಗಿದೆ ಎಂದು ವಿವರಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಮಾತನಾಡಿ, ಯೋಜನೆಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಹೆಚ್ಚಾಗಬೇಕು. ಸ್ಥಳೀಯವಾಗಿ ಯಾವ ವ್ಯಾಪಾರದಿಂದ ಆರ್ಥಿಕ ಸ್ಥಿರತೆ ಕಾಣಬಹುದು. ವೈಜ್ಞಾನಿಕವಾಗಿ ಹೇಗೆ ಉದ್ಯಮದಲ್ಲಿ ಯಶಸ್ಸು ಕಾಣಬಹುದು ಎಂಬುದರ ಕುರಿತು ಜಿಲ್ಲೆಯ ಎಲ್ಲ ತಾಲೂಕಿನಲ್ಲಿ ಕಾರ್ಯಾಗಾರ ನಡೆಸಿ ಎಂದು ಸೂಚಿಸಿದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಜಮೂರ್ತಿ, ನಗರಸಭೆ ಪೌರಾಯುಕ್ತೆ ಪಂಪಾಶ್ರೀ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಸಿದ್ದಲಿಂಗೇಶ್ ಇತರರಿದ್ದರು.